ತಿರುವನಂತಪುರ: ಮದುವೆಯಾಗುವುದಾಗಿ ನಂಬಿಸಿ 68 ವರ್ಷದ ವೃದ್ಧನಿಗೆ ವಂಚನೆ ಮಾಡಿದ ಆರೋಪದ ಮೇಲೆ ನಿನ್ನೆಯಷ್ಟೇ ಬಂಧನವಾಗಿರುವ ಹನಿಟ್ರ್ಯಾಪ್ ನಿಪುಣೆ ಅಶ್ವಥಿ ಅಚು, ವಿಚಾರಣೆ ವೇಳೆ ಸಾಕಷ್ಟು ಮಾಹಿತಿ ಬಯಲಾಗಿದೆ.
ನರ್ಸ್ ಇದ್ದರೆ ಹೇಳು
ಈ ಬಾರಿ ಪೂವರ್ ಮೂಲದ ವಿಧುರ ಹಾಗೂ ನಿವೃತ್ತ ಬ್ಯಾಂಕ್ ಉದ್ಯೋಗಿಯಿಂದ ಹಣ ಸುಲಿಗೆ ಮಾಡಲು ಹೋಗಿ ಅಶ್ವಥಿ ಸಿಕ್ಕಿಬಿದ್ದಿದ್ದಾಳೆ. 68 ವರ್ಷದ ಸಂತ್ರಸ್ತ ತನ್ನ ವಿಕಲಾಂಗ ಮಗಳನ್ನು ನೋಡಿಕೊಳ್ಳಲು ಯಾರಾದರೂ ನರ್ಸ್ ಇದ್ದರೆ ಹೇಳು ಎಂದು ತನ್ನ ಸ್ನೇಹಿತ ಮೋಹನ್ ಎಂಬುವರಿಗೆ ಹೇಳಿದ್ದರು. ಬಳಿಕ ಸ್ನೇಹಿತ ಅಶ್ವಥಿ ಹೆಸರನ್ನು ಶಿಫಾರಸು ಮಾಡಿದ. ಸ್ನೇಹಿತನಿಗೆ ಆಕೆಯ ಬಗ್ಗೆ ಎಲ್ಲ ತಿಳಿದಿರುತ್ತದೆ ಎಂಬ ನಂಬಿಕೆಯಿಂದ ಓಕೆ ಎಂದು ಹೇಳಿದರು.
ಹಣ ಪಡೆದು ಎಸ್ಕೇಪ್
ಕೆಲಸಕ್ಕೆ ಸೇರಿದ ಅಶ್ವಥಿ ಎಲ್ಲರೊಂದಿಗೆ ಬೆರೆತ ಬಳಿಕ ವೃದ್ಧನಿಗೆ ಮದುವೆ ಆಗುವುದಾಗಿ ನಂಬಿಸಿದಳು. ಅಲ್ಲದೆ, ವಿಕಲಾಂಗ ಮಗಳನ್ನು ಚೆನ್ನಾಗಿ ನೋಡಿಕೊಳ್ಳುವುದಾಗಿ ಭರವಸೆ ನೀಡಿದಳು. ನನಗೆ 40 ಸಾವಿರ ರೂ. ಸಾಲ ಇದೆ ಅದನ್ನು ತೀರಿಸಿದರೆ ಮದುವೆ ಆಗುತ್ತೇನೆ ಎಂದು ಹೇಳಿದ್ದಾಳೆ. ಆಕೆಯ ಮಾತನ್ನು ನಂಬಿದ ವೃದ್ಧ ಮೊದಲ ಹಂತದಲ್ಲಿ 25 ಸಾವಿರ ರೂ. ನೀಡಿದ್ದಾರೆ. ಇದಾದ ಬಳಿಕ ರಿಜಿಸ್ಟರ್ ಮದುವೆ ಆಗಲು ಪೂವರ್ ಸಬ್ ರಿಜಿಸ್ಟ್ರಾರ್ ಕಚೇರಿಗೆ ಬಂದಾಗ ಮತ್ತೆ 15 ಸಾವಿರ ರೂ. ಹಣವನ್ನು ನೀಡಿದ್ದಾರೆ. ಈ ವೇಳೆ ಹಣ ಪಡೆದ ಅಶ್ವಥಿ ಫೋಟೋ ತೆಗೆಸಿಕೊಂಡು ಬರುವುದಾಗಿ ಹೇಳಿ ಅಲ್ಲಿಂದ ಪರಾರಿಯಾಗಿದ್ದಾಳೆ. ಆಕೆಯ ಫೋನ್ ನಂಬರ್ಗೆ ವೃದ್ಧ ಕರೆ ಮಾಡಿದರೂ ಸಂಪರ್ಕಕ್ಕೆ ಆಕೆ ಸಿಗಲಿಲ್ಲ. ಬಳಿಕ ವೃದ್ಧ ಠಾಣೆ ದೂರು ನೀಡಿದರು.
ಮದುವೆ ನೋಂದಣಿಗಾಗಿ ಅಶ್ವಥಿ ತನ್ನ ಆಧಾರ್ ಕಾರ್ಡ್‌ನ ಪ್ರತಿಯನ್ನು ನೀಡಿದ್ದಳು. ಇದನ್ನು ಪರಿಶೀಲಿಸಿದಾಗ ಆಕೆ ಈ ಹಿಂದೆಯೂ ಇದೇ ರೀತಿಯ ವಂಚನೆ ಮಾಡಿದ್ದಾಳೆ ಎಂದು ಪೊಲೀಸರಿಗೆ ತಿಳಿದುಬಂದಿದೆ. ಪೊಲೀಸರು ಆಕೆಯ ಫೋನ್‌ಗೆ ಕರೆ ಮಾಡಿದಾಗ, ತಾನು ಕೊಲ್ಲಂನಲ್ಲಿದ್ದೇನೆ ಎಂದು ಹೇಳಿದ್ದಾಳೆ. ಆದರೆ, ಸೈಬರ್ ಸೆಲ್ ಸಹಾಯದಿಂದ ಆಕೆಯನ್ನು ಮುತ್ತಡದ ಬಾಡಿಗೆ ಫ್ಲಾಟ್‌ನಿಂದ ಬಂಧಿಸಲಾಯಿತು.
ಬ್ಯಾಂಕ್ ಖಾತೆಯಿಂದ ಬಯಲು
ಬಸ್ ಚಾರ್ಜ್ಗಾಗಿ ಕೇವಲ 1000 ರೂಪಾಯಿ ಪಡೆದಿದ್ದು, ವೃದ್ಧನನ್ನು ಇಷ್ಟಪಡದ ಕಾರಣ ಮದುವೆಯಿಂದ ಹಿಂದೆ ಸರಿದಿರುವುದಾಗಿ ಆಕೆ ಮೊದಲು ಪೊಲೀಸರಿಗೆ ತಿಳಿಸಿದಳು. ಆದರೆ, ಬ್ಯಾಂಕ್ನಲ್ಲಿ ನಡೆದಿರುವ ಹಣ ವರ್ಗಾವಣೆಯ ಸಾಕ್ಷ್ಯಗಳನ್ನು ತೋರಿಸಿದಾಗ ಆಕೆ ತನ್ನ ಕೃತ್ಯವನ್ನು ಒಪ್ಪಿಕೊಂಡಿದ್ದಾಳೆ. ಅಶ್ವಥಿ ಕೊಲ್ಲಂನ ಆಯುರ್ ತುಳಮುಲಕ್ಕಲ್‌ನಲ್ಲಿರುವ ಅಶ್ವತಿ ಭವನದ ರಾಧಾಮಣಿ ಅವರ ಪುತ್ರಿ.