ಪಾಲಕ್ಕಾಡ್: ಕೇರಳದಲ್ಲಿ 75 ವರ್ಷಗಳಿಂದ ಅರಣ್ಯವಾಸಿಗಳು ಭೂರಹಿತರಾಗಿ ಉಳಿದಿರುವುದು ನಾಚಿಕೆಗೇಡಿನ ಸಂಗತಿ ಎಂದು ಕೇಂದ್ರ ಸಚಿವ ಅರ್ಜುನ್ ಮುಂಡ ಹೇಳಿದ್ದಾರೆ.
ಅರಣ್ಯವಾಸಿಗಳಿಗೆ ನೀಡಲು ಕೇರಳದಲ್ಲಿ ಭೂಮಿ ಇಲ್ಲವೇ ಎಂದು ಸಚಿವರು ಪ್ರಶ್ನಿಸಿದರು. ಅಟ್ಟಪಾಡಿಯಲ್ಲಿ ನಡೆದ ಕೇಂದ್ರದ ಅರಣ್ಯವಾಸಿ ಕಲ್ಯಾಣ ಯೋಜನೆಗಳ ಪರಿಶೀಲನಾ ಸಭೆಯಲ್ಲಿ ಸಚಿವರು ಮಾತನಾಡಿದರು.
ಕೇಂದ್ರ ಸಚಿವ ಅರ್ಜುನ್ ಮುಂಡ ನೇತೃತ್ವದಲ್ಲಿ ನಿನ್ನೆ ಪರಿಶೀಲನಾ ಸಭೆ ನಡೆದಿದ್ದು, ಅಟ್ಟಪಾಡಿ ಅರಣ್ಯವಾಸಿಗಳ ಕಲ್ಯಾಣಕ್ಕೆ ಕೇಂದ್ರ ಸರ್ಕಾರ ಕೋಟಿಗಟ್ಟಲೆ ಅನುದಾನ ಮೀಸಲಿಟ್ಟದ್ದರ ವಿನಿಯೋಗದ ಬಗ್ಗೆ ಪರಿಶೀಲಿಸಿದರು. ಹಣ ಬಳಕೆಗೆ ಸಂಬಂಧಿಸಿದಂತೆ ಸಚಿವರು ವಿವಿಧ ಇಲಾಖೆಗಳಿಂದ ವಿವರ ಕೇಳಿದರು. ಬುಡಕಟ್ಟು ಜನಾಂಗಗಳಿಗೆ ಕೇಂದ್ರದಿಂದ ಮೀಸಲಿಟ್ಟ ಹಣವನ್ನು ಕೇರಳ ಸಂಪೂರ್ಣವಾಗಿ ಬಳಸಿಕೊಳ್ಳುತ್ತಿಲ್ಲ ಎಂದ ಸಚಿವರು, ಅರಣ್ಯವಾಸಿಗಳು ವಲಸಿಗರಲ್ಲ, ಭೂಮಿಯ ವಾರಸುದಾರರು. ಕೇರಳದಲ್ಲಿ ಅರಣ್ಯವಾಸಿಗಳು ಭೂರಹಿತರಾಗಿ ಉಳಿಯಲು ಕಾರಣವೇನು ಎಂಬ ಸಚಿವರ ಪ್ರಶ್ನೆಗೆ ಉತ್ತರಿಸಿದ ಬುಡಕಟ್ಟು ನಿರ್ದೇಶಕ ವಿನಯ್ ಗೋಯಿಲ್, ಭೂಮಿ ಕಡಿಮೆ ಇದೆ ಎಂದರು. ಅರಣ್ಯವಾಸಿಗಳಿಗೆ ಮಾತ್ರ ನೀಡಲು ಕೇರಳದಲ್ಲಿ ಭೂಮಿ ಇಲ್ಲವೇ ಎಂದು ಈ ವೇಳೆ ಸಚಿವರು ಪ್ರಶ್ನಿಸಿದರು.
ಅಟ್ಟಪಾಡಿ ಶಿಶು ಮರಣ ಪ್ರಮಾಣ ಹೆಚ್ಚಳವಾಗದಂತೆ ತಡೆಯಲು ಏನು ಕ್ರಮ ಕೈಗೊಳ್ಳಲಾಗಿದೆ ಎಂದು ಜಿಲ್ಲಾ ವೈದ್ಯಾಧಿಕಾರಿಯನ್ನು ಸಚಿವರು ಕೇಳಿದರು. ಕೇರಳವು ಪ್ರಗತಿಪರ ಸಮಾಜವಾಗಿದೆ, ಆದರೆ ಅರಣ್ಯವಾಸಿಗಳ ಕಲ್ಯಾಣದ ವಿಷಯದಲ್ಲಿ ಹಾಗಲ್ಲ ಎಂದು ಸಚಿವರು ಟೀಕಿಸಿದರು. ಪರಿಶೀಲನಾ ಸಭೆಯಲ್ಲಿ ಜಿಲ್ಲಾಧಿಕಾರಿ ಸೇರಿದಂತೆ ಅಧಿಕಾರಿಗಳು ಭಾಗವಹಿಸಿದ್ದರು.