ಬೀಜಿಂಗ್ : ಜಿ7 ಶೃಂಗಸಭೆಯಲ್ಲಿ ಸದಸ್ಯ ರಾಷ್ಟ್ರಗಳು ಬಿಡುಗಡೆ ಮಾಡಿರುವ ಜಂಟಿ ಹೇಳಿಕೆಗೆ ಚೀನಾ ಆಕ್ಷೇಪ ವ್ಯಕ್ತಪಡಿಸಿದ್ದು, ತನ್ನ ಆಂತರಿಕ ವ್ಯವಹಾರಗಳಲ್ಲಿ ಹಸ್ತಕ್ಷೇಪ ಮಾಡುತ್ತಿರುವುದನ್ನು ಭಾನುವಾರ ಖಂಡಿಸಿದೆ.
ತೈವಾನ್, ಪೂರ್ವ ಮತ್ತು ದಕ್ಷಿಣ ಚೀನಾ ಸಮುದ್ರ ಪ್ರದೇಶದಲ್ಲಿ ಚೀನಾ ಅನುಸರಿಸುತ್ತಿರುವ ಆಕ್ರಮಣಕಾರಿ ನೀತಿ ಬಗ್ಗೆ ಕಳವಳ ವ್ಯಕ್ತಪಡಿಸಿದ್ದ ಜಿ7 ರಾಷ್ಟ್ರಗಳು, ಚೀನಾದೊಂದಿಗೆ ರಚನಾತ್ಮಕ ಮತ್ತು ಸ್ಥಿರ ಸಂಬಂಧಗಳನ್ನು ನಿರ್ಮಿಸಲು ಬಯಸುವುದಾಗಿ ಶನಿವಾರ ತಮ್ಮ ಜಂಟಿ ಹೇಳಿಕೆಯಲ್ಲಿ ತಿಳಿಸಿದ್ದವು.
ಜಿ7 ರಾಷ್ಟ್ರಗಳ ನಾಯಕರ ಶನಿವಾರದ ಸಭೆಯಲ್ಲಿ, ಚೀನಾದ ಆಕ್ರಮಣಾಕಾರಿ ನೀತಿಯು ಹೆಚ್ಚು ಚರ್ಚೆಗೊಳಪಟ್ಟಿತ್ತು.
ಟಿಬೆಟ್, ಹಾಂಗ್‌ಕಾಂಗ್ ಮತ್ತು ಕ್ಸಿನ್‌ಜಿಯಾಂಗ್ ಸೇರಿದಂತೆ ಚೀನಾದಲ್ಲಿನ ಮಾನವ ಹಕ್ಕುಗಳ ಉಲ್ಲಂಘನೆಯ ಬಗ್ಗೆ ಹಾಗೂ ಸಾವಿರಾರು ಉಯ್ಗರ್ ಮುಸ್ಲಿಮರನ್ನ ಕಾರ್ಮಿಕ ಶಿಬಿರಗಳಲ್ಲಿ ಬಲವಂತವಾಗಿ ಕೂಡಿಹಾಕಿರುವ ಬಗ್ಗೆಯೂ ಚೀನಾದ ವಿರುದ್ಧ ಆರೋಪ ಮಾಡಿದ್ದವು.
ಈ ಆರೋಪಕ್ಕೆ ಪ್ರತಿಕ್ರಿಯಿಸಿರುವ ಚೀನಾವು, 'ನಮ್ಮ ದೇಶದ ಸಾರ್ವಭೌಮತ್ವ ಮತ್ತು ಪ್ರಾದೇಶಿಕ ಸಮಗ್ರತೆಯನ್ನು ಕಾಪಾಡುವಲ್ಲಿ ಚೀನಾದ ಜನರ ನಿರ್ಣಯ, ಸಂಕಲ್ಪ ಮತ್ತು ಸಾಮರ್ಥ್ಯವನ್ನು ಯಾರೂ ಹೀಗಳೆಯಬಾರದು. ಅಂತೆಯೇ ಹಾಂಗ್‌ಕಾಂಗ್, ಕ್ಸಿನ್ ಜಿಯಾಂಗ್ ಮತ್ತು ಟಿಬೆಟ್‌ಗೆ ಸಂಬಂಧಿಸಿದ ವ್ಯವಹಾರಗಳು ಸಂಪೂರ್ಣವಾಗಿ ಚೀನಾದ ಆಂತರಿಕ ವ್ಯವಹಾರಗಳಾಗಿವೆ. ಮಾನವ ಹಕ್ಕುಗಳ ನೆಪದಲ್ಲಿ ಆ ವ್ಯವಹಾರಗಳಲ್ಲಿ ಯಾವುದೇ ಬಾಹ್ಯಶಕ್ತಿಯ ಹಸ್ತಕ್ಷೇಪವನ್ನು ಚೀನಾ ಸಹಿಸುವುದಿಲ್ಲ, ಇದನ್ನು ದೃಢವಾಗಿ ವಿರೋಧಿಸುತ್ತದೆ' ಎಂದು ಹೇಳಿಕೆಯಲ್ಲಿ ತಿಳಿಸಿದೆ.
'ಚೀನಾದ ಮೇಲೆ ಬಸಿ ಮಳಿಯಲು ಮತ್ತು ಅದರ ಆಂತರಿಕ ವ್ಯವಹಾರಗಳಲ್ಲಿ ಹಸ್ತಕ್ಷೇಪ ಮಾಡಿದ್ದನ್ನು ವಿರೋಧಿಸುತ್ತೇವೆ. ತೈವಾನ್ ಕುರಿತ ಸಮಸ್ಯೆಯನ್ನು ಪರಿಹರಿಸುವುದು ಚೀನಾದ ಆಂತರಿಕ ವಿಷಯವಾಗಿದೆ' ಎಂದು ಚೀನಾದ ವಿದೇಶಾಂಗ ಸಚಿವಾಲಯದ ವಕ್ತಾರ ಹೇಳಿಕೆಯಲ್ಲಿ ತಿಳಿಸಿದ್ದಾರೆ.
'ಜಿ7 ಸದಸ್ಯ ರಾಷ್ಟ್ರಗಳು ತಮ್ಮ ದೇಶಗಳ ಆಂತರಿಕ ಸಮಸ್ಯೆಗಳನ್ನು ಪರಿಹರಿಸಲು ಗಮನಹರಿಸಬೇಕು. ಇತರ ದೇಶಗಳನ್ನು ಒಳಗೊಂಡಂತೆ ವಿಶೇಷವಾದ ಗುಂಪುಗಳನ್ನು ರಚಿಸುವುದನ್ನು ನಿಲ್ಲಿಸಿ. ಬಣಗಳು ನಡುವೆ ಪ್ರಚೋದನೆಯನ್ನು ನಿಲ್ಲಿಸಿ, ಸೂಕ್ತ ಸಂವಾದ ಮತ್ತು ಸಹಕಾರದ ಹಾದಿಗೆ ಮರಳಬೇಕು' ಎಂದೂ ವಕ್ತಾರ ತಮ್ಮ ಹೇಳಿಕೆಯಲ್ಲಿ ಹೇಳಿದ್ದಾರೆ.