ಆರೋಗ್ಯ ಕಾಪಾಡಿಕೊಳ್ಳಲು ಬಹುಮುಖ್ಯವಾಗಿ ಮಾಡಬೇಕಾಗಿರುವುದು ಕೈ ತೊಳೆಯುವುದು. ಕೊರೊನಾ ಸಮಯದಲ್ಲಿ ಕೈಗಳನ್ನು ಆಗಾಗ ತೊಳೆಯಿರಿ ಎಂದು ಆರೋಗ್ಯ ಇಲಾಖೆ ಸಲಹೆ ನೀಡಿತ್ತು. ಕೈಗಳನ್ನು ಎಷ್ಟು ಶುಚಿಯಾಗಿ ಇಟ್ಟುಕೊಳ್ಳುತ್ತೇವೋ ಸೋಂಕು, ಬ್ಯಾಕ್ಟಿರಿಯಾಗಳನ್ನು ದೂರವಿಡಬಹುದು. ಮಕ್ಕಳು ಆಗಾಗ ಕಾಯಿಲೆ ಬೀಳುವುದನ್ನು ತಡೆಗಟ್ಟಲು ಮಕ್ಕಳ ಕೈಯನ್ನು ಸ್ವಚ್ಛವಾಗಿಡಬೇಕು.
5 ವರ್ಷದೊಳಗಿನ ಮಕ್ಕಳಿಗೆ ಕೈಯನ್ನು ಬಾಯಿಗೆ ಹಾಕುವ ಅಭ್ಯಾಸ ಅಧಿಕವಿರುತ್ತದೆ. ಕೈಯಲ್ಲಿ ಸೋಂಕಾಣುಗಳಿದ್ದರೆ ಬಾಯಿಯೊಳಗಡೆ ಹಾಕುವುದರಿಂದ ಆಗಾಗ ಕಾಯಿಲೆ ಬೀಳುತ್ತಾರೆ, ಆದ್ದರಿಂದ ಅವರ ಕೈಗಳನ್ನು ಆಗಾಗ ತೊಳೆಯಬೇಕು. ಮೇ. 5 ರಂದು ಕೈ ಶುಚಿತ್ವ ದಿನವನ್ನು ಆಚರಿಸಲಾಗುವುದು. ಕೈಗಳು ಶುಚಿಯಾಗಿರಲು ಸೋಪ್ ಹಚ್ಚಿ ತೊಳೆದರೆ ಸಾಕಾಗಲ್ಲ, ಕೈಗಳನ್ನು ಸರಿಯಾಗಿ ವಿಧಾನದಲ್ಲಿ ತೊಳೆಯಬೇಕು, ಕೈ ಶುಚಿಯಾಗಿರಬೇಕು ಎಂದರೆ ನೀವು ಈ ಸ್ಟೆಪ್ ಅನುಸರಿಸಬೇಕು ನೋಡಿ:
ಕೈಗಳ ಶುಚಿತ್ವದ ಬಗ್ಗೆ ಜನರ ಈ ವರ್ತನೆಯಿಂದಾಗಿ ಸೋಂಕಾಣುಗಳು ಹೆಚ್ಚಾಗಿ ಹರಡುವುದು:
* ವಿಶ್ವದಲ್ಲಿ ಐವರಲ್ಲಿ ಒಬ್ಬರಷ್ಟೇ ಬಾತ್‌ರೂಂ, ಟಾಯ್ಲೆಟ್‌ಗೆ ಹೋಗಿ ಬಂದ ಮೇಲೆ ಕೈ ತೊಳೆಯುತ್ತಾರೆ.
* ಹ್ಯಾಂಡ್‌ಶೇಕ್ ಮಾಡುವುದರಿಂದ ಒಬ್ಬರ ಕೈಗಳಲ್ಲಿರುವ ಸೋಂಕಾಣು ಮತ್ತೊಬ್ಬರಿಗೆ ಹರಡುವುದು
* ಶೇ. 61ರಷ್ಟು ಆರೋಗ್ಯ ಕಾರ್ಯಕರ್ತರು ತಮ್ಮ ಕೈಗಳನ್ನು ಸರಿಯಾದ ರೀತಿಯಲ್ಲಿ ಶುಚಿಗೊಳಿಸುವುದಿಲ್ಲ
* ಒದ್ದೆ ಕೈಯಲ್ಲಿ ಬ್ಯಾಕ್ಟಿರಿಯಾ ಹರಡುವ ಸಾಧ್ಯತೆ ಹೆಚ್ಚು.
* ಬ್ಯಾಕ್ಟಿರಿಯಾ ಕೈಯಲ್ಲಿದ್ದರೆ 3 ಗಂಟೆಯವರೆಗೆ ಜೀವಂತವಾಗಿರಲಿದೆ.
ಆದರೆ ಜನರು ಕೈಗಳ ಶುಚಿತ್ವದ ಕಡೆಗೆ ಅಧಿಕ ಗಮನವನ್ನೇ ನೀಡುವುದಿಲ್ಲ. ಕೈಗಳನ್ನು ಸರಿಯಾಗಿ ಶುಚಿಗೊಳಿಸಿದ್ದೇನೆ ನೀವು ಹೇಳುವುದಾದರೆ ಈ 7 ಸ್ಟೆಪ್ ಫಾಲೋ ಮಾಡಿರಲೇಬೇಕು ನೋಡಿ:
ಸ್ಟೆಪ್ 1: ಕೈಗಳನ್ನು ಒದ್ದೆ ಮಾಡುವುದು
ಕೈಗಳನ್ನು ನೀರಿನಲ್ಲಿ ನೆನೆಸಿ, ಸೋಪು ಹಚ್ಚಿ
ಸ್ಟೆಪ್ 2: ಅಂಗೈಗಳನ್ನು ತಿಕ್ಕಿ, ಕೈಗಳ ಮೇಲ್ಭಾಗ, ಬೆರಳುಗಳನ್ನು ಚೆನ್ನಾಗಿ ತಿಕ್ಕಿ.
ಸ್ಟೆಪ್ 3: ಅಂಗೈ ಹಿಂಬದಿ ತಿಕ್ಕಿ
ಎಡಗೈ ಬಳಸಿ ಬಲಗೈಯ ಹಿಂಬದಿ, ಬಲಗೈಯ ಬಳಸಿ ಎಡಗೈ ಹಿಂಬದಿ, ಬೆರಳುಗಳನ್ನು ತಿಕ್ಕಿ.
ಸ್ಟೆಪ್ 4: ಕೈಗಳನ್ನು ಜೋಡಿಸಿ
ಎರಡು ಕೈಯ ಕೈಬೆರಳನ್ನು ಜೋಡಿಸಿ ತಿಕ್ಕಿ
ಸ್ಟೆಪ್ 5: ಬೆರಳಗಳನ್ನು ಮಡಚಿ, ಅದರ ಮೇಲ್ಭಾಗವನ್ನು ಮತ್ತೊಂದು ಕೈಯಿಂದ ಸೋಪು ಹಚ್ಚಿ ತಿಕ್ಕಿ
ಸ್ಟೆಪ್ 6: ಹೆಬ್ಬರಳು ಸ್ವಚ್ಛ ಮಾಡಿ
ಬಲಗೈ ಹಾಗೂ ಎಡಗೈ ಹೆಬ್ಬರಳನ್ನು ಸ್ವಚ್ಚಗೊಳಿಸಿ
ಸ್ಟೆಪ್ 7: ಅಂಗೈಯನ್ನು ನಿಮ್ಮ ಉಗುರುಗಳಿಂದ ಸ್ವಚ್ಛಗೊಳಿಸಿ
ನಂತರ ನೀರಿನಲ್ಲಿ ತೊಳೆಯಿರಿ.
ಕೈಗಳನ್ನು ತೊಳೆದ ಬಳಿಕ ಕೈಗಳನ್ನು ಒಣಗಿಸಿ
ಕೈಗಳನ್ನು ತೊಳೆದ ಬಳಿಕ ಕೈಗಳನ್ನು ಒದ್ದೆ ಇಡಬೇಡಿ, ಟವಲ್ ಅಥವಾ ಟಿಶ್ಯೂವಿನಿಂದ ಒರೆಸಿ ಸ್ವಚ್ಛಗೊಳಿಸಿ. ಈ ರೀತಿ ಸ್ವಚ್ಛ ಮಾಡುವುದರಿಂದ ಬ್ಯಾಕ್ಟಿರಿಯಾ ಹರಡುವುದನ್ನು ತಡೆಗಟ್ಟಬಹುದು.
ಊಟಕ್ಕೆ ಮೊದಲು ಹಾಗೂ ನಂತರ ಕೈಗಳನ್ನು ತೊಳೆಯಬೇಕು
ಯಾವುದೇ ಆಹಾರ ಸೇವಿಸುವ ಮುನ್ನ ಹಾಗೂ ಸೇವಿಸಿದ ನಂತರ ಕೈಗಳನ್ನು ಚೆನ್ನಾಗಿ ತೊಳೆಯಬೇಕು.
ಟಾಯ್ಲೆಟ್‌ಗೆ ಹೋಗುವ ಮುನ್ನ ಹೋಗಿ ಬಂದ ಮೇಲೆ ಕೈಗಳನ್ನು ತೊಳೆಯಿರಿ
ಟಾಯ್ಲೆಟ್ ಹೋಗಿ ಬಂದರೆ ಕೈಗಳನ್ನು ಸೋಪು ಹಚ್ಚಿ ಚೆನ್ನಾಗಿ ತೊಳೆದು ಟಿಶ್ಯೂವಿನಿಂದ ಒರೆಸಬೇಕು.
ಆಗಾಗ ಸೋಪು ಹಚ್ಚಿ ಕೈ ತೊಳೆಯುತ್ತಾ ಇರುವುದರಿಂದ ಸೊಂಕಾಣು ದೂರವಿಡಬಹುದು.