ಭುವನೇಶ್ವರ: 86 ವರ್ಷದ ವಿಧವೆಗೆ ಕೊನೆಗೂ ನ್ಯಾಯ ಸಿಕ್ಕಿದೆ. ಅಂದರೆ ಪತಿ ಸಾವಿನ ಬಳಿಕ ಸಿಗಬೇಕಾದ ಪಿಂಚಣಿಗೆ ಕೊನೆಗೂ ಆತ ಸತ್ತ 49 ವರ್ಷಗಳ ಬಳಿಕ ವ್ಯವಸ್ಥೆ ಆಗಿದೆ. ಒಡಿಶಾ ಹೈಕೋರ್ಟ್ ಆದೇಶದೊಂದಿಗೆ ಈ ಪ್ರಕರಣ ಇತ್ಯರ್ಥಗೊಂಡಿದೆ.
ಭುವನೇಶ್ವರ: 86 ವರ್ಷದ ವಿಧವೆಗೆ ಕೊನೆಗೂ ನ್ಯಾಯ ಸಿಕ್ಕಿದೆ. ಅಂದರೆ ಪತಿ ಸಾವಿನ ಬಳಿಕ ಸಿಗಬೇಕಾದ ಪಿಂಚಣಿಗೆ ಕೊನೆಗೂ ಆತ ಸತ್ತ 49 ವರ್ಷಗಳ ಬಳಿಕ ವ್ಯವಸ್ಥೆ ಆಗಿದೆ. ಒಡಿಶಾ ಹೈಕೋರ್ಟ್ ಆದೇಶದೊಂದಿಗೆ ಈ ಪ್ರಕರಣ ಇತ್ಯರ್ಥಗೊಂಡಿದೆ.
ಸುಭಾಷಿಣಿ ಪಟ್ನಾಯಕ್ ಎಂಬವರು ತಮ್ಮ ಪತಿ ಶರತ್ಚಂದ್ರ ಪಟ್ನಾಯಕ್ ಅವರ ಸಾವಿನ ಬಳಿಕ ಸಿಗಬೇಕಾದ ಕೌಟುಂಬಿಕ ಪಿಂಚಣಿ ಲಭ್ಯವಾಗದೆ ಹೈಕೋರ್ಟ್ ಮೊರೆ ಹೋಗಿದ್ದರು. ಈ ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಲಯ, ಸುಭಾಷಿಣಿಗೆ ಪಿಂಚಣಿ ನೀಡುವಂತೆ ತೀರ್ಪಿತ್ತು ಒಡಿಶಾ ಸರ್ಕಾರಕ್ಕೆ ಆದೇಶ ಮಾಡಿದೆ.
ಶರತ್ಚಂದ್ರ ಅವರು 1948ರ ಆ. 1ರಂದು ಮಹಗಾಬ್ನ ಲೋಕನಾಥ್ ಮಿಡಲ್ ಇಂಗ್ಲಿಷ್ ಸ್ಕೂಲ್ ಎಂಬ ಅನುದಾನಿತ ಶಿಕ್ಷಣ ಸಂಸ್ಥೆಯಲ್ಲಿ ಸಹಾಯಕ ಶಿಕ್ಷಕರಾಗಿ ನೇಮಕಗೊಂಡಿದ್ದರು. ಆದರೆ 1974ರ ಜ. 8ರಂದು ಸಾವಿಗೀಡಾದರು. ಕಾನೂನಾತ್ಮಕ ತೊಂದರೆ ಎಂದು ಹೇಳಿ ಪಿಂಚಣಿ ನೀಡಲು ನಿರಾಕರಿಸಿದ್ದರಿಂದ ಸುಭಾಷಿಣಿ 2003ರಲ್ಲಿ ಹೈಕೋರ್ಟ್ ಮೆಟ್ಟಿಲೇರಿದ್ದರು.
ಅನುದಾನಿತ ಪ್ರಾಥಮಿಕ ಶಾಲಾ ಶಿಕ್ಷಕರಿಗೆ 1982ರ ಏಪ್ರಿಲ್ 1ರಿಂದ ಪಿಂಚಣಿ ಆರಂಭವಾಗಿತ್ತು. ಅದರಲ್ಲೂ ಶಿಕ್ಷಕರ ಕುಟುಂಬಸ್ಥರಿಗೆ ಕೌಟುಂಬಿಕ ಪಿಂಚಣಿ ವ್ಯವಸ್ಥೆ ಆರಂಭಗೊಂಡಿದ್ದು 1988ರ ಸೆ. 1ರಂದು ಎಂದು ಹೇಳುವ ಮೂಲಕ ಈ ಪ್ರಕರಣದಲ್ಲಿ ಪಿಂಚಣಿ ನೀಡಲಾಗುವುದಿಲ್ಲ ಎಂದು ಸರ್ಕಾರದವರು ತಳ್ಳಿಹಾಕಿದ್ದರು.
ಅರ್ಜಿದಾರರ ಪತಿ ಸಾಯದೇ ಇದ್ದಿದ್ದರೆ, ಅವರು ಏಪ್ರಿಲ್ 1986ರಲ್ಲಿ, ಅಂದರೆ ಏಪ್ರಿಲ್ 1, 1982ರ ನಂತರ ನಿವೃತ್ತರಾಗುತ್ತಿದ್ದರು. ಅದರಂತೆ, ಅವರು 1981ರ ನಿಯಮಗಳ ಪ್ರಕಾರ ಪಿಂಚಣಿ ಪಡೆಯಲು ಅರ್ಹರಾಗಿರುತ್ತಿದ್ದರು. ಹೀಗಾಗಿ ಅರ್ಜಿದಾರರು ಕುಟುಂಬ ಪಿಂಚಣಿಯಿಂದ ವಂಚಿತರಾಗಲು ಸಾಧ್ಯವಿಲ್ಲ ಎಂದು ಹೈಕೋರ್ಟ್ ಆದೇಶಿಸಿದೆ.