ನವದೆಹಲಿ: ತೀವ್ರ ಆರ್ಥಿಕ ಬಿಕ್ಕಟ್ಟಿನಿಂದ ತತ್ತರಿಸುತ್ತಿರುವ ಗೋ ಫಸ್ಟ್ ಏರ್‌ಲೈನ್ಸ್ ಮೇ 15ರವರೆಗೆ ಟಿಕೆಟ್ ಮಾರಾಟವನ್ನು ಸ್ಥಗಿತಗೊಳಿಸಿದೆ. ಸದ್ಯ, ಇರುವ ಬುಕಿಂಗ್‌ಗಳ ರದ್ದು ಮತ್ತು ಮುಂದಿನ ದಿನಾಂಕಕ್ಕೆ ಮರುಹೊಂದಿಸುವ ಕಾರ್ಯದಲ್ಲಿ ಸಂಸ್ಥೆ ತೊಡಗಿದೆ ಎಂದು ನಾಗರಿಕ ವಿಮಾನಯಾನ ಮಹಾನಿರ್ದೆಶನಾಲಯವು(ಡಿಜಿಸಿಎ) ಪ್ರಕಟಣೆಯಲ್ಲಿ ತಿಳಿಸಿದೆ.
ಮೇ 3ರಿಂದ ದಿಢೀರನೆ ಮೂರು ದಿನಗಳ ಕಾಲ ವಿಮಾನಗಳ ಸಂಚಾರವನ್ನು ರದ್ದುಪಡಿಸಿದ ಹಿನ್ನೆಲೆಯಲ್ಲಿ ಡಿಜಿಸಿಎ ಈಗಾಗಲೇ ಗೋ ಫಸ್ಟ್ ಏರ್‌ಲೈನ್ಸ್‌ಗೆ ಶೋಕಾಸ್ ನೋಟಿಸ್ ನೀಡಿತ್ತು.
ನೋಟಿಸ್‌ಗೆ ಗೋಫಸ್ಟ್ ಪ್ರತಿಕ್ರಿಯೆ ನೀಡಿದ ಕೂಡಲೇ ಪ್ರಚಲಿತ ವಿಮಾನಯಾನ ನಿಯಮಗಳ ಅಡಿ ನಿಗದಿತ ಸಮಯದಲ್ಲಿ ಪ್ರಯಾಣಿಕರಿಗೆ ಟಿಕೆಟ್ ಹಣ ಮರುಪಾವತಿಸುವಂತೆ ಡಿಜಿಸಿಎ ಸೂಚಿಸಿದೆ.
ಯಾವುದೇ ಪೂರ್ವ ಸೂಚನೆಯಿಲ್ಲದೆ ಏಕಾಏಕಿ ಗೋ ಫಸ್ಟ್ ತೆಗೆದುಕೊಂಡ ನಿರ್ಧಾರದಿಂದಾಗಿ ಪ್ರಯಾಣಿಕರಿಗೆ ಆಗಿರುವ ಅನಾನುಕೂಲ ತಗ್ಗಿಸುವ ಪ್ರಯತ್ನದಲ್ಲಿ ತೊಡಗಿರುವುದಾಗಿ ಅದು ತಿಳಿಸಿದೆ.
ಈ ನಡುವೆ ಕಾರ್ಯಾಚರಣಾ ಕಾರಣಗಳಿಂದಾಗಿ ಮೇ 9ರವರೆಗೆ ವಿಮಾನಯಾನ ಸೇವೆ ರದ್ದುಪಡಿಸಿರುವುದಾಗಿ ಗೋ ಫಸ್ಟ್ ಪ್ರತ್ಯೇಕ ಪ್ರಕಟಣೆಯಲ್ಲಿ ಹೇಳಿದೆ.
'ಕಾರ್ಯಾಚರಣೆಯ ಕಾರಣಗಳಿಂದಾಗಿ ಮೇ 9,2023ರವರೆಗೆ ನಿಗದಿಪಡಿಸಲಾದ ಗೋ ಫಸ್ಟ್ ವಿಮಾನಗಳ ಹಾರಾಟವನ್ನು ರದ್ದುಗೊಳಿಸಲಾಗಿದೆ ಎಂದು ತಿಳಿಸಲು ನಾವು ವಿಷಾದಿಸುತ್ತೇವೆ. ಶೀಘ್ರದಲ್ಲೇ ಪಾವತಿಯ ಮೂಲ ವಿಧಾನದಂತೆ ಪೂರ್ಣ ಮರುಪಾವತಿಯನ್ನು ಮಾಡಲಾಗುವುದು' ಎಂದು ಸಂಸ್ಥೆ ಹೇಳಿದೆ.