ಡೆಹ್ರಾಡೂನ್: ಈ ವರ್ಷ ಉತ್ತರಾಖಂಡ ಪ್ರೌಢಶಾಲೆ-ಇಂಟರ್‌ಮೀಡಿಯೇಟ್ ಪರೀಕ್ಷೆಯಲ್ಲಿ 9,699 ವಿದ್ಯಾರ್ಥಿಗಳು ಹಿಂದಿ ಬೋರ್ಡ್ ಪರೀಕ್ಷೆಗಳಲ್ಲಿ ಅನುತ್ತೀರ್ಣರಾಗಿದ್ದಾರೆ. ಈ ಪೈಕಿ ಪ್ರೌಢಶಾಲೆಯ 3263 ಹುಡುಗರು ಮತ್ತು 1721 ಹುಡುಗಿಯರು ಹಾಗೂ ಇಂಟರ್‌ಮೀಡಿಯೇಟ್‌ನ 2923 ವಿದ್ಯಾರ್ಥಿಗಳು ಮತ್ತು 1792 ವಿದ್ಯಾರ್ಥಿನಿಯರು ಸೇರಿದ್ದಾರೆ.
ಪ್ರೌಢ ಶಿಕ್ಷಣ ಪರಿಷತ್ತಿನ ಪ್ರಕಾರ, ಈ ವರ್ಷ ಪ್ರೌಢಶಾಲೆಯಲ್ಲಿ ಹಿಂದಿ ವಿಷಯದಲ್ಲಿ 1,26,192 ವಿದ್ಯಾರ್ಥಿಗಳು ಪರೀಕ್ಷೆ ತೆಗೆದುಕೊಂಡಿದ್ದು, ಅದರಲ್ಲಿ 1,24,208 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದರೆ. 4984 ವಿದ್ಯಾರ್ಥಿಗಳು ಅನುತ್ತೀರ್ಣರಾಗಿದ್ದಾರೆ. 1,23,009 ವಿದ್ಯಾರ್ಥಿಗಳು ಇಂಟರ್‌ಮೀಡಿಯೇಟ್ ಪರೀಕ್ಷೆಗೆ ಹಾಜರಾಗಿದ್ದರು. ಇವರಲ್ಲಿ 1,18,294 ಮಂದಿ ಉತ್ತೀರ್ಣರಾಗಿದ್ದು, 4,715 ಅಭ್ಯರ್ಥಿಗಳು ಅನುತ್ತೀರ್ಣರಾಗಿದ್ದಾರೆ.
ಪ್ರೌಢಶಾಲೆ ಮತ್ತು ಇಂಟರ್‌ಮೀಡಿಯೇಟ್‌ನಲ್ಲಿ ಹಿಂದಿ ಭಾಷೆಯಲ್ಲಿ 6,186 ವಿದ್ಯಾರ್ಥಿಗಳು ಹಾಗೂ 3,513 ವಿದ್ಯಾರ್ಥಿನಿಯರು ಅನುತ್ತೀರ್ಣರಾಗಿದ್ದಾರೆ.
ಉತ್ತರಾಖಂಡ ಬಿಜೆಪಿಯ ಮಹಿಳಾ ಮೋರ್ಚಾದ ಐಟಿ ಸೆಲ್‌ನ ಸಹ ಸಂಚಾಲಕಿ ಅಂಜಲಿ ರಾವತ್ ನೈತಾನಿ ಮಾತನಾಡಿ, ನಿಧಾನವಾಗಿ ವಿದ್ಯಾರ್ಥಿಗಳು ಹಿಂದಿಯಲ್ಲಿ ಆಸಕ್ತಿ ಕಳೆದುಕೊಳ್ಳುತ್ತಿದ್ದಾರೆ. ಮೌಖಿಕ ಮತ್ತು ಲಿಖಿತ ಹಿಂದಿ ಭಾಷೆಯಲ್ಲಿ ಹಿಂದುಳಿದಿರುವುದಕ್ಕೆ ಪ್ರಮುಖ ಕಾರಣವೆಂದರೆ, ಇಂದಿನ ಯುವ ಪೀಳಿಗೆಯು ಬಹುರಾಷ್ಟ್ರೀಯ ಕಂಪನಿಗಳಲ್ಲಿನ ಉದ್ಯೋಗಗಳಿಗಾಗಿ ಇಂಗ್ಲಿಷ್‌ನಲ್ಲಿ ಉತ್ತಮ ಸಾಧನೆ ಮಾಡಲು ಬಯಸುವುದಾಗಿದೆ. ಕಂಪನಿಗಳು ಇಂಗ್ಲಿಷ್‌ನಲ್ಲಿ ನಿರರ್ಗಳವಾಗಿರುವ ವಿದ್ಯಾರ್ಥಿಗಳನ್ನು ಹುಡುಕುತ್ತಿವೆ ಎಂದಿದ್ದಾರೆ.
ಉತ್ತರಾಖಂಡದ ಬಿಹಾರಿಗಢದ ಹಿರಿಯ ಶಿಕ್ಷಕಿ ಅಂಜು ಸೈನಿ ಮಾತನಾಡಿ, 'ನಮ್ಮ ಮಾತೃಭಾಷೆ ಹಿಂದಿಯಲ್ಲಿ ನಮ್ಮ ಹಿಡಿತವನ್ನು ಉಳಿಸಿಕೊಳ್ಳಲು ಸಾಧ್ಯವಾಗದಿದ್ದರೆ, ನಮ್ಮ ಮೌಲ್ಯಗಳು, ಸಂಸ್ಕೃತಿ ಮತ್ತು ಸಾಮಾಜಿಕ ಮೌಲ್ಯಗಳಿಗೆ ಹಿನ್ನಡೆಯಾಗುತ್ತದೆ' ಎಂದು ಹೇಳಿದರು.
'ಟೊಳ್ಳು ಬುನಾದಿಯ ಮೇಲೆ ಶಿಕ್ಷಣವನ್ನು ಕಟ್ಟುವ ಕೆಲಸದಲ್ಲಿ ತೊಡಗಿದ್ದೇವೆ’ ಎಂದು ಸಾಮಾಜಿಕ ಕಾರ್ಯಕರ್ತೆ ಹಾಗೂ ಶಿಕ್ಷಣ ತಜ್ಞೆ ಸುಜಾತಾ ಪೌಲ್ ವ್ಯಂಗ್ಯವಾಡಿದರು.
ವಿಷಯವಾರು ಉತ್ತೀರ್ಣರಾದವರ ಶೇಕಡವಾರು
ಹಿಂದಿ- ಶೇ 96.14
ಉರ್ದು- ಶೇ 96.78
ಪಂಜಾಬಿ- ಶೇ 99.59
ಬಂಗಾಳಿ - ಶೇ 100
ಇಂಗ್ಲಿಷ್- ಶೇ 95.55
ಸಂಸ್ಕೃತ- ಶೇ 96.77
ಗಣಿತ- ಶೇ 86.47
ಗೃಹ ವಿಜ್ಞಾನ- ಶೇ 97.33
ವಿಜ್ಞಾನ- ಶೇ 86.30
ಸಮಾಜ ವಿಜ್ಞಾನ- ಶೇ 94.04
ಮಾಹಿತಿ ತಂತ್ರಜ್ಞಾನ- ಶೇ 98.04
ಕೃಷಿ- ಶೇ 98.59