ನವದೆಹಲಿ: ಕರ್ನಾಟಕ ವಿಧಾನಸಭಾ ಚುನಾವಣೆಗೆ ಮುನ್ನ ಅಂದರೆ ಏಪ್ರಿಲ್‌ನಲ್ಲಿ ₹970.50 ಕೋಟಿ ಮೊತ್ತದ ಚುನಾವಣಾ ಬಾಂಡ್‌ಗಳು ಮಾರಾಟವಾಗಿವೆ.
2018ರಲ್ಲಿ ಚುನಾವಣಾ ಬಾಂಡ್ ವ್ಯವಸ್ಥೆ ಅಸ್ತಿತ್ವಕ್ಕೆ ಬಂದಿತ್ತು. ಅಂದಿನಿಂದ ಇಂದಿನವರೆಗೆ 26 ಆವೃತ್ತಿಗಳ ಮೂಲಕ ಅವುಗಳ ಮಾರಾಟ ಆಗಿದೆ.
ಕಮೋಡೋರ್ ಲೋಕೋಶ್ ಬಾತ್ರಾ (ನಿವೃತ್ತ) ಎಂಬುವರು ಮಾಹಿತಿ ಹಕ್ಕು ಕಾಯ್ದೆಯಡಿ ಪಡೆದ ಮಾಹಿತಿ ಪ್ರಕಾರ, ಏಪ್ರಿಲ್ 3ರಿಂದ 12ರ ಅವಧಿಯಲ್ಲಿ 26ನೇ ಆವೃತ್ತಿಯ ಬಾಂಡ್‌ಗಳ ಮಾರಾಟ ಆಗಿದೆ. ಎಸ್‌ಬಿಐ 1,470 ಬಾಂಡ್‌ಗಳನ್ನು ಮಾರಿದೆ. ಈ ಪೈಕಿ, 923 ಅಥವಾ ಶೇ 95.10 ರಷ್ಟು ಬಾಂಡ್‌ಗಳು ₹1 ಕೋಟಿ ಮೌಲ್ಯದವುಗಳು. ಜತೆಗೆ ತಲಾ ₹1 ಲಕ್ಷ ಮೌಲ್ಯದ 568 ಹಾಗೂ ತಲಾ ₹10 ಸಾವಿರ ಮೌಲ್ಯದ 10 ಬಾಂಡ್‌ಗಳನ್ನು ಮಾರಿದೆ. ಎಸ್‌ಬಿಐನ ಬೆಂಗಳೂರು ಶಾಖೆ ₹46 ಕೋಟಿ ಮೊತ್ತದ ಬಾಂಡ್ ಮಾರಾಟ ಮಾಡಿದೆ.
ಚುನಾವಣಾ ಬಾಂಡ್‌ಗಳನ್ನು ನಗದೀಕರಣಗೊಳಿಸುವ ಸಲುವಾಗಿ ಎಸ್‌ಬಿಐನಲ್ಲಿ 25 ರಾಜಕೀಯ ಪಕ್ಷಗಳು ಖಾತೆಗಳನ್ನು ತೆರೆದಿವೆ. ಸೂಕ್ತ ಅನುಮೋದನೆ ದೊರೆತ ನಂತರ ಶಾಖೆಗಳಲ್ಲಿ ಖಾತೆಗಳನ್ನು ತೆರೆಯಲಾಗುತ್ತಿದೆ ಎಂದು ಬ್ಯಾಂಕ್ ತಿಳಿಸಿದೆ.
ಎಡಿಆರ್ ವರದಿಯ ಪ್ರಕಾರ, ಆಡಳಿತಾರೂಢ ಬಿಜೆಪಿಯ ಆದಾಯವು ಹಿಂದಿನ ಹಣಕಾಸು ವರ್ಷಕ್ಕೆ ಹೋಲಿಸಿದರೆ ಶೇ 154ರಷ್ಟು ಹೆಚ್ಚಳ ಆಗಿದೆ. ಅದು 2021-22ರಲ್ಲಿ ₹1,917 ಕೋಟಿಗೆ ತಲುಪಿದೆ. ಅದರಲ್ಲಿ ಶೇ 54ರಷ್ಟು ಚುನಾವಣಾ ಬಾಂಡ್‌ಗಳ ಮೂಲಕ ಬಂದಿದೆ. ಬಿಜೆಪಿ, ಕಾಂಗ್ರೆಸ್, ತೃಣಮೂಲ ಕಾಂಗ್ರೆಸ್ ಹಾಗೂ ಎನ್‌ಸಿಪಿ ಪಕ್ಷಗಳು ಶೇ 55.09 ಅಂದರೆ ₹1811.94 ಕೋಟಿ ಮೊತ್ತದ ದೇಣಿಗೆಗಳನ್ನು ಚುನಾವಣಾ ಬಾಂಡ್‌ಗಳ ಮೂಲಕ ಪಡೆದಿವೆ. ಇತರ ರಾಷ್ಟ್ರೀಯ ಪಕ್ಷಗಳಾದ ಸಿಪಿಎಂ, ಸಿಪಿಐ, ಬಿಎಸ್‌ಪಿ ಹಾಗೂ ಎನ್‌ಪಿಪಿಗೆ ಈ ವಿಧಾನದ ಮೂಲಕ ದೇಣಿಗೆ ಬಂದಿಲ್ಲ.