ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಒಂಬತ್ತು ವರ್ಷಗಳನ್ನು ಪೂರೈಸಿರುವ ಹಿನ್ನೆಲೆಯಲ್ಲಿ ಕಾಂಗ್ರೆಸ್ ಪಕ್ಷವು ಅವರಿಗೆ ಬೆಲೆ ಏರಿಕೆ, ನಿರುದ್ಯೋಗ, ರೈತರ ಆದಾಯಕ್ಕೆ ಸಂಬಂಧಿಸಿದ ಒಂಬತ್ತು ಪ್ರಶ್ನೆಗಳನ್ನು ಕೇಳಿದ್ದು, ಜನರಿಗೆ 'ನಂಬಿಕೆ ದ್ರೋಹ' ಮಾಡಿದ ಕಾರಣಕ್ಕೆ ಕ್ಷಮೆಯಾಚಿಸುವಂತೆ ಒತ್ತಾಯಿಸಿದೆ.
ಕೇಂದ್ರ ಸರ್ಕಾರವು ಮೇ 26 ಅನ್ನು 'ಕ್ಷಮೆಯ ದಿನ'ವಾಗಿ (ಮಾಫಿ ದಿವಸ್) ಆಚರಿಸಬೇಕೆಂದೂ ಕಾಂಗ್ರೆಸ್ ಆಗ್ರಹಿಸಿದೆ.
ಶುಕ್ರವಾರ ಇಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಎಐಸಿಸಿ ಪ್ರಧಾನ ಕಾರ್ಯದರ್ಶಿ ಜೈರಾಂ ರಮೇಶ್, 'ಭಾರತ್ ಜೋಡೊ ಯಾತ್ರೆ ಸಮಯದಲ್ಲಿ ಪಕ್ಷದ ಮುಖಂಡ ರಾಹುಲ್ ಗಾಂಧಿ ಅವರು ಅನೇಕ ವಿಷಯಗಳನ್ನು ಪ್ರಸ್ತಾಪಿಸಿದ್ದರು. ಈ ಒಂಬತ್ತು ಪ್ರಶ್ನೆಗಳು ಈ ವಿಷಯವನ್ನು ಆಧರಿಸಿವೆ' ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ರಮೇಶ್ ಅವರು '9 ವರ್ಷ, 9 ಸವಾಲು' (ನೌ ಸಾಲ್, ನೌ ಸವಾಲ್) ಕೃತಿಯನ್ನು ಬಿಡುಗಡೆ ಮಾಡಿದರು. ಮೋದಿ ಅವರು ಪ್ರಧಾನಿಯಾಗಿ 9 ವರ್ಷಗಳಾದವು. ಹಾಗಾಗಿ, ಪಕ್ಷವು ಅವರಿಗೆ 9 ಪ್ರಶ್ನೆಗಳನ್ನು ಕೇಳಬಯಸುತ್ತದೆ. ಪ್ರಧಾನಿ ಅವರು ಈ 9 ಪ್ರಶ್ನೆಗಳಿಗೆ ತಮ್ಮ ಮೌನ ಮುರಿದು ಉತ್ತರಿಸಬೇಕು' ಎಂದು ಒತ್ತಾಯಿಸಿದ್ದಾರೆ.
'ದೇಶದಲ್ಲಿ ಹಣದುಬ್ಬರ ಮತ್ತು ನಿರುದ್ಯೋಗ ಗಗನಕ್ಕೆ ಏರುತ್ತಿರುವುದು ಏಕೆ? ಶ್ರೀಮಂತರು ಶ್ರೀಮಂತರಾಗಿ, ಬಡವರು ಬಡವರಾಗಿಯೇ ಏಕೆ ಉಳಿಯುತ್ತಿದ್ದಾರೆ? ಆರ್ಥಿಕ ಅಸಮಾನತೆ ಹೆಚ್ಚಾಗುತ್ತಿದ್ದರೂ ಸಾರ್ವಜನಿಕ ಆಸ್ತಿಯನ್ನು ಪ್ರಧಾನಿ ಮೋದಿಯವರ ಸ್ನೇಹಿತರಿಗೆ ಏಕೆ ಮಾರಾಟ ಮಾಡಲಾಗುತ್ತಿದೆ? ಕೃಷಿ ಕಾನೂನುಗಳನ್ನು ರದ್ದಪಡಿಸುವಾಗ ರೈತರೊಂದಿಗೆ ಮಾಡಿಕೊಂಡ ಒಪ್ಪಂದಗಳನ್ನು ಏಕೆ ಜಾರಿ ಮಾಡಿಲ್ಲ. ಕನಿಷ್ಠ ಬೆಂಬಲ ಬೆಲೆಯನ್ನು ಏಕೆ ಖಾತ್ರಿಪಡಿಸಿಲ್ಲ. ಕಳೆದ 9 ವರ್ಷಗಳಿಂದ ರೈತರು ಆದಾಯ ದ್ವಿಗುಣವಾಗಿಲ್ಲ ಏಕೆ' ಎಂದು ಪ್ರಶ್ನಿಸಿದ್ದಾರೆ.
'ಕಳ್ಳರನ್ನು ತಪ್ಪಿಸಿಕೊಳ್ಳಲು ಏಕೆ ಬಿಡುತ್ತಿದ್ದೀರಿ? ಬಿಜೆಪಿ ಆಡಳಿತವಿರುವ ರಾಜ್ಯಗಳಲ್ಲಿನ ವ್ಯಾಪಕವಾದ ಭ್ರಷ್ಟಾಚಾರದ ಬಗ್ಗೆ ನೀವು ಏಕೆ ಮೌನವಾಗಿದ್ದೀರಿ ಮತ್ತು ಭಾರತೀಯರನ್ನು ಏಕೆ ಕಷ್ಟದಲ್ಲಿ ಸಿಲುಕಿಸಿದ್ದೀರಿ' ಎಂದೂ ಕೇಳಿದ್ದಾರೆ.
ರಾಷ್ಟ್ರೀಯ ಭದ್ರತೆಯ ವಿಚಾರಕ್ಕೆ ಸಂಬಂಧಿಸಿದಂತೆ 2020ರಲ್ಲಿ ಚೀನಾಕ್ಕೆ ಕ್ಲೀನ್ ಚಿಟ್ ಕೊಟ್ಟರೂ, ಅದು ಏಕೆ ಭಾರತದ ಭೂಪ್ರದೇಶವನ್ನು ಆಕ್ರಮಿಸಿಕೊಳ್ಳುವುದನ್ನು ಮುಂದುವರಿಸಿದೆ. ಚುನಾವಣಾ ಲಾಭಕ್ಕಾಗಿ ಉದ್ದೇಶಪೂರ್ವಕವಾಗಿ 'ದ್ವೇಷದ ರಾಜಕೀಯ'ವನ್ನು ಏಕೆ ಬಳಸಲಾಗುತ್ತಿದೆ?' ಎಂದು ಪ್ರಶ್ನಿಸಿದರು.
'ಮಹಿಳೆಯರ, ದಲಿತರ, ಪರಿಶಿಷ್ಟರ, ಇತರ ಹಿಂದುಳಿದವರ ಹಾಗೂ ಅಲ್ಪಸಂಖ್ಯಾತರ ಮೇಲಿನ ದೌರ್ಜನ್ಯಗಳಿಗೆ ನೀವು ಏಕೆ ಮೌನ ವಹಿಸಿದ್ದೀರಿ? ಜಾತಿಗಣತಿಯನ್ನು ಏಕೆ ನಿರ್ಲಕ್ಷ್ಯ ಮಾಡುತ್ತಿರುವಿರಿ' ಎಂದು ಪ್ರಶ್ನಿಸಿದ ಜೈರಾಂ ರಮೇಶ್, 'ಒಂಬತ್ತು ವರ್ಷಗಳಲ್ಲಿ ನಮ್ಮ ಸಾಂವಿಧಾನಿಕ ಮೌಲ್ಯಗಳು ಮತ್ತು ಸಂಸ್ಥೆಗಳನ್ನು ದುರ್ಬಲಗೊಳಿಸಲಾಗಿದೆ' ಎಂದು ಆರೋಪಿಸಿದರು.
ಕಾಂಗ್ರೆಸ್ ಮುಖಂಡ ಪವನ್ ಖೇರಾ ಮಾತನಾಡಿ, 'ಒಂಬತ್ತು ವರ್ಷಗಳಲ್ಲಿ ಕೇಂದ್ರ ಸರ್ಕಾರ ನೀಡಿರುವ ಭರವಸೆಗಳು ವಾಸ್ತವದಿಂದ ದೂರವಾಗಿವೆ' ಎಂದರು.
'ಪ್ರಧಾನಿಗಳೇ ನಿಮ್ಮಿಂದ ಉತ್ತರಗಳನ್ನು ಕೇಳಿದಾಗ ನಮ್ಮನ್ನು 900 ವರ್ಷಗಳ ಹಿಂದಕ್ಕೆ ಕರೆದೊಯ್ಯಬೇಡಿ. ಈ ಒಂಬತ್ತು ವರ್ಷಗಳಲ್ಲಿ ನೀವು ಏನು ಮಾಡಿದ್ದೀರಿ ಎಂಬುದನ್ನು ತಿಳಿಯಲು ಎಲ್ಲರೂ ಬಯಸುತ್ತಾರೆ' ಎಂದು ಹೇಳಿದ ಖೇರಾ, 'ಜನರ ನಂಬಿಕೆಗೆ ದ್ರೋಹ ಎಸಗಿದ ಪ್ರಧಾನಿ ಅವರನ್ನು ಕ್ಷಮೆಯಾಚಿಸಲು ಒತ್ತಾಯಿಸುತ್ತೇವೆ' ಎಂದರು.
ಪ್ರಧಾನಿ ನರೇಂದ್ರ ಮೋದಿ ಅವರ ವಿರುದ್ಧ ಕಾಂಗ್ರೆಸ್ ವಾಗ್ದಾಳಿ ನಡೆಸುವ ಒಂದು ದಿನ ಮುನ್ನವೇ (ಗುರುವಾರ) ಬಿಜೆಪಿ ಮೋದಿ ನೇತೃತ್ವದ ಸರ್ಕಾರ ಸಾಧನೆಗಳನ್ನು ಪವರ್ ಪಾಯಿಂಟ್ ಮೂಲಕ ಬಿಂಬಿಸಿದೆ. ಮಾಧ್ಯಮಗಳೊಂದಿಗೆ ಮಾತನಾಡಿದ ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ, ಮೋದಿ ನೇತೃತ್ವದ 9 ವರ್ಷಗಳ ಸರ್ಕಾರದ ಸಾಧನೆಗಳಿಗೆ ಹೋಲಿಸಿದರೆ ಯುಪಿಎ ಸರ್ಕಾರದ ಹತ್ತು ವರ್ಷಗಳು 'ಕಳೆದುಹೋದ ದಶಕ' ಎಂದು ಹೇಳಿದ್ದಾರೆ. ಗುರುವಾರ ಸಂಜೆ ಮಾಧ್ಯಮಗಳೊಂದಿಗೆ ನಡೆಸಿದ ಸಂವಾದದಲ್ಲಿ ಸಚಿವ ರಾಜೀವ್ ಚಂದ್ರಶೇಖರ್ ಅವರು ಯುಪಿಎ ಅವಧಿಯ ಹತ್ತು ವರ್ಷಗಳೊಂದಿಗೆ ಪ್ರಧಾನಿ ಮೋದಿ ಅವರ 9 ವರ್ಷಗಳನ್ನು ಹೋಲಿಸುವ ಸಾಧನೆಗಳನ್ನು ಪಾತ್ಯೆಕ್ಷಿಕೆ ಮೂಲಕ ಬಿಂಬಿಸಿದರು. ಈ ಸಂದರ್ಭದಲ್ಲಿ ರಕ್ಷಣಾ ಸಚಿವ ರಾಜನಾಥ ಸಿಂಗ್, ವಿದೇಶಾಂಗ ವ್ಯವಹಾರಗಳ ಸಚಿವ ಎಸ್. ಜೈಶಂಕರ್, ವಾಣಿಜ್ಯ ಸಚಿವ ಪಿಯೂಷ್ ಗೋಯೆಲ್ ಕೂಡಾ ಮಾಧ್ಯಮಗಳೊಂದಿಗೆ ಸಂವಾದ ನಡೆಸಿದರು. ಮನವಿ: