ಇಡುಕ್ಕಿ: ಕೇರಳದ ಇಡುಕ್ಕಿ ಜಿಲ್ಲೆಯ ಚಿನ್ನಕನಾಲ್, ಸಾಂತನ್‌ಪಾರ್ ಜನವಸತಿ ಪ್ರದೇಶಗಳಲ್ಲಿ ಸಂಚರಿಸುತ್ತಿದ್ದ ಕಾಡಾನೆ 'ಅರಿಕೊಂಬನ್'ಗೆ ಅರಿವಳಿಕೆ ಮದ್ದು ನೀಡಲಾಯಿತು. ಕೇರಳ ಹೈಕೋರ್ಟ್ ಆದೇಶದ ಪ್ರಕಾರ ಈ ಆನೆಯನ್ನು ಬೇರೆ ಸ್ಥಳಕ್ಕೆ ಸ್ಥಳಾಂತರಿಸುವುದಾಗಿ ರಾಜ್ಯದ ಅರಣ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.
ಆನೆಗೆ ಪ್ರಜ್ಞೆ ತಪ್ಪಿಸಲು ಸುಮಾರು ಮೂರು ಚುಚ್ಚುಮದ್ದುಗಳನ್ನು ಬಳಸಲಾಯಿತು. ತರಬೇತಿ ಪಡೆದಿರುವ ನಾಲ್ಕು ಆನೆಗಳನ್ನು ಬಳಸಿ ಅರಣ್ಯ ಇಲಾಖೆ ಸಿಬ್ಬಂದಿ ಅರಿಕೊಂಬನ್ ಆನೆಯನ್ನು ಟ್ರಕ್‌ಗೆ ಹತ್ತಿಸಿದರು. ಆದರೆ, ಆನೆಯನ್ನು ಯಾವ ಸ್ಥಳಕ್ಕೆ ಕರೆದೊಯ್ಯಲಾಯಿತು ಎಂಬ ಮಾಹಿತಿಯನ್ನು ಅಧಿಕಾರಿಗಳು ಬಹಿರಂಗಪಡಿಸಿಲ್ಲ.
'ಆನೆಯನ್ನು ಸೆರೆಹಿಡಿಯುವಲ್ಲಿ ಅರಣ್ಯ ಇಲಾಖೆ ಸಿಬ್ಬಂದಿ ಕೆಲಸ ಶ್ಲಾಘನೀಯ. ಆನೆಯನ್ನು ಟ್ರಕ್‌ನಲ್ಲಿ ಒಯ್ಯುವುದು ಮತ್ತು ಹೈಕೋರ್ಟ್ ಆದೇಶದ ಅನುಸಾರ ದಟ್ಟ ಅರಣ್ಯದಲ್ಲಿ ಬಿಡುವುದು ಈಗ ನಮ್ಮ ಮುಂದಿರುವ ಪ್ರಮುಖ ಕೆಲಸ' ಎಂದು ರಾಜ್ಯ ಅರಣ್ಯ ಸಚಿವ ಎ.ಕೆ. ಶಶೀಂದ್ರನ್ ಹೇಳಿದ್ದಾರೆ.
ಆನೆಯನ್ನು ಸ್ಥಳಾಂತರಿಸಬಹುದಾದ ಕೆಲವು ಪ್ರದೇಶಗಳನ್ನು ಸೂಚಿಸಿ ಮೊಹರು ಮಾಡಲಾಗಿರುವ ಲಕೋಟೆಯಲ್ಲಿ ಹೈಕೋರ್ಟ್‌ಗೆ ಕಳಿಸಲಾಗಿದೆ. ಹಾಗಾಗಿ ಆನೆಯನ್ನು ಯಾವ ಸ್ಥಳದಲ್ಲಿ ಬಿಡಲಾಗುವುದು ಎಂಬ ವಿಚಾರವನ್ನು ಸದ್ಯ ಗೌಪ್ಯವಾಗಿ ಇರಿಸಲಾಗುವುದು. ರೇಡಿಯೊ ಕಾಲರನ್ನು ಅಳವಡಿಸಿ ಆನೆಯ ಚಟುವಟಿಕೆಗಳ ಮೇಲೆ ಅಧಿಕಾರಿಗಳು ನಿಗಾ ಇರಿಸುತ್ತಾರೆ ಎಂದು ಅವರು ತಿಳಿಸಿದರು.
ಆನೆಯನ್ನು ಯಾವ ಸ್ಥಳಕ್ಕೆ ಸ್ಥಳಾಂತರಿಸಬೇಕು ಎಂಬ ಕುರಿತು ಮೇ 3 ಒಳಗೆ ಅಂತಿಮ ನಿರ್ಧಾರ ತೆಗೆದುಕೊಳ್ಳುವಂತೆ ಕೇರಳ ಹೈಕೋರ್ಟ್ ರಾಜ್ಯ ಸರ್ಕಾರ ಮತ್ತು ತಾನು ನೇಮಿಸಿದ್ದ ತಜ್ಞರ ಸಮಿತಿಗೆ ಏಪ್ರಿಲ್ 19ರಂದು ನಿರ್ದೇಶಿಸಿತ್ತು.