ತಿರುವನಂತಪುರ: 'ದಿ ಕೇರಳ ಸ್ಟೋರಿ' ಸಿನಿಮಾದ ನಿರ್ಮಾಪಕರ ವಿರುದ್ಧ ಭಾನುವಾರ ಹರಿಹಾಯ್ದಿರುವ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್, 'ಲವ್ ಜಿಹಾದ್ ಹೆಸರಿನಲ್ಲಿ ಕೇರಳವನ್ನು ಧಾರ್ಮಿಕ ಉಗ್ರವಾದದ ಕೇಂದ್ರ ಎಂಬುದಾಗಿ ಬಿಂಬಿಸುತ್ತಿರುವ ಸಂಘ ಪರಿವಾರದ ಅಪಪ್ರಚಾರವನ್ನು ಪ್ರಚುರಪಡಿಸುವ ಕೆಲಸವನ್ನು ಈ ಚಿತ್ರದ ಮೂಲಕ ಮಾಡಲಾಗುತ್ತಿದೆ' ಎಂದು ಆರೋಪಿಸಿದ್ದಾರೆ.
ಲವ್ ಜಿಹಾದ್ ಎಂಬ ಪರಿಕಲ್ಪನೆಯನ್ನು ನ್ಯಾಯಾಲಯಗಳು, ತನಿಖಾ ಸಂಸ್ಥೆಗಳು ಅಲ್ಲದೆ ಕೇಂದ್ರ ಗೃಹಸಚಿವಾಲಯವೂ ತಿರಸ್ಕರಿಸಿದೆ ಎಂದೂ ಅವರು ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಕೋಮು ಧ್ರುವೀಕರಣ ಸೃಷ್ಟಿಸಲು ಮತ್ತು ರಾಜ್ಯದ ವಿರುದ್ಧ ಅಪಪ್ರಚಾರ ನಡೆಸಲು ಉದ್ದೇಶಪೂರ್ವಕವಾಗಿ ಯತ್ನಿಸಲಾಗುತ್ತಿದೆ ಎಂಬುದು ಈ ಹಿಂದಿ ಸಿನಿಮಾದ ಟ್ರೇಲರ್ ನೋಡಿದಾಗ ಭಾಸವಾಗುತ್ತದೆ. ವಿಶ್ವದ ಮುಂದೆ ಕೇರಳವನ್ನು ಅವಮಾನಿಸುವ ಉದ್ದೇಶವನ್ನು ಈ ಸಿನಿಮಾ ಹೊಂದಿದೆ ಎಂದಿದ್ದಾರೆ.
ಕೇರಳದಲ್ಲಿ ರಾಜಕೀಯ ಲಾಭ ಪಡೆಯುವ ಸಂಘ ಪರಿವಾರದ ಯತ್ನದ ಭಾಗವಾಗಿ ಈ ಸಿನಿಮಾ ನಿರ್ಮಾಣಗೊಂಡಿದೆ. ಕೋಮುವಾದದ ವಿಷ ಬೀಜಗಳನ್ನು ಬಿತ್ತುವ ಮೂಲಕ ರಾಜ್ಯದಲ್ಲಿ ಧಾರ್ಮಿಕ ಸಾಮರಸ್ಯತೆಯನ್ನು ಕದಡಲು ಪ್ರಯತ್ನಿಸಲಾಗುತ್ತಿದೆ ಎಂದು ಅವರು ಆರೋಪಿಸಿದ್ದಾರೆ.
ಸಂಘ ಪರಿವಾರದ ವಿಭಜನೆಯ ರಾಜಕೀಯವು ಕೇರಳದಲ್ಲಿ ನಡೆಯದು. ಯಾವುದೇ ಸಾಕ್ಷ್ಯಗಳಿಲ್ಲದ ಸುಳ್ಳು ಕಥೆಯನ್ನು ಸಿನಿಮಾದ ಮೂಲಕ ಪ್ರಚಾರ ಮಾಡಲಾಗುತ್ತಿದೆ ಎಂದೂ ಅವರು ಹೇಳಿದ್ದಾರೆ.
ಕೇರಳದ 32 ಸಾವಿರ ಮಹಿಳೆಯರು ಮತಾಂತರಗೊಂಡು ಐಎಸ್ ಸಂಘಟನೆಯ ಸದಸ್ಯರಾಗಿದ್ದಾರೆ ಎಂಬುದಾಗಿ ಸಿನಿಮಾದ ಟ್ರೇಲರ್‌ನಲ್ಲಿ ಹೇಳಲಾಗಿದೆ. ಇದು ಸುಳ್ಳು. ಈ ನಕಲಿ ಕಥೆಯು ಸಂಘ ಪರಿವಾರದ ಸುಳ್ಳಿನ ಫ್ಯಾಕ್ಟರಿಯಲ್ಲಿ ನಿರ್ಮಾಣವಾಗಿದೆ ಎಂದು ಹೇಳಿಕೆಯಲ್ಲಿ ತಿಳಿಸಿದ್ದಾರೆ.
'ಅಭಿವ್ಯಕ್ತಿ ಸ್ವಾತಂತ್ರ್ಯವು ಸುಳ್ಳನ್ನು ಪ್ರಚಾರ ಮಾಡಲು, ಕೋಮುವಾದ ಮತ್ತು ಜನರನ್ನು ವಿಭಜಿಸಲಿರುವ ಪರವಾನಗಿಯಲ್ಲ' ಎಂದು ಹರಿಹಾಯ್ದಿರುವ ಅವರು ಕೇರಳದ ಜನರು ಈ ಸಿನಿಮಾ ತಿರಸ್ಕರಿಸಬೇಕು ಎಂದೂ ಆಗ್ರಹಿಸಿದ್ದಾರೆ.
ಕೇರಳದಲ್ಲಿ ಈ ಸಿನಿಮಾದ ಪ್ರದರ್ಶನಕ್ಕೆ ಅವಕಾಶ ನೀಡಬಾರದು ಎಂದು ಕಾಂಗ್ರೆಸ್ ಸರ್ಕಾರವನ್ನು ಒತ್ತಾಯಿಸಿತ್ತು.