ನವದೆಹಲಿ: ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಭರ್ಜರಿ ಗೆಲುವು ಸಾಧಿಸಿದ ಕಾಂಗ್ರೆಸ್ ಗೆ ಅಭಿನಂದನೆ ಸಲ್ಲಿಸಿದ ಎಎಪಿ ರಾಷ್ಟ್ರೀಯ ಸಂಚಾಲಕ ಮತ್ತು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು, ಬಿಜೆಪಿ ತನ್ನ ತಂತ್ರಗಳು ಇನ್ನು ಮುಂದೆ ಕೆಲಸ ಮಾಡುವುದಿಲ್ಲ ಎಂಬುದನ್ನು ಈಗಲೇ ಅರಿತುಕೊಳ್ಳಬೇಕು ಎಂದು ಶನಿವಾರ ಹೇಳಿದ್ದಾರೆ.
ಆದಾಗ್ಯೂ, ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಎಎಪಿಯ ಹೀನಾಯ ಸೋಲನ್ನು ಒಪ್ಪಿಕೊಂಡ ದೆಹಲಿ ಸಿಎಂ, ಕರ್ನಾಟಕದಲ್ಲಿಯೂ ಗೆಲ್ಲುವ ಸಮಯ ಬರುತ್ತದೆ ಎಂದು ಹೇಳಿದ್ದಾರೆ.
ಚುನಾವಣಾ ಆಯೋಗದ ವೆಬ್ಸೈಟ್ ಪ್ರಕಾರ, ಎಎಪಿ ಕೇವಲ ಶೇಕಡಾ 0.58 ರಷ್ಟು ಮತಗಳನ್ನು ಪಡೆದುಕೊಂಡಿದೆ. ಪಂಜಾಬ್ನ ಜಲಂಧರ್ ಲೋಕಸಭಾ ಉಪಚುನಾವಣೆಯಲ್ಲಿ ತಮ್ಮ ಪಕ್ಷದ ಅಭ್ಯರ್ಥಿ ಸುಶೀಲ್ ರಿಂಕು ಅವರ ಗೆಲುವನ್ನು ಕೇಜ್ರಿವಾಲ್ ಶ್ಲಾಘಿಸಿದರು ಮತ್ತು ಇದು "ಐತಿಹಾಸಿಕ ಮತ್ತು ಅಭೂತಪೂರ್ವ" ಗೆಲುವು ಎಂದು ಬಣ್ಣಿಸಿದ್ದಾರೆ.