ಚೆನ್ನೈ: ಕೇಂದ್ರ ಸರ್ಕಾರದ ಎಲ್ಲ ಪರೀಕ್ಷೆಗಳನ್ನು ಪ್ರಾದೇಶಿಕ ಭಾಷೆಗಳಲ್ಲಿ ನಡೆಸುವಂತೆ ಒತ್ತಾಯಿಸಿರುವ ತಮಿಳುನಾಡು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ಅವರು, ದೇಶದ ಎಲ್ಲ ರಾಜ್ಯಗಳ ವಿದ್ಯಾರ್ಥಿಗಳಿಗೆ ಸಮಾನ ಅವಕಾಶ ಸಿಗಬೇಕು ಎಂದು ಹೇಳಿದ್ದಾರೆ.
ಮುಂದಿನ ವರ್ಷದಿಂದ ಕೇಂದ್ರ ಸಶಸ್ತ್ರ ಪೊಲೀಸ್ ಪಡೆ(ಸಿಎಪಿಎಫ್) ಪರೀಕ್ಷೆಗಳನ್ನು ಹಿಂದಿ ಮತ್ತು ಇಂಗ್ಲಿಷ್ ಜೊತೆಗೆ 13 ಪ್ರಾದೇಶಿಕ ಭಾಷೆಗಳಲ್ಲಿ ನಡೆಸುವ ಕೇಂದ್ರದ ನಿರ್ಧಾರವನ್ನು ಸ್ಟಾಲಿನ್ ಸ್ವಾಗತಿಸಿದ್ದಾರೆ. "ಎಲ್ಲಾ ಕೇಂದ್ರ ಸರ್ಕಾರದ ಪರೀಕ್ಷೆಗಳನ್ನು ಎಲ್ಲಾ ಪ್ರಾದೇಶಿಕ ಭಾಷೆಗಳಲ್ಲಿ ನಡೆಸುವಂತೆ ನಾವು ಒತ್ತಾಯಿಸುತ್ತೇವೆ" ಎಂದು ಸ್ಟಾಲಿನ್ ಅವರು ಸೋಮವಾರ 'ಉಂಗಲಿನ್ ಒರುವನ್' ವೀಡಿಯೊ ಸರಣಿಯಲ್ಲಿ ಹೇಳಿದ್ದಾರೆ.
ಆದಷ್ಟು ಬೇಗ ಕೇಂದ್ರ ಎಲ್ಲಾ ಪರೀಕ್ಷೆಗಳನ್ನು ಪ್ರಾದೇಶಿಕ ಭಾಷೆಯಲ್ಲಿ ನಡೆಸಬೇಕು. ಇದು ಸಂಸತ್ತು, ರಾಜ್ಯ ಶಾಸಕಾಂಗ ಮತ್ತು ಜನತಾ ವೇದಿಕೆಯಲ್ಲಿ ಡಿಎಂಕೆಯ ಬಹುಕಾಲದ ಬೇಡಿಕೆಯಾಗಿದೆ. ಇದರೊಂದಿಗೆ ಕೇವಲ ತಮಿಳುನಾಡಿನ ಯುವಕರು ಮಾತ್ರವಲ್ಲದೆ ಭಾರತದ ಅನೇಕ ರಾಜ್ಯಗಳ ಯುವಕರು ತಮ್ಮ ಭಾಷೆಗಳಲ್ಲಿ ಪರೀಕ್ಷೆಗಳನ್ನು ಬರೆಯಬಹುದು. ಕೇವಲ ಹಿಂದಿ ಮತ್ತು ಇಂಗ್ಲಿಷ್ನಲ್ಲಿ ನಡೆಸುವುದರಿಂದ ಹಲವು ರಾಜ್ಯಗಳ ಯುವಕರು ಅವಕಾಶ ವಂಚಿತರಾಗುತ್ತಾರೆ” ಎಂದು ತಮಿಳುನಾಡು ಸಿಎಂ ಹೇಳಿದ್ದಾರೆ.