ನವದೆಹಲಿ :ಹೊಸ ನಿಯಮಾವಳಿಗಳ ಪ್ರಕಾರ, ದೇಶದಲ್ಲಿನ ಎಲ್ಲ ವೈದ್ಯಕೀಯ ವೃತ್ತಿನಿರತರೂ ರಾಷ್ಟ್ರೀಯ ವೈದ್ಯಕೀಯ ದಾಖಲೆಯಲ್ಲಿ ನೋಂದಾಯಿಸಿಕೊಳ್ಳಬೇಕಿದೆ. ಇಂತಹ ವೈದ್ಯರಿಗೆ ವಿಶಿಷ್ಟ ಗುರುತು ಚೀಟಿ ನೀಡಲಾಗುತ್ತಿದ್ದು, ರಾಷ್ಟ್ರೀಯ ವೈದ್ಯಕೀಯ ದಾಖಲೆಯು ಅಂತಹ ವೈದ್ಯರ ಪದವಿ, ವಿಶ್ವವಿದ್ಯಾಲಯ, ಅವರ ವೃತ್ತಿ ವಿಶೇಷತೆ ಸೇರಿದಂತೆ ಹಲವು ದತ್ತಾಂಶ, ಮಾಹಿತಿಗಳನ್ನು ಒಳಗೊಂಡಿರಲಿದೆ ಎಂದು moneycontrol.com ವರದಿ ಮಾಡಿದೆ.
ಹಲವು ವರದಿಗಳ ಪ್ರಕಾರ, ದೇಶಾದ್ಯಂತ ಇರುವ ವೈದ್ಯರ ಕುರಿತು ಪ್ರಮುಖ ಮಾಹಿತಿ ಹೊಂದಿರುವ ಸಾಮಾನ್ಯ ದಾಖಲೆ ರಾಷ್ಟ್ರೀಯ ವೈದ್ಯಕೀಯ ದಾಖಲೆ ಆಗಲಿದೆ. ಈ ಮಾಹಿತಿಯನ್ನು ರಾಷ್ಟ್ರೀಯ ವೈದ್ಯಕೀಯ ಆಯೋಗದ ಅಂತರ್ಜಾಲ ತಾಣದಲ್ಲಿ ಪ್ರಕಟಿಸಲಾಗುತ್ತದೆ ಎಂದು ಹೇಳಲಾಗಿದೆ.
ರಾಷ್ಟ್ರೀಯ ವೈದ್ಯಕೀಯ ಆಯೋಗದ ನೀತಿಗಳು ಹಾಗೂ ವೈದ್ಯಕೀಯ ನೋಂದಣಿ ಮಂಡಳಿಯಲ್ಲಿ ನೋಂದಣಿಗೊಳ್ಳುವುದರಿಂದ ಸೃಷ್ಟಿಯಾಗುವ ಪರವಾನಗಿಯು ಐದು ವರ್ಷಗಳ ಅವಧಿಗೆ ಊರ್ಜಿತವಾಗಿರುತ್ತದೆ. ವೈದ್ಯಕೀಯ ವೃತ್ತಿಪರರ ನೋಂದಣಿ ಹಾಗೂ ವೈದ್ಯಕೀಯ ಆಚರಣೆಗೆ ಪರವಾನಗಿ ನಿಯಮಗಳು, 2023ರ ಪ್ರಕಾರ, ಪರವಾನಗಿಯ ಅವಧಿ ಮೀರಿದ ನಂತರ ಅದರ ನವೀಕರಣಕ್ಕಾಗಿ ವೈದ್ಯರು ರಾಜ್ಯ ವೈದ್ಯಕೀಯ ಮಂಡಳಿಯನ್ನು ಸಂಪರ್ಕಿಸಬೇಕಿದೆ.
ಒಂದು ವೇಳೆ ಅರ್ಜಿದಾರರ ಪರವಾನಗಿ ಅಥವಾ ನವೀಕರಣ ಮಂಜೂರಾತಿಯು ರಾಜ್ಯ ವೈದ್ಯಕೀಯ ಮಂಡಳಿಯಿಂದ ತಿರಸ್ಕೃತಗೊಂಡರೆ, ಅಂಥವರು ನೀತಿಗಳು ಹಾಗೂ ವೈದ್ಯಕೀಯ ನೋಂದಣಿ ಮಂಡಳಿಯನ್ನು ಅಂಥ ನಿರ್ಣಯವನ್ನು ಸ್ವೀಕರಿಸಿದ 30 ದಿನಗಳೊಳಗಾಗಿ ಸಂಪರ್ಕಿಸಬಹುದಾಗಿದೆ ಎಂದೂ ನಿಯಮಾವಳಿಗಳಲ್ಲಿ ಉಲ್ಲೇಖಿಸಲಾಗಿದೆ.