ಮಧೂರು: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಕಾಸರಗೋಡು ಘಟಕದ 2023-24ನೇ ಸಾಲಿನ ಪ್ರಥಮ ಸಭೆ ಉಳಿಯತ್ತಡ್ಕದಲ್ಲಿ ಶುಕ್ರವಾರ ನಡೆಯಿತು.
ಜನಜಾಗೃತಿ ವೇದಿಕೆ ನೂತನ ಅಧ್ಯಕ್ಷ ಡಾ.ಜಯಪ್ರಕಾಶ್ ನಾರಾಯಣ ತೊಟ್ಟೆತ್ತೋಡಿಯವರು ಸಭೆಯ ಅಧ್ಯಕ್ಷತೆ ವಹಿಸಿ ದೀಪ ಬೆಳಗಿಸಿ ಚಾಲನೆ ನೀಡಿದರು. ಸಭೆಯಲ್ಲಿ ದ.ಕ.-2 ಜಿಲ್ಲಾ ನಿರ್ದೇಶಕ ಪ್ರವೀಣ್ ಕುಮಾರ್ ಉಪಸ್ಥಿತರಿದ್ದು ಕಾಸರಗೋಡು ಯೋಜನಾವ್ಯಾಪ್ತಿಯ ಕಾಸರಗೋಡು ಮತ್ತು ಮಂಜೇಶ್ವರ ತಾಲೂಕುಗಳ 2023-24ನೇ ಸಾಲಿನ ಜನಜಾಗೃತಿ ಕಾರ್ಯಕ್ರಮಗಳ ವಲಯವಾರು ಹಂಚಿಕೆ ಮತ್ತು ಕಾರ್ಯಕ್ರಮಗಳ ಗುಣಮಟ್ಟದ ಅನುಷ್ಠಾನದ ಬಗ್ಗೆ ಮಾಹಿತಿ ನೀಡಿ, ಜನಜಾಗೃತಿ ವೇದಿಕೆಯ ಪದಾಧಿಕಾರಿಗಳು ಹಾಗೂ ಸರ್ವಸದಸ್ಯರ ಸಹಕಾರ ಕೋರಿದರು.
ಕರಾವಳಿ ಪ್ರಾದೇಶಿಕ ವಿಭಾಗದ ಜನಜಾಗೃತಿ ಯೋಜನಾಧಿಕಾರಿ ಗಣೇಶ್ ಆಚಾರ್ಯ ವಾರ್ಷಿಕ ಕ್ರಿಯಾಯೋಜನೆಯ ವಿಷಯವಾರು ಮಾಹಿತಿ ನೀಡಿ ಸಹಕಾರ ಕೋರಿದರು. ಜೂನ್ 11 ರಂದು ಮಂಜೇಶ್ವರ ತಾಲೂಕು ವ್ಯಾಪ್ತಿಯ ಕುಂಬಳೆ ವಲಯದ ನಾರಾಯಣಮಂಗಲ ಶ್ರೀ ಚೀರುಂಬ ಭಗವತಿ ಸಭಾಂಗಣದಲ್ಲಿ ನಡೆಸಲು ಉದ್ದೇಶಿಸಿರುವ ಜನಜಾಗೃತಿ ವೇದಿಕೆಯ ನೂತನ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮ, ನೂತನ ಕೇಂದ್ರ ಒಕ್ಕೂಟಗಳ ಉದ್ಘಾಟನಾ ಕಾರ್ಯಕ್ರಮ, ನವಜೀವನೋತ್ಸವ ಕಾರ್ಯಕ್ರಮ ಹಾಗೂ ಶೌರ್ಯ ವಿಪತ್ತು ಘಟಕಗಳ ಮಾಸ್ಟರ್ ಮತ್ತು ಕ್ಯಾಪ್ಟನ್ ಗಳಿಗೆ ಜವಾಬ್ದಾರಿ ನೀಡುವ ಕಾರ್ಯಕ್ರಮದ ಶಿಸ್ತುಬದ್ಧ ಆಯೋಜನೆ ಬಗ್ಗೆ ಚರ್ಚಿಸಲಾಯಿತು.
ಸಭೆಯಲ್ಲಿ ಜನಜಾಗೃತಿ ವೇದಿಕೆಯ ನಿರ್ಗಮಿತ ಅಧ್ಯಕ್ಷ ಅಶ್ವತ್ ಪೂಜಾರಿ ಲಾಲ್ ಭಾಗ್, ವೇದಿಕೆಯ ನಿಕಟಪೂರ್ವ ಅಧ್ಯಕ್ಷ ಗೋಪಾಲ್ ಶೆಟ್ಟಿ ಅರಿಬೈಲು ಉಪಸ್ಥಿತರಿದ್ದು ಆರ್ಥಿಕ ವರ್ಷದಲ್ಲಿ ನಡೆಯುವ ಎಲ್ಲಾ ಜನಜಾಗೃತಿ ಕಾರ್ಯಕ್ರಮಗಳಿಗೂ ಶುಭ ಹಾರೈಸಿದರು. ಜನಜಾಗೃತಿ ವೇದಿಕೆಯ ಸದಸ್ಯರುಗಳು, ಕಾಸರಗೋಡು ಮತ್ತು ಮಂಜೇಶ್ವರ ಯೋಜನಾಧಿಕಾರಿಗಳು, ಮೇಲ್ವಿಚಾರಕ ವರ್ಗದ ಕಾರ್ಯಕರ್ತರು ಭಾಗವಹಿಸಿದ್ದರು.