ಬೆಂಗಳೂರು: ಮೂರು-ನಾಲ್ಕು ದಿನಗಳಿಂದ ಬಾರೀ ಚರ್ಚೆಗೆ ಕಾರಣವಾಗಿದ್ದ ಕರ್ನಾಟಕ ಸಿಎಂ ಆಯ್ಕೆ ಪ್ರಕ್ರಿಯೆ ಅಂತಿಮಗೊಂಡಿದೆ. ಹೈಕಮಾಂಡ್ ಸಿದ್ದರಾಮಯ್ಯ ಅವರನ್ನು ಮುಖ್ಯಮಂತ್ರಿಯಾಗಿ, ಡಿ.ಕೆ ಶಿವಕುಮಾರ್ ಅವರನ್ನು ಉಪ ಮುಖ್ಯಮಂತ್ರಿಯಾಗಿ ಆಯ್ಕೆ ಮಾಡಿದ್ದು, ಇಬ್ಬರು ಶನಿವಾರ ಪ್ರಮಾಣ ವಚನ ಸ್ವೀಕಾರ ಮಾಡಲಿದ್ದಾರೆ.
ಕರ್ನಾಟಕದ ಮುಖ್ಯಮಂತ್ರಿ ಆಯ್ಕೆಗೆ ಕಳೆದ ಮೂರು ದಿನಗಳಿಂದ ದೆಹಲಿಯಲ್ಲಿ ನಡೆದ ಪ್ರಹಸನದ ಬಗ್ಗೆ ಟೀಕಿಸಿದ ಬಿಜೆಪಿಗೆ ಕಾಂಗ್ರೆಸ್‌ನ ರಾಜ್ಯಸಭಾ ಸದಸ್ಯ ಜೈರಾಮ್ ರಮೇಶ್, ಟ್ವೀಟ್‌ನಲ್ಲಿ ಉದಾಹರಣೆ ಸಹಿತ ತಿರುಗೇಟು ನೀಡಿದ್ದಾರೆ.
2017ರಲ್ಲಿ ಉತ್ತರಪ್ರದೇಶದ ಮುಖ್ಯಮಂತ್ರಿಯನ್ನು ಘೋಷಿಸಲು ಬಿಜೆಪಿ 8 ದಿನಗಳನ್ನು ತೆಗೆದುಕೊಂಡಿತ್ತು. ಅಸ್ಸಾಂನ ಮುಖ್ಯಮಂತ್ರಿಯನ್ನು ಆಯ್ಕೆ ಮಾಡಲು 2021ರಲ್ಲಿ 7 ದಿನಗಳ ಕಾಲಾವಧಿಯನ್ನು ತೆಗೆದುಕೊಂಡಿತ್ತು, 2022ರಲ್ಲಿ ಉತ್ತರಾಖಂಡದ ಮುಖ್ಯಮಂತ್ರಿಯನ್ನು ಘೋಷಿಸಲು 11 ದಿನಗಳನ್ನು ಬಿಜೆಪಿ ತೆಗೆದುಕೊಂಡಿದೆ.
ಆದರೆ 2023 ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಹೊಸದಾಗಿ ಚುನಾಯಿತರಾದ ಶಾಸಕರ ಮೊದಲ ಸಭೆಯ 3 ದಿನಗಳ ತೀವ್ರ ಮತ್ತು ವ್ಯಾಪಕವಾದ ಸಮಾಲೋಚನೆ ಪ್ರಕ್ರಿಯೆಯ ನಂತರ ಕಾಂಗ್ರೆಸ್ ಕರ್ನಾಟಕದ ಸಿಎಂ ಮತ್ತು ಡಿಸಿಎಂ ಅನ್ನು ಘೋಷಿಸಿದೆ. ಇದು ಬಿಜೆಪಿಗಿಂತ ಕಾಂಗ್ರೆಸ್ ಭಿನ್ನವಾಗಿದೆ ಎಂಬುವುದನ್ನು ತೋರಿಸುತ್ತದೆ ಎಂದು ಜೈರಾಮ್ ಟ್ಟೀಟ್ ಮಾಡಿದ್ದಾರೆ.
ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿ.ಕೆ ಶಿವಕುಮಾರ್ ಅವರಿಗೆ ಜೈರಾಮ್ ರಮೇಶ್ ಅಭಿನಂದನೆಗಳನ್ನು ತಿಳಿಸಿದ್ದು, ಈ ಇಬ್ಬರು ಮಹಾನ್ ದಿಗ್ಗಜರ ಜುಗಲ್ ಬಂದಿಯೂ ಕರ್ನಾಟಕ ಪರಿವರ್ತನೆಯ ಭರವಸೆಯನ್ನು ನೀಡುತ್ತಿದೆ ಎಂದು ಹೇಳಿದ್ದಾರೆ.