ನವದೆಹಲಿ: ನಾಳೆ ನೂತನ ಸಂಸತ್ ಭವನ ಉದ್ಘಾಟನಾ ಸಮಾರಂಭದ ಹಿನ್ನೆಲೆಯಲ್ಲಿ ರಾಷ್ಟ್ರ ರಾಜಧಾನಿಯಲ್ಲಿ ಪೊಲೀಸರು ಬಿಗಿ ಭದ್ರತೆ ಒದಗಿಸಿದ್ದಾರೆ. ನೂತನ ಕಟ್ಟಡದ ಸುತ್ತಲೂ ಸುಮಾರು 70 ಪೊಲೀಸರನ್ನು ನಿಯೋಜಿಸಲಾಗಿದೆ.
ಕಾನೂನು ಸುವ್ಯವಸ್ಥೆ ಕಾಪಾಡಲು ಮತ್ತಷ್ಟು ಪೊಲೀಸರನ್ನು ನಿಯೋಜಿಸಲಾಗುವುದು ಎಂದು ದೆಹಲಿ ಪೊಲೀಸ್ ವಿಶೇಷ ಸಿಪಿ ದೀಪೇಂದರ್ ಪಾಠಕ್ ಎಎನ್‌ಐ ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ. ನಾಳಿನ ಕಾರ್ಯಕ್ರಮ ಮತ್ತು ಕಾನೂನು ಸುವ್ಯವಸ್ಥೆಯತ್ತ ಸಂಪೂರ್ಣ ಗಮನ ಹರಿಸಲಾಗಿದೆ. ಸಾಕಷ್ಟು ಪೊಲೀಸರ ನಿಯೋಜನೆಗೆ ಖಚಿತಪಡಿಸಿಕೊಳ್ಳಲಾಗುವುದು ಎಂದು ಅವರು ಹೇಳಿದ್ದಾರೆ.
ಕಾರ್ಯಕ್ರಮ ದಿನದಂದು ಕೆಲವು ಕಿಡಿಗೇಡಿಗಳು ಕ್ಯಾಂಪಸ್ ಗೋಡೆಗಳ ಮೇಲೆ "ರಾಷ್ಟ್ರ ವಿರೋಧಿ ಮತ್ತು ಪ್ರಧಾನಿ ವಿರೋಧಿ" ಘೋಷಣೆ ಅಂಟಿಸಬಹುದು ಎಂಬ ಮಾಹಿತಿ ಹಿನ್ನೆಲೆಯಲ್ಲಿ ನೂತನ ಸಂಸತ್ ಭವನದ ಸುತ್ತ 24 ಗಂಟೆಯೂ ಬಿಗಿ ಭದ್ರತೆಯನ್ನು ನಿಯೋಜಿಸಲು ಪೊಲೀಸರು ನಿರ್ಧರಿಸಿದ್ದಾರೆ.
ಸಹಾಯಕ ಪೊಲೀಸ್ ಕಮಿಷನರ್ ಶ್ರೇಣಿಯ ಅಧಿಕಾರಿಗಳು ಸಿಸಿಟಿವಿ ಕಣ್ಗಾವಲು ಮೂಲಕ ಇಡೀ ಪರಿಸ್ಥಿತಿಯನ್ನು ನಿರಂತರವಾಗಿ ಮೇಲ್ವಿಚಾರಣೆ ಮಾಡುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ.