ಬದಿಯಡ್ಕ: ಎಡನೀರು ಸಮೀಪದ ಮೋಪಾಲ ಶ್ರೀ ಮಹಾವಿಷ್ಣು ದೇವಸ್ಥಾನದ ನೂತನ ಶಿಲಾಮಯ ಗರ್ಭಗುಡಿ ಹಾಗೂ ನಮಸ್ಕಾರ ಮಂಟಪದ ಶಿಲಾನ್ಯಾಸ ಮತ್ತು ನಿಧಿಕುಂಭ ಸಮರ್ಪಣೆ ಗುರುವಾರ ಬೆಳಗ್ಗೆ ಶುಭಮುಹೂರ್ತದಲ್ಲಿ ಜರಗಿತು. ಸಮಿತಿಯ ಗೌರವಾಧ್ಯಕ್ಷ ಎಡನೀರು ಮಠಾಧೀಶ ಶ್ರೀ ಸಚ್ಚಿದಾನಂದ ಭಾರತೀ ಶ್ರೀಪಾದಂಗಳವರು ಶಿಲಾನ್ಯಾಸ ಹಾಗೂ ಭೂಮಿಪೂಜೆ ನೆರವೇರಿಸಿ ಅನುಗ್ರಹವನ್ನಿತ್ತರು. ಕ್ಷೇತ್ರ ತಂತ್ರಿ ರಾಮ ಭಟ್ ನೀರ್ಚಾಲು (ಕಾಟುಕುಕ್ಕೆ) ಇವರು ತಾಂತ್ರಿಕ ವಿಧಿ ವಿಧಾನಗಳನ್ನು ನಡೆಸಿದರು. ವಾಸ್ತು ಶಿಲ್ಪಿ ಕೃಷ್ಣ ಪ್ರಸಾದ ಮುನಿಯಂಗಳ ಸೂಕ್ತವಾದ ಸಲಹೆ ಸೂಚನೆಗಳನ್ನು ನೀಡಿದರು. ಶಿಲ್ಪಿ ವೆಂಕಟೇಶ ಬೆಳ್ತಂಗಡಿ, ಧಾರ್ಮಿಕ ಮುಂದಾಳು ವಸಂತ ಪೈ ಬದಿಯಡ್ಕ, ಕೆ.ಯಂ. ಹೇರಳ ಮಾಸ್ತರ್ ಕಳೇರಿ, ಡಾ.ಶ್ರೀನಿಧಿ ಸರಳಾಯ ಬದಿಯಡ್ಕ, ಕೆ.ವಿ.ಬಾಲಕೃಷ್ಣ ಆಚಾರಿ ಕಳೇರಿ ಉಪಸ್ಥಿತರಿದ್ದರು. ಸಮಿತಿಯ ಅಧ್ಯಕ್ಷ ನವೀನ್ ಕುಮಾರ್ ಭಟ್ ಕುಂಜರಕಾನ, ಕಾರ್ಯದರ್ಶಿ ಕೆ.ಯಂ. ಶರ್ಮಾ ಎಡನೀರು, ಖಜಾಂಜಿ ವಾಸುದೇವ ಭಟ್ ಚೂರಿಮೂಲೆ ನೇತೃತ್ವ ವಹಿಸಿದ್ದರು. ಊರಪರವೂರ ಭಕ್ತಾದಿಗಳು ಭಾಗವಹಿಸಿದರು.
ಎಡನೀರು ಚೆರ್ಕಳ ಮಾರ್ಗದ ಮಧ್ಯೆಯಿರುವ ಪುರಾತನವಾದ ಶ್ರೀಕ್ಷೇತ್ರವು ಇದೀಗ ಜೀರ್ಣೋದ್ಧಾರಗೊಳ್ಳುತ್ತಿದೆ.