ಜೈಪುರ (PTI): ಸುಡಾನ್ ಸಂಘರ್ಷದಲ್ಲಿ ಸಿಲುಕಿದ್ದ ಕರ್ನಾಟಕದ ಹಕ್ಕಿ-ಪಿಕ್ಕಿ ಜನರ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಪ್ರಕಟಿಸುವ ಮೂಲಕ ಕರ್ನಾಟಕ ಕಾಂಗ್ರೆಸ್ ಅವರ ಜೀವದ ಜೊತೆ ಆಟವಾಡಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಕಿಡಿಕಾರಿದರು.
ರಾಜಸ್ಥಾನದ ರಾಜ್‌ಸಮಂದ್ ಜಿಲ್ಲೆಯ ನಾಥ್ವಾರದಲ್ಲಿ ಬುಧವಾರ ₹ 5,500 ಕೋಟಿಯ ವಿವಿಧ ಯೋಜನೆಗಳಿಗೆ ಚಾಲನೆ ನೀಡಿ ಮಾತನಾಡಿದ ಅವರು, ತಮ್ಮ ಮತ ಬ್ಯಾಂಕ್ ಅನ್ನು ಗಟ್ಟಿಗೊಳಿಸಲು ಕಾಂಗ್ರೆಸ್ ಸುಡಾನ್‌ನಲ್ಲಿದ್ದ ಜನತೆಯನ್ನು ಸಂಕಷ್ಟಕ್ಕೆ ದೂಡಿದ್ದರು. ಆದರೆ ಪ್ರತಿ ಭಾರತೀಯನ ರಕ್ಷಣೆಗಾಗಿ ಮೋದಿ ಯಾವ ಮಟ್ಟಕ್ಕಾದರೂ ಹೋಗುತ್ತಾನೆ ಎಂಬುದು ಅವರಿಗೆ ತಿಳಿದಿಲ್ಲ. ಮೋದಿಗೆ ತೊಂದರೆ ಕೊಡಲು ದೇಶಕ್ಕೆ ಹಾನಿ ಮಾಡಲು ಕಾಂಗ್ರೆಸ್‌ನವರು ಹೊರಟಿದ್ಧಾರೆ ಎಂದರು.
ಬುಡಕಟ್ಟು ಸಮುದಾಯದ ಸುಮಾರು 200 ಜನ ಸುಡಾನ್ ಸಂಘರ್ಷದಲ್ಲಿ ಸಿಲುಕಿದ್ದಾಗ, ಕಾಂಗ್ರೆಸ್ ನಾಯಕ ಸಿದ್ದರಾಮಯ್ಯ ಅವರು ತಮ್ಮ ಟ್ವಿಟರ್‌ನಲ್ಲಿ 31 ಹಕ್ಕಿ ಪಿಕ್ಕಿ ಸದಸ್ಯರ ಚಿತ್ರವನ್ನು ಪ್ರಕಟಿಸಿ, ಇವರನ್ನು ಸುರಕ್ಷಿತವಾಗಿ ಭಾರತಕ್ಕೆ ಕರೆತರುವಂತೆ ಸಂದೇಶ ಬರೆದು ಮೋದಿ ಅವರಿಗೆ ಟ್ಯಾಗ್ ಮಾಡಿದ್ದರು.
ಇದನ್ನು ಉದ್ದೇಶಿಸಿ ಮಾತನಾಡಿದ ಮೋದಿ, 'ಸುಡಾನ್‌ನಿಂದ ಭಾರತೀಯರನ್ನು ಸುರಕ್ಷತೆಯಿಂದ ಕರೆತರುವುದು ಸರ್ಕಾರದ ಮೊದಲ ಆದ್ಯತೆಯಾಗಿತ್ತು. ಇದರ ನಡುವೆ ಕಾಂಗ್ರೆಸ್, ಹಕ್ಕಿ ಪಿಕ್ಕಿಗಳ ಭಾವಚಿತ್ರವನ್ನು ಪ್ರಸಾರ ಮಾಡುವ ಮೂಲಕ ಅವರ ಜೀವಕ್ಕೆ ಕುತ್ತು ತರುವ ಪ್ರಯತ್ನ ಮಾಡಿದ್ದರು. ಅಲ್ಲಿ ಅವರ ಜೀವಕ್ಕೆ ಕುತ್ತಾದರೆ, ಕರ್ನಾಟಕದಲ್ಲಿ ಸರ್ಕಾರವನ್ನು ದೂಷಿಸಿ ಚುನಾವಣೆಯ ಲಾಭ ಪಡೆದುಕೊಳ್ಳಲು ನೋಡಿದ್ದರು' ಎಂದು ಆರೋಪಿಸಿದರು.
ಭಯೋತ್ಪಾದಕರಿಗೆ ಮೃದು ಧೋರಣೆ: 2008ರ ಜೈಪುರ ಸರಣಿ ಸ್ಫೋಟದ ಆರೋಪಿಗಳ ಖುಲಾಸೆಗೆ ಕಾರಣರಾದ ರಾಜಸ್ಥಾನದ ಕಾಂಗ್ರೆಸ್ ಸರ್ಕಾರವು ಭಯೋತ್ಪಾದಕರ ವಿರುದ್ಧ ಮೃದು ಧೋರಣೆ ಅನುಸರಿಸುತ್ತಿದೆ ಎಂದು ಮೋದಿ ಇದೇ ಸಂದರ್ಭದಲ್ಲಿ ಆರೋಪಿಸಿದರು.
'ಮುಖ್ಯಮಂತ್ರಿ ತಮ್ಮ ಶಾಸಕರನ್ನು ನಂಬುವುದಿಲ್ಲ, ಶಾಸಕರು ಮುಖ್ಯಮಂತ್ರಿಯನ್ನು ನಂಬುವುದಿಲ್ಲ' ಎಂದು ಕಾಂಗ್ರೆಸ್‌ನ ಆಂತರಿಕ ಕಚ್ಚಾಟವನ್ನು ತರಾಟೆಗೆ ತೆಗೆದುಕೊಂಡರು.
ಕಾಂಗ್ರೆಸ್ ಆಡಳಿತದಲ್ಲಿ ರಾಜಸ್ಥಾನದಲ್ಲಿ ಕಾನೂನು ಸುವ್ಯಸ್ಥೆ ಸಂಪೂರ್ಣವಾಗಿ ಹಾಳಾಗಿದೆ. ಮತಬ್ಯಾಂಕ್ ರಾಜಕಾರಣದಿಂದಾಗಿ ಸರ್ಕಾರ ಅಪರಾಧಿಗಳ ವಿರುದ್ಧ ಕ್ರಮ ಕೈಗೊಳ್ಳಲು ಹೆದರುತ್ತಿದೆ ಎಂದು ಮೋದಿ ಆರೋಪಿಸಿದರು.
ಒಳಿತು ಸಹಿಸುವುದಿಲ್ಲ: 'ಕೆಲವರು ಎಷ್ಟು ಋಣಾತ್ಮಕವಾಗಿ ಆಲೋಚಿಸುತ್ತಾರೆ ಎಂದರೆ, ದೇಶಕ್ಕೆ ಒಳಿತಾಗುವುದನ್ನೂ ಸಹಿಸುವುದಿಲ್ಲ' ಎಂದು ಪ್ರಧಾನಿ ಕುಟುಕಿದರು.
'ಎಲ್ಲವನ್ನೂ ಮತದಿಂದ ಅಳೆಯುವವರಿಗೆ ದೇಶವನ್ನು ಗಮನದಲ್ಲಿಟ್ಟುಕೊಂಡು ಯೋಜನೆಗಳನ್ನು ರೂಪಿಸಲು ಸಾಧ್ಯವಾಗುವುದಿಲ್ಲ' ಎಂದು ಯಾರ ಹೆಸರೂ ಹೇಳದೆ ವ್ಯಂಗ್ಯವಾಡಿದರು.
Cut-off box - ಪ್ರತಿಪಕ್ಷಗಳನ್ನು ಗೌರವಿಸಬೇಕು: ಅಶೋಕ್ ಗೆಹಲೋತ್ 'ಪ್ರಜಾಪ್ರಭುತ್ವದಲ್ಲಿ ಪ್ರತಿಪಕ್ಷಗಳನ್ನು ಗೌರವಿಸಬೇಕು. ಪ್ರಧಾನಿ ನರೇಂದ್ರ ಮೋದಿ ಅವರೂ ಈ ಹಾದಿಯಲ್ಲಿ ಸಾಗುತ್ತಾರೆ ಎಂದು ಭಾವಿಸಿದ್ದೇನೆ' ಎಂದು ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋತ್ ಹೇಳಿದರು. ರಾಜಸ್ಥಾನದಲ್ಲಿ ವಿವಿಧ ಯೋಜನೆಗಳಿಗೆ ಚಾಲನೆ ನೀಡುವ ಕಾರ್ಯಕ್ರಮದಲ್ಲಿ ಮೋದಿ ಸಮ್ಮುಖದಲ್ಲಿ ಮಾತನಾಡಿದ ಅವರು ಪ್ರತಿಪಕ್ಷ ಮತ್ತು ಆಡಳಿತ ಪಕ್ಷಗಳಿಗೆ ಗೌರವ ಸಿಕ್ಕರೆ ಇನ್ನೂ ಹೆಚ್ಚು ಚೈತನ್ಯದಿಂದ ದೇಶಕ್ಕೆ ಸೇವೆ ಸಲ್ಲಿಸಲು ಸಾಧ್ಯವಾಗುತ್ತದೆ ಎಂದರು. 'ಪ್ರಜಾಪ್ರಭುತ್ವದಲ್ಲಿ ಶತ್ರುತ್ವ ಅನ್ನುವುದು ಇಲ್ಲ. ಆದರೆ ಅವರವರ ಸಿದ್ಧಾಂತಗಳಿಗಾಗಿ ಹೋರಾಟ ನಡೆಯುತ್ತದೆ. ಅಲ್ಲದೇ ಎಲ್ಲರಿಗೂ ಮಾತನಾಡುವ ಹಕ್ಕು ಇದೆ. ದೇಶದ ಎಲ್ಲಾ ಜಾತಿ ಧರ್ಮಗಳಲ್ಲಿ ಪ್ರೀತಿ ಮತ್ತು ಸೋದರತ್ವ ಬೆಳೆಯಬೇಕು' ಎಂದರು. ಉದ್ವಿಗ್ನತೆ ಮತ್ತು ಹಿಂಸಾಚಾರವು ಅಭಿವೃದ್ಧಿಗೆ ಅಡ್ಡಿಯಾಗುತ್ತದೆ ಎಂದ ಗೆಹಲೋತ್ 'ನಿಮ್ಮ ಸಂದೇಶವು ಯಾವಾಗಲೂ ರಾಷ್ಟ್ರವನ್ನು ಒಟ್ಟಿಗೆ ಇರಿಸುತ್ತದೆ ಎಂದು ನಾನು ಭಾವಿಸುತ್ತೇನೆ' ಎಂದು ಪ್ರಧಾನಿ ಮೋದಿಗೆ ಹೇಳಿದರು.