ನವದೆಹಲಿ: 'ಒಂದೊಮ್ಮೆ ನ್ಯಾಯಾಲಯವು ಮದುವೆಯಾಗುವುದು ಮೂಲಭೂತ ಹಕ್ಕಲ್ಲ ಎಂಬ ನಿಲುವನ್ನು ತಳೆದಿದ್ದೇ ಆದರೆ ಅದು ದೂರಗಾಮಿ ಪರಿಣಾಮ ಬೀರಬಹುದು. ಸಂವಿಧಾನವು ವಿವಾಹಕ್ಕೆ ಸಂಬಂಧಿಸಿದ ಹಲವು ಪ್ರಮುಖ ಅಂಶಗಳನ್ನು ರಕ್ಷಿಸಿದೆ. ಅದು ಸಂಪ್ರದಾಯವನ್ನು ಮುರಿಯುವಂತಹ ವ್ಯವಸ್ಥೆಯಾಗಿದೆ' ಎಂದು ಸುಪ್ರೀಂ ಕೋರ್ಟ್ ಹೇಳಿದೆ.
ಸಲಿಂಗ ಮದುವೆಗೆ ಕಾನೂನಿನ ಮಾನ್ಯತೆ ನೀಡುವಂತೆ ಕೋರಿ ಸಲ್ಲಿಸಲಾಗಿರುವ ಅರ್ಜಿಗಳ ವಿಚಾರಣೆಯನ್ನು ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್ ನೇತೃತ್ವದ ಐವರು ಸದಸ್ಯರನ್ನೊಳಗೊಂಡ ಸಾಂವಿಧಾನಿಕ ನ್ಯಾಯಪೀಠವು ಮಂಗಳವಾರವೂ ಮುಂದುವರಿಸಿದೆ.
ಮಧ್ಯಪ್ರದೇಶ ಸರ್ಕಾರದ ಪರವಾಗಿ ನ್ಯಾಯಾಲಯಕ್ಕೆ ಹಾಜರಾಗಿದ್ದ ವಕೀಲ ರಾಕೇಶ್ ದ್ವಿವೇದಿ, 'ಮದುವೆ ಎಂಬುದು ಭಿನ್ನ ಲಿಂಗಕ್ಕೆ ಸಂಬಂಧಿಸಿದ್ದು' ಎಂದು ಹೇಳಿದರು.
'ಸಲಿಂಗ ವಿವಾಹಕ್ಕೆ ಸಂಬಂಧಿಸಿದ ವಿಚಾರವನ್ನು ಮರೆತುಬಿಡಿ. ಯಾರಿಗಾದರೂ ಮದುವೆಯಾಗುವ ಮೂಲಭೂತ ಹಕ್ಕು ಇದೆಯೇ? ಅಥವಾ ಮದುವೆಯಾಗುವ ಮೂಲಭೂತ ಹಕ್ಕೇ ಇಲ್ಲವೇ? ನಿಮ್ಮ ವಾದದ ಪ್ರಕಾರ ಯಾರಿಗೂ ಮದುವೆಯಾಗುವ ಮೂಲಭೂತ ಹಕ್ಕೇ ಇಲ್ಲ' ಎಂದು ನ್ಯಾಯಮೂರ್ತಿಗಳಾದ ಸಂಜಯ್ ಕಿಶನ್ ಕೌಲ್, ಎಸ್.ರವೀಂದ್ರ ಭಟ್, ಹಿಮಾ ಕೊಹ್ಲಿ ಮತ್ತು ಪಿ.ಎಸ್.ನರಸಿಂಹ ಅವರಿದ್ದ ಪೀಠವು ದ್ವಿವೇದಿ ಅವರಿಗೆ ಹೇಳಿತು.
'ನಾವು ವ್ಯಕ್ತಿತ್ವ, ಆಯ್ಕೆಗೆ ಸಂಬಂಧಿಸಿದ, ಏಕಾಂಗಿಯಾಗಿರಲು ಬಯಸುವ, ಖಾಸಗಿತನ ಮತ್ತು ಘನತೆಯ ಹಕ್ಕುಗಳನ್ನು ರೂಪಿಸಿದ್ದೇವೆ. ಇದೆಲ್ಲವನ್ನೂ ನೋಡಿದಾಗ ಒಬ್ಬ ವ್ಯಕ್ತಿ ಅಥವಾ ನಾಗರಿಕನು ಮದುವೆಯಾಗುವ ಹಕ್ಕು ಹೊಂದಿದ್ದಾನೆಯೇ ಎಂಬ ಪ್ರಶ್ನೆ ಎದುರಾಗುತ್ತದೆ' ಎಂದು ನ್ಯಾಯಪೀಠ ತಿಳಿಸಿದೆ.
'ಇದು ಕಲಂ 21ರ ಭಾಗವೇ ಅಥವಾ ಅಲ್ಲವೇ? ನಿರ್ಬಂಧ ಹೇರಲು ಸಾಧ್ಯವಾಗದಂತಹ ಹಕ್ಕು ಯಾವುದೂ ಇಲ್ಲ. ನಾವು ಆ ನೆಲೆಯಿಂದ ಚರ್ಚೆ ಶುರುಮಾಡಬೇಕಾಗುತ್ತದೆ. ಅಭಿವ್ಯಕ್ತಿ ಸ್ವಾತಂತ್ರ್ಯದ ಹಕ್ಕು, ಸಂಘಟನಾ ಹಕ್ಕು, ವೈಯಕ್ತಿಕ ಹಕ್ಕು, ಜೀವಿಸುವ ಹಕ್ಕು ಇವು ನಿರ್ಬಂಧ ಹೇರಲು ಸಾಧ್ಯವಾಗದಂತಹ ಹಕ್ಕುಗಳಲ್ಲ. ಈ ನೆಲೆಯಲ್ಲಿ ನೋಡುವುದಾದರೆ ಸಂಪೂರ್ಣ ಹಕ್ಕು ಎಂಬುದೇ ಇಲ್ಲ. ಜೀವಿಸುವ ಹಕ್ಕು ಇದೆ ಎಂದಾದರೆ ಅದರ ಜೊತೆಗೆ ಮದುವೆಯ ಹಕ್ಕೂ ಇರುತ್ತದೆ' ಎಂದು ಹೇಳಿದೆ.
'ಮನ ಮುಟ್ಟಿದ ಕಲಾಪ ನೇರ ಪ್ರಸಾರ'
: ಪ್ರಕರಣಗಳ ವಿಚಾರಣೆಯ ನೇರ ಪ್ರಸಾರದಿಂದಾಗಿ ನ್ಯಾಯಾಲಯದ ಕಲಾಪಗಳು ಜನಸಾಮಾನ್ಯರ ಮನೆ- ಮನಗಳನ್ನು ಹೆಚ್ಚು ತಲುಪುತ್ತಿವೆ ಎಂದು ಸುಪ್ರೀಂ ಕೋರ್ಟ್ ಮಂಗಳವಾರ ಹೇಳಿದೆ.
ಇಂಗ್ಲಿಷ್ ಹೊರತುಪಡಿಸಿ, ಇತರ ಭಾಷೆಗಳಲ್ಲೂ ಏಕಕಾಲದಲ್ಲಿ ಕೋರ್ಟ್ ಕಲಾಪ ವೀಕ್ಷಣೆ ಸಾಧ್ಯವಾಗಿಸಲು ಕೋರ್ಟ್ ಕೆಲಸ ಮಾಡುತ್ತಿದೆ. ಇದಕ್ಕಾಗಿ ಅಗತ್ಯ ತಂತ್ರಜ್ಞಾನ ಬಳಸಿಕೊಳ್ಳಲು ಪ್ರಯತ್ನಿಸುತ್ತಿದೆ. ಇದರಿಂದ ಕಲಾಪಗಳು ಇನ್ನಷ್ಟು ಹೆಚ್ಚು ಜನರನ್ನು ತಲುಪಲಿವೆ ಎಂದು ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಡಿ.ವೈ. ಚಂದ್ರಚೂಡ್ ಹೇಳಿದರು.
'ಕಲಾಪಗಳ ನೇರ ಪ್ರಸಾರವು ನಮ್ಮ ನ್ಯಾಯಾಲಯವನ್ನು ನಿಜಕ್ಕೂ ಮನೆಗಳಿಗೆ ಮತ್ತು ಜನಸಾಮಾನ್ಯರ ಹೃದಯಕ್ಕೆ ತಲುಪಿಸಿದೆ' ಎಂದು ಚಂದ್ರಚೂಡ್ ಅಭಿಪ್ರಾಯ ವ್ಯಕ್ತಪಡಿಸಿದರು.
ಐವರು ನ್ಯಾಯಮೂರ್ತಿಗಳಿರುವ ಸಂವಿಧಾನ ಪೀಠದ ನೇತೃತ್ವ ವಹಿಸಿರುವ ಅವರು, ಸಲಿಂಗ ವಿವಾಹಕ್ಕೆ ಮಾನ್ಯತೆ ನೀಡುವಂತೆ ಕೋರಿ ಸಲ್ಲಿಸಿರುವ ಅರ್ಜಿಗಳ ವಿಚಾರಣೆಯ ಎಂಟನೇ ದಿನದ ವಾದಗಳನ್ನು ಆಲಿಸಿದರು. ಮಧ್ಯಪ್ರದೇಶ ಸರ್ಕಾರದ ಪರವಾಗಿ ಹಾಜರಿದ್ದ ಹಿರಿಯ ವಕೀಲ ರಾಕೇಶ್ ದ್ವಿವೇದಿ ಅವರು, ನ್ಯಾಯಾಲಯದ ಕಲಾಪಗಳು ಸಾಮಾನ್ಯವಾಗಿ ಇಂಗ್ಲಿಷ್‌ನಲ್ಲಿ ನಡೆಯುತ್ತಿವೆ. ಇದರಿಂದ ಕೆಲವು ಪ್ರದೇಶಗಳ ಜನರಿಗೆ ಕಲಾಪ ಅರ್ಥವಾಗುವುದು ಸಾಧ್ಯವಾಗದಿರಬಹುದು ಎಂದೂ ಕಳವಳ ವ್ಯಕ್ತಪಡಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ಚಂದ್ರಚೂಡ್, 'ಇದು ಕೋರ್ಟ್ ಗಮನದಲ್ಲಿದೆ. ನಿಮಗೆ ಅಚ್ಚರಿಯಾಗಬಹುದು. ವಿಚಾರಣೆ ನಡೆದ ತಕ್ಷಣವೇ ಪ್ರಾದೇಶಿಕ ಭಾಷೆಗಳಲ್ಲಿಯೂ ಲಿಪ್ಯಂತರದ ಪ್ರತಿಗಳು ಲಭ್ಯವಾಗಿಸಲು ನಾವು ಕಾರ್ಯೋನ್ಮುಕವಾಗಿದ್ದೆವೆ' ಎಂದರು.
ಜಮಾಯಿತ್ -ಉಲೆಮಾ- ಇ- ಹಿಂದ್ ಸಂಘಟನೆ ಪರ ವಾದಿಸುತ್ತಿರುವ ಹಿರಿಯ ವಕೀಲ ಕಪಿಲ್ ಸಿಬಲ್, ಈಗ ತಂತ್ರಜ್ಞಾನವು ಒಬ್ಬ ವ್ಯಕ್ತಿಯು ಇಂಗ್ಲಿಷ್‌ನಲ್ಲಿ ಏನು ಮಾತನಾಡುತ್ತಿದ್ದಾನೆ ಎಂಬುದನ್ನಷ್ಟೇ ಅಲ್ಲ, ಜಪಾನ್ ಭಾಷೆ ಸೇರಿ ವಿವಿಧ ಭಾಷೆಗಳಲ್ಲಿ ಏನು ಮಾತನಾಡಿದರೆನ್ನುವುದನ್ನೂ ತಿಳಿಸುತ್ತದೆ' ಎಂದರು.