ಮಂಗಳೂರು: ಬಂಟ್ವಾಳ ವಿಧಾನಸಭಾ ಕ್ಷೇತ್ರದಿಂದ ಚುನಾವಣೆಗೆ ಸ್ಪರ್ಧಿಸಿ ಸೋತಿರುವ ಬಿ.ರಮಾನಾಥ ರೈ, ಇನ್ನು ಮುಂದೆ ಚುನಾವಣೆಗೆ ಸ್ಪರ್ಧಿಸುವುದಿಲ್ಲ ಎಂದು ಘೋಷಿಸಿದ್ದಾರೆ. ಆದರೆ, ಪಕ್ಷದಲ್ಲಿ ಸಕ್ರಿಯನಾಗಿ ಇರುವುದಾಗಿ ಹೇಳಿದ್ದಾರೆ.
ಮಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿದ ಅವರು, ದಕ್ಷಿಣಕನ್ನಡ ಜಿಲ್ಲೆಯಲ್ಲಿ ಕಾಂಗ್ರೆಸ್ಗೆ ಹಿನ್ನಡೆಯಾಗಿದೆ. ಗೆದ್ದ ಎಲ್ಲರಿಗೂ ಅಭಿನಂದನೆಗಳನ್ನು ಸಲ್ಲಿಸುತ್ತೇನೆ. ಕಾಂಗ್ರೆಸ್ ಮೇಲೆ ವಿಶ್ವಾಸವನ್ನಿಟ್ಟು ಜನ ಮತ ನೀಡಿದ್ದಾರೆ. ಜಿಲ್ಲೆಯಲ್ಲಿ ಸೋತರೂ ರಾಜ್ಯದಲ್ಲಿ ಸರ್ಕಾರ ನಮ್ಮದೇ ಇದೆ. ಹೀಗಾಗಿ ಜಿಲ್ಲೆಯಲ್ಲಿ ಕಾರ್ಯಕರ್ತರು ಎದೆಗುಂದಬಾರದು ಎಂದರು.
ಇದು ನನ್ನ ಕಡೆಯ ಚುನಾವಣೆ ಎಂದು ಹೇಳಿದ್ದೆ. ಈಗ ಚುನಾವಣಾ ರಾಜಕೀಯದಿಂದ ದೂರವಿದ್ದರೂ ಪಕ್ಷದ ಕಾರ್ಯಕ್ರಮದಲ್ಲಿ ಮುಂಚೂಣಿಯಲ್ಲಿರುತ್ತೇನೆ. ಜಿಲ್ಲೆಯಲ್ಲಿ ಸೋತರೂ ಗೆದ್ದರೂ ಪಕ್ಷವನ್ನು ಪ್ರಬಲವಾಗಿ ಕಟ್ಟಿದ್ದೇವೆ. ಲೋಕಸಭಾ ಚುನಾವಣೆಯಲ್ಲಿ ಅತ್ಯಧಿಕ ಸ್ಥಾನವನ್ನು ರಾಜ್ಯದಲ್ಲಿ ಕಾಂಗ್ರೆಸ್ ಗಳಿಸಲಿದೆ, ಭವಿಷ್ಯದಲ್ಲಿ ಬಿಜೆಪಿ ಖಂಡಿತ ರಾಜ್ಯದಲ್ಲಿ ಅಧಿಕಾರಕ್ಕೆ ಬರುವುದಿಲ್ಲ ಎಂದು ರೈ ಹೇಳಿದರು.
ಬಂಟ್ವಾಳದಲ್ಲಿ ನನಗೆ ಸಣ್ಣ ಅಂತರದ ಸೋಲಾಗಿದೆ. ನನಗಿಂತಲೂ ಪಕ್ಷದಲ್ಲಿ ಹಿರಿಯರಿದ್ದಾರೆ. ಆದರೆ ನನ್ನ ಸ್ಪರ್ಧೆಗೆ ನಮ್ಮಲ್ಲಿ ಅಪಸ್ವರ ಬಂತು. ಹಾಗಾಗಿ ಈ ನಿರ್ಧಾರಕ್ಕೆ ಬಂದಿದ್ದೇನೆ. ಪಕ್ಷದ ವಿರುದ್ಧ ನಾನು ಈವರೆಗೂ ಒಂದೂ ಅಪಸ್ವರ ಎತ್ತಿಲ್ಲ, ಪಕ್ಷದ ಋಣವನ್ನು ಜೀವನ ಪರ್ಯಂತ ತೀರಿಸುತ್ತೇನೆ ಎಂದರು.
ಚುನಾವಣೆ ನಾವು ಗ್ರಹಿಸಿದ ರೀತಿ ಆಗುವುದಿಲ್ಲ. ಚುನಾವಣೆ ಗೆಲ್ಲುವ ವಿಶ್ವಾಸದಲ್ಲಿದ್ದೆ, ಸಮೀಕ್ಷೆಗಳೂ ಗೆಲ್ಲುವ ರೀತಿಯೇ ಇದ್ದವು. ಸೋಲಿನ ಬಗ್ಗೆ ಅವಲೋಕನ ಮಾಡುತ್ತಿದ್ದೇನೆ. ಪುತ್ತೂರು ಹೊರತುಪಡಿಸಿ ಬೇರೆ ಎಲ್ಲಾ ಕಡೆ ಹಿನ್ನಡೆಯಾಗಿದೆ ಎಂದು ರೈ ಹೇಳಿದರು. ಗ್ಯಾರಂಟಿ ಕಾರ್ಯಕ್ರಮ ಪ್ರಮಾಣವಚನ ಸ್ವೀಕಾರವಾದ ತಕ್ಷಣ ಅನುಷ್ಠಾನಕ್ಕೆ ಬರಲಿದೆ. ಕಾಂಗ್ರೆಸ್ನ ಯೋಜನೆಗಳು ದಕ್ಷಿಣಕನ್ನಡ ಜಿಲ್ಲೆಗೆ ಹೆಚ್ಚು ಪ್ರಯೋಜನ ತಂದಿದೆ ಎಂದರು.
1985ರಿಂದಲೂ ಬಂಟ್ವಾಳ ಕ್ಷೇತ್ರದಿಂದ ಸ್ಪರ್ಧಿಸುತ್ತಿದ್ದ ರಮಾನಾಥ ರೈ ಇದುವರೆಗೆ ಹನ್ನೆರಡು ಚುನಾವಣೆಗಳಲ್ಲಿ ಕಣಕ್ಕಿಳಿದಿದ್ದರು. ಆ ಪೈಕಿ 1985, 1989, 1994, 1999, 2008 ಮತ್ತು 2013ರಲ್ಲಿ ಗೆದ್ದು 6 ಸಲ ಶಾಸಕರಾಗಿ ಆಯ್ಕೆಯಾಗಿದ್ದರು. ಆದರೆ 2004, 2018 ಮತ್ತು 2023ರ ಚುನಾವಣೆಗಳಲ್ಲಿ ಸೋತಿದ್ದಾರೆ.