ನವದೆಹಲಿ: 5 ರಿಂದ 18 ವರ್ಷದೊಳಗಿನ ಎಂಟು ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದ ಮೇಲೆ ಬಂಧಿನಕ್ಕೊಳಗಾಗಿರುವ ತಮಿಳುನಾಡಿನ 35 ವರ್ಷದ ಪಿಎಚ್‌ಡಿ ಸಂಶೋಧನಾ ವಿದ್ಯಾರ್ಥಿ ವಿರುದ್ಧ ಸಿಬಿಐ ಚಾರ್ಜ್ ಶೀಟ್ ಸಲ್ಲಿಸಿದೆ ಎಂದು ಶುಕ್ರವಾರ ಅಧಿಕಾರಿಗಳು ಹೇಳಿದ್ದಾರೆ.
ತಮಿಳುನಾಡಿನ ತಂಜಾವೂರಿನ ಪೋಕ್ಸೊ(ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ) ನ್ಯಾಯಾಲಯಕ್ಕೆ ಸಿಬಿಐ ಇತ್ತೀಚೆಗೆ ಸಲ್ಲಿಸಿದ ಚಾರ್ಜ್ ಶೀಟ್‌ನಲ್ಲಿ, ಆರೋಪಿ ವಿಕ್ಟರ್ ಜೇಮ್ಸ್ ರಾಜಾ ಕಳೆದ ನಾಲ್ಕು ವರ್ಷಗಳಿಂದ ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ ಎಂದು ಕೇಂದ್ರ ತನಿಖಾ ಸಂಸ್ಥೆ(ಸಿಬಿಐ) ಆರೋಪಿಸಿದೆ.
ಆರೋಪಿ, ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯಕ್ಕೆ ಸಂಬಂಧಿಸಿದ ಫೋಟೋಗಳು ಹಾಗೂ ವಿಡಿಯೋಗಳನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಹಾಕುವುದಾಗಿ ಬೆದರಿಕೆ ಹಾಕಿದ್ದಾನೆ. ಅಲ್ಲದೆ ಇತರ ವಯಸ್ಕರೊಂದಿಗಿನ ಲೈಂಗಿಕ ಕ್ರಿಯೆಗಳನ್ನು ವೀಕ್ಷಿಸುವಂತೆ ಅವರ ಮೇಲೆ ಒತ್ತಡ ಹಾಕಿದ್ದಾನೆ” ಎಂದು ಸಿಬಿಐ ವಕ್ತಾರರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಇಂಟರ್‌ಪೋಲ್‌ನ ದತ್ತಾಂಶ ಸಂಗ್ರಹಣೆಯಿಂದ ಈ ಚಿತ್ರಗಳು ಹಾಗೂ ವಿಡಿಯೋಗಳು ಸಿಬಿಐಗೆ ದೊರಕಿದ್ದವು. ನಂತರ ಡಿಜಿಟಲ್ ವಿಧಿವಿಜ್ಞಾನ ಉಪಕರಣಗಳನ್ನು ಬಳಸಿಕೊಂಡು ನಡೆಸಿದ ತನಿಖೆಯಿಂದ ತಂಜಾವೂರಿನ ಈ ಕಾಮುಕನ ಕೃತ್ಯ ಬೆಳಕಿಗೆ ಬಂದಿತ್ತು.
ಕೃತ್ಯಕ್ಕೆ ಬಳಸಲಾದ ಎಲೆಕ್ಟ್ರಾನಿಕ್ ಉಪಕರಣಗಳನ್ನು ಆರೋಪಿಗೆ ಸಂಬಂಧಿಸಿದ ಜಾಗಗಳಲ್ಲಿ ಶೋಧ ನಡೆಸಿ ವಶಪಡಿಸಿಕೊಳ್ಳಲಾಗಿದೆ.