ನವದೆಹಲಿ: ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡಗಳ (ದೌರ್ಜನ್ಯ ತಡೆ) ಕಾಯ್ದೆ ಕಠಿಣವಾಗಿದ್ದು, ಆರೋಪಿ ಮೇಲೆ ಗಂಭೀರ ಪರಿಣಾಮ ಬೀರುವಂಥದ್ದಾಗಿದೆ. ಹೀಗಾಗಿ, ಯಾವುದೇ ದೂರಿಗೆ ಸಂಬಂಧಿಸಿ ವಾಸ್ತವಾಂಶಗಳನ್ನು ಪರ್ಯಾಲೋಚಿಸದೇ ಯಾಂತ್ರಿಕವಾಗಿ ಈ ಕಾಯ್ದೆಯಡಿ ಪ್ರಕರಣ ದಾಖಲಿಸಬಾರದು ಎಂದು ಸುಪ್ರೀಂಕೋರ್ಟ್ ಪೊಲೀಸರಿಗೆ ಸೂಚಿಸಿದೆ.
ಅರ್ಜಿಯೊಂದರ ವಿಚಾರಣೆ ನಡೆಸಿದ, ನ್ಯಾಯಮೂರ್ತಿಗಳಾದ ದಿನೇಶ್ ಮಾಹೇಶ್ವರಿ ಹಾಗೂ ಅಹ್ಸಾನುದ್ದೀನ್ ಅಮಾನುಲ್ಲಾ ಅವರಿದ್ದ ನ್ಯಾಯಪೀಠ, 'ತಮ್ಮ ಮುಂದಿರುವ ಪ್ರಕರಣಕ್ಕೆ ಕಾಯ್ದೆಯ ನಿಬಂಧನೆಗಳು ಮೇಲ್ನೋಟಕ್ಕೆ ಅನ್ವಯವಾಗುತ್ತವೆ ಎಂಬುದು ಸಂಬಂಧಪಟ್ಟ ಅಧಿಕಾರಿಗೆ ಮನದಟ್ಟಾಗಬೇಕು' ಎಂದು ಹೇಳಿದೆ.
ಜಿ.ಎಂ. ಇನ್‌ಫನೈಟ್ ಡ್ವೆಲ್ಲಿಂಗ್ (ಇಂಡಿಯಾ) ಪ್ರೈವೇಟ್ ಲಿಮಿಟೆಡ್ ಎಂಬ ಕಂಪನಿಯ ವ್ಯವಸ್ಥಾಪಕ ನಿರ್ದೇಶಕ ಗುಲಾಮ್ ಮುಸ್ತಫಾ ಎಂಬುವವರ ವಿರುದ್ಧ ಬೆಂಗಳೂರು ಪೊಲೀಸರು ದಾಖಲಿಸಿದ್ದ ಎಫ್‌ಐಆರ್ ಅನ್ನು ವಜಾಗೊಳಿಸಿದ ನ್ಯಾಯಪೀಠ, ಅವರ ವಿರುದ್ಧದ ವಿಚಾರಣೆಯನ್ನು ರದ್ದುಗೊಳಿಸಿದೆ.
ಯಾವುದೇ ದೂರಿನ ಆಧಾರದ ಮೇಲೆ ವ್ಯಕ್ತಿಯೊಬ್ಬರ ವಿರುದ್ಧ ಎಸ್‌ಸಿ/ಎಸ್‌ಟಿ (ದೌರ್ಜನ್ಯ ತಡೆ) ಕಾಯ್ದೆಯಂತಹ ಕಠಿಣ ಕಾಯ್ದೆಗಳಡಿ ಎಫ್‌ಐಆರ್ ದಾಖಲಿಸುವ ಮುನ್ನ ಎಚ್ಚರಿಕೆಯಿಂದ ಇರಬೇಕಾದ್ದು ಅಧಿಕಾರಿಗಳ ಕರ್ತವ್ಯ' ಎಂದು ನ್ಯಾಯಪೀಠ ಹೇಳಿದೆ.
'ಈ ಪ್ರಕರಣಕ್ಕೆ ಸಂಬಂಧಿಸಿ ನ್ಯಾಯಾಲಯ ವ್ಯಕ್ತಪಡಿಸುವ ಅಭಿಪ್ರಾಯಗಳು ಯಾವುದೇ ವಿಶೇಷ/ಕಠಿಣ ಕಾಯ್ದೆ ಅನ್ವಯಿಸುವಿಕೆಯನ್ನು ದುರ್ಬಲಗೊಳಿಸುವ ಉದ್ದೇಶ ಹೊಂದಿಲ್ಲ ಎಂಬುದನ್ನು ಸ್ಪಷ್ಟಪಡಿಸುತ್ತೇವೆ. ಯಾಂತ್ರಿಕವಾಗಿ ಇಂಥ ಕಾನೂನುಗಳಡಿ ಪ್ರಕರಣ ದಾಖಲಿಸಬಾರದು ಎಂಬುದನ್ನು ಪೊಲೀಸರಿಗೆ ಜ್ಞಾಪಿಸುತ್ತಿದ್ದೇವೆ' ಎಂದು ನ್ಯಾಯಮೂರ್ತಿಗಳು ಹೇಳಿದರು.
ಪ್ರಕರಣವೇನು?
ಬೆಂಗಳೂರು ನಗರದಲ್ಲಿ ಜಮೀನು ಅಭಿವೃದ್ಧಿಪಡಿಸುವುದಕ್ಕೆ ಸಂಬಂಧಿಸಿ ವೆಂಕಟೇಶ್ ಎಂಬುವವರೊಂದಿಗೆ ಕಂಪನಿಯು ಒಪ್ಪಂದ ಮಾಡಿಕೊಂಡಿತ್ತು. ಒಪ್ಪಂದದಂತೆ ತನಗೆ ಪರಿಹಾರ ಸಿಗಲಿಲ್ಲ ಎಂದು ದೂರಿ ವೆಂಕಟೇಶ್ ಅವರು ಕಂಪನಿಯ ವ್ಯವಸ್ಥಾಪಕ ನಿರ್ದೇಶಕ ಮುಸ್ತಫಾ ವಿರುದ್ಧ ಸಿವಿಲ್ ದೂರು ದಾಖಲಿಸಿದ್ದರು.
ನಂತರ, ಮುಸ್ತಫಾ ವಿರುದ್ಧ ವಂಚನೆ, ಫೋರ್ಜರಿ ಹಾಗೂ ಎಸ್‌ಸಿ/ಎಸ್‌ಟಿ (ದೌರ್ಜನ್ಯ ತಡೆ) ಕಾಯ್ದೆಯಡಿ ಪ್ರಕರಣಗಳನ್ನು ದಾಖಲಿಸಿದ್ದರು. ಈ ಪ್ರಕರಣದಲ್ಲಿ ಕರ್ನಾಟಕ ಹೈಕೋರ್ಟ್ ನೀಡಿದ್ದ ಆದೇಶವನ್ನು ಪ್ರಶ್ನಿಸಿ ಮುಸ್ತಫಾ ಅವರು ಸುಪ್ರೀಂಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದ್ದರು.
ರಾಷ್ಟ್ರಪತಿ ಅಂಕಿತ ಹಾಕಿದ ರಾಜ್ಯದ ಕಾನೂನನ್ನು ಅಸಿಂಧುಗೊಳಿಸುವಂತಿಲ್ಲ
ಒಂದು ವಿಷಯಕ್ಕೆ ಸಂಬಂಧಿಸಿ ರಾಜ್ಯವೊಂದು ರೂಪಿಸುವ ಕಾಯ್ದೆಗೆ ರಾಷ್ಟ್ರಪತಿ ಅಂಕಿತ ಹಾಕಿದ ನಂತರ ತಾರತಮ್ಯದಿಂದ ಕೂಡಿದೆ ಹಾಗೂ ಗೊತ್ತುಗುರಿಯಿಲ್ಲದ್ದು ಎಂಬ ಆಧಾರದಲ್ಲಿ ಕಾಯ್ದೆಯನ್ನು ಅಸಿಂಧುಗೊಳಿಸುವಂತಿಲ್ಲ ಎಂದು ಸುಪ್ರೀಂಕೋರ್ಟ್ ಹೇಳಿದೆ. ಒಂದು ವೇಳೆ ರಾಜ್ಯದ ಕಾಯ್ದೆಯು ಕೇಂದ್ರದ ಕಾನೂನಿಗೆ ವಿರುದ್ಧವಾಗಿದ್ದರೂ ಕೂಡ ಅದನ್ನು ಅಸಿಂಧುಗೊಳಿಸುವಂತಿಲ್ಲ ಎಂದು ನ್ಯಾಯಮೂರ್ತಿಗಳಾದ ದಿನೇಶ್ ಮಾಹೇಶ್ವರಿ ಹಾಗೂ ಸಂಜಯ್ ಕುಮಾರ್ ಅವರಿದ್ದ ನ್ಯಾಯಪೀಠ ಹೇಳಿದೆ. 'ತಮಿಳುನಾಡು ಹೆದ್ದಾರಿಗಳ ಕಾಯ್ದೆ-2001'ರ ನಿಬಂಧನೆಗಳು ಕೇಂದ್ರ ಸರ್ಕಾರ ಜಾರಿಗೊಳಿಸಿರುವ 'ನ್ಯಾಯಯುತ ಪರಿಹಾರ ಮತ್ತು ಭೂಸ್ವಾಧೀನ ಪುನರ್ವಸತಿ ಮತ್ತು ಪುನರ್‌ನಿರ್ಮಾಣದಲ್ಲಿ ಪಾರದರ್ಶಕತೆ ಕಾಯ್ದೆ'ಗೆ ವಿರುದ್ಧವಾಗಿದೆ ಎಂದು ದೂರಿ ಸಲ್ಲಿಸಲಾಗಿದ್ದ ಅರ್ಜಿಯನ್ನು ನ್ಯಾಯಪೀಠ ತಳ್ಳಿ ಹಾಕಿದೆ.