ನವದೆಹಲಿ: ಎನ್ಸಿಇಆರ್ಟಿಯ 10ನೇ ತರಗತಿಯ ಪಠ್ಯಪುಸ್ತಕದಿಂದ ಚಾರ್ಲ್ಸ್ ಡಾರ್ವಿನ್ ರ ಮಾನವ ವಿಕಾಸ ಸಿದ್ಧಾಂತವನ್ನು ಕೈಬಿಟ್ಟಿರುವುದನ್ನು ಸಮರ್ಥಿಸಿಕೊಂಡಿರುವ ಕೇಂದ್ರ ಸಹಾಯಕ ಶಿಕ್ಷಣ ಸಚಿವ ಸುಭಾಷ ಸರ್ಕಾರ್ ಅವರು,ಕೇವಲ ಪ್ರಚಾರಕ್ಕಾಗಿ ಈ ಕುರಿತು ವಿವಾದವನ್ನು ಸೃಷ್ಟಿಸಲಾಗಿದೆ ಎಂದು ಹೇಳಿದ್ದಾರೆ.
ನವದೆಹಲಿ: ಎನ್ಸಿಇಆರ್ಟಿಯ 10ನೇ ತರಗತಿಯ ಪಠ್ಯಪುಸ್ತಕದಿಂದ ಚಾರ್ಲ್ಸ್ ಡಾರ್ವಿನ್ ರ ಮಾನವ ವಿಕಾಸ ಸಿದ್ಧಾಂತವನ್ನು ಕೈಬಿಟ್ಟಿರುವುದನ್ನು ಸಮರ್ಥಿಸಿಕೊಂಡಿರುವ ಕೇಂದ್ರ ಸಹಾಯಕ ಶಿಕ್ಷಣ ಸಚಿವ ಸುಭಾಷ ಸರ್ಕಾರ್ ಅವರು,ಕೇವಲ ಪ್ರಚಾರಕ್ಕಾಗಿ ಈ ಕುರಿತು ವಿವಾದವನ್ನು ಸೃಷ್ಟಿಸಲಾಗಿದೆ ಎಂದು ಹೇಳಿದ್ದಾರೆ.
10ನೇ ತರಗತಿಯ ಪಠ್ಯಪುಸ್ತಕದಲ್ಲಿಯ 'ಆನುವಂಶಿಕತೆ ಮತ್ತು ವಿಕಸನ' ಅಧ್ಯಾಯವನ್ನು 'ಆನುವಂಶಿಕತೆ 'ಎಂದು ಬದಲಿಸಲಾಗುವುದು ಎಂದು ಎನ್ಸಿಇಆರ್ಟಿ ಕಳೆದ ವರ್ಷ ಪ್ರಕಟಿಸಿತ್ತು.
ಡಾರ್ವಿನ್ ಸಿದ್ಧಾಂತವನ್ನು ಕೈಬಿಡುವುದಕ್ಕೆ ಸಂಬಂಧಿಸಿದಂತೆ ಎ.20ರಂದು ದೇಶಾದ್ಯಂತದ 1,800ಕ್ಕೂ ಅಧಿಕ ವಿಜ್ಞಾನಿಗಳು, ಶಿಕ್ಷಕರು, ಶಿಕ್ಷಣ ತಜ್ಞರು ಮತ್ತು ವಿಜ್ಞಾನಪ್ರಿಯರು ಎನ್ಸಿಇಆರ್ಟಿಗೆ ಬಹಿರಂಗ ಪತ್ರವನ್ನು ಬರೆದಿದ್ದರು.
ವಿದ್ಯಾರ್ಥಿಗಳು ವಿಜ್ಞಾನದ ಈ ಮೂಲಭೂತ ಸಂಶೋಧನೆಯ ಅಧ್ಯಯನದಿಂದ ವಂಚಿತಗೊಂಡರೆ ಅವರ ಚಿಂತನಾ ಪ್ರಕ್ರಿಯೆಯಲ್ಲಿ ಅಪೂರ್ಣರಾಗಿ ಉಳಿಯಲಿದ್ದಾರೆ ಮತ್ತು ಇದು ಗಂಭೀರ ವಿಷಯವಾಗಿದೆ. ವೈಜ್ಞಾನಿಕ ಮನೋಭಾವ ಮತ್ತು ತರ್ಕಬದ್ಧ ವಿಶ್ವ ದೃಷ್ಟಿಕೋನವನ್ನು ನಿರ್ಮಿಸುವಲ್ಲಿ ವಿಕಾಸ ಪ್ರಕ್ರಿಯೆಯ ತಿಳುವಳಿಕೆಯು ನಿರ್ಣಾಯಕವಾಗಿದೆ ಎಂದು ಅವರು ಪತ್ರದಲ್ಲಿ ಹೇಳಿದ್ದಾರೆ.
ಡಾರ್ವಿನ್ ಸಿದ್ಧಾಂತವನ್ನು ಕೈಬಿಟ್ಟಿರುವುದು ಕೋವಿಡ್ ಸಾಂಕ್ರಾಮಿಕದ ಬಳಿಕ ವಿದ್ಯಾರ್ಥಿಗಳಿಗೆ ಕಲಿಕೆಯ ಹೊರೆಯನ್ನು ತಗ್ಗಿಸಲು ಪಠ್ಯಕ್ರಮವನ್ನು ತರ್ಕಬದ್ಧಗೊಳಿಸುವ ಎನ್ಸಿಇಆರ್ಟಿ ಪ್ರಕ್ರಿಯೆಯ ಭಾಗವಾಗಿದೆ ಎಂದು ಹೇಳಿದ ಸರ್ಕಾರ್, ಮಕ್ಕಳು ಅಧ್ಯಯನ ಮಾಡಲು ಬಯಸಿದರೆ ಡಾರ್ವಿನ್ ಸಿದ್ಧಾಂತವು ವೆಬ್ಸೈಟ್ಗಳಲ್ಲಿ ಲಭ್ಯವಿದೆ. 12ನೇ ತರಗತಿಯ ಪಠ್ಯಕ್ರಮದಲ್ಲಿ ಈಗಾಗಲೇ ಡಾರ್ವಿನ್ ಸಿದ್ಧಾಂತವಿದೆ,ಹೀಗಾಗಿ ಇಂತಹ ಸುಳ್ಳು ಪ್ರಚಾರಗಳನ್ನು ಮಾಡಬಾರದು ಎಂದರು.
ಡಾರ್ವಿನ್ ನ ಮಾನವ ವಿಕಾಸ ಸಿದ್ಧಾಂತವು 'ವೈಜ್ಞಾನಿಕವಾಗಿ ತಪ್ಪು' ಮತ್ತು ಅದನ್ನು ಬದಲಿಸಬೇಕಿದೆ ಎಂದು 2018ರಲ್ಲಿ ಬಿಜೆಪಿ ನಾಯಕ ಹಾಗೂ ಮಾಜಿ ಕೇಂದ್ರ ಸಚಿವ ಸತ್ಯಪಾಲ ಸಿಂಗ್ ಹೇಳಿದ್ದರು.
'ಮಾನವನು ಭೂಮಿಯ ಮೇಲೆ ಕಾಣಿಸಿಕೊಂಡಾಗಿನಿಂದಲೂ ಆತ ಮಾನವನಾಗಿಯೇ ಇದ್ದಾನೆ. ಮಂಗವು ಮಾನವನಾಗಿ ಪರಿವರ್ತನೆಗೊಂಡಿದ್ದನ್ನು ತಾವು ನೋಡಿದ್ದಾಗಿ ನಮ್ಮ ಪೂರ್ವಜರು ಸೇರಿದಂತೆ ಯಾರೂ ಲಿಖಿತವಾಗಿ ಅಥವಾ ಮೌಖಿಕವಾಗಿ ಹೇಳಿರಲಿಲ್ಲ. ನಾವು ಓದಿದ ಪುಸ್ತಕಗಳಲ್ಲಿ ಅಥವಾ ನಮ್ಮ ಅಜ್ಜಿ-ಅಜ್ಜಿ ಹೇಳಿದ್ದ ಕಥೆಗಳಲ್ಲಿ ಇಂತಹ ಉಲ್ಲೇಖವಿರಲಿಲ್ಲ' ಎಂದು ಅವರು ಹೇಳಿದ್ದರು.