ನವದೆಹಲಿ: 'ದಿ ಕೇರಳ ಸ್ಟೋರಿ' ಚಿತ್ರ ಪ್ರದರ್ಶನವನ್ನು ನಿಷೇಧಿಸಿರುವ ಪಶ್ಚಿಮ ಬಂಗಾಳ ಸರ್ಕಾರ ಹಾಗೂ ಚಿತ್ರ ಪ್ರದರ್ಶನಕ್ಕೆ ಭದ್ರತೆ ಒದಗಿಸದ ತಮಿಳುನಾಡು ಸರ್ಕಾರಕ್ಕೆ ಸುಪ್ರೀಂ ಕೋರ್ಟ್ ಶುಕ್ರವಾರ ನೋಟಿಸ್ ನೀಡಿದೆ. ಬುಧವಾರದ (ಮೇ 17) ಒಳಗೆ ಪ್ರತಿಕ್ರಿಯೆ ಸಲ್ಲಿಸುವಂತೆ ನ್ಯಾಯಾಲಯ ಹೇಳಿದೆ.
ಈ ಸಂಬಂಧ ಚಿತ್ರ ನಿರ್ಮಾಪಕರು ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದರು. ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್ ಹಾಗೂ ನ್ಯಾಯಮೂರ್ತಿ ಪಿ.ಎಸ್.ನರಸಿಂಹ ಅವರಿದ್ದ ಪೀಠವು ಅರ್ಜಿಯ ವಿಚಾರಣೆ ನಡೆಸಿತು.
'ದೇಶದ ಬೇರೆಲ್ಲ ರಾಜ್ಯಗಳಲ್ಲೂ ಸಿನಿಮಾ ತೆರೆಕಂಡಿದೆ. ಪಶ್ಚಿಮ ಬಂಗಾಳವು ಈ ಎಲ್ಲ ರಾಜ್ಯಗಳಿಗಿಂತ ಯಾವುದೇ ರೀತಿಯಲ್ಲೂ ಭಿನ್ನವಾಗಿಲ್ಲ' ಎಂದು ಪಶ್ಚಿಮ ಬಂಗಾಳ ಸರ್ಕಾರಕ್ಕೆ ಹೇಳಿದೆ.
'ದೇಶದ ಇತರೆ ಭಾಗಗಳಲ್ಲಿ ಸಿನಿಮಾವು ಶಾಂತಿಯುತವಾಗಿ ಪ್ರದರ್ಶನ ಕಾಣುತ್ತಿದೆ. ಆದರೆ, ಇದು ಪಶ್ಚಿಮ ಬಂಗಾಳದಲ್ಲಿ ಮಾತ್ರ ಯಾಕೆ ಸಾಧ್ಯವಾಗುವುದಿಲ್ಲ. ಜೊತೆಗೆ ಚಿತ್ರ ಬಿಡುಗಡೆ ನಂತರ ಮೂರು ದಿನಗಳ ಕಾಲ ಇಲ್ಲಿ ಚಿತ್ರವು ಪ್ರದರ್ಶನ ಕಂಡಿದೆ' ಎಂದು ಚಿತ್ರ ನಿರ್ಮಾಪಕರ ಪರ ಹಿರಿಯ ವಕೀಲ ಹರೀಶ್ ಸಾಳ್ವೆ ವಾದಿಸಿದರು.
'ಸಿನಿಮಾ ಕಾರಣದಿಂದಾಗಿ ಸಮಾಜದಲ್ಲಿ ಕಾನೂನು ಸುವ್ಯವಸ್ಥೆಗೆ ಧಕ್ಕೆ ಬರುತ್ತದೆ ಎಂಬ ಗುಪ್ತಚರ ಮಾಹಿತಿ ಇದೆ. ಆದ್ದರಿಂದ ಸಿನಿಮಾ ನಿಷೇಧಿಸಲು ರಾಜ್ಯ ಸರ್ಕಾರಗಳಿಗೆ ಹಕ್ಕಿದೆ. ಚಿತ್ರ ನಿರ್ಮಾಪಕರು ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಬೇಕಿತ್ತು' ಎಂದು ಪಶ್ಚಿಮ ಬಂಗಾಳ ಪರ ಹಿರಿಯ ವಕೀಲ ಅಭಿಷೇಕ್‌ಮನು ಸಿಂಘ್ವಿ ವಾದಿಸಿದರು.
'ಚಿತ್ರಮಂದಿರಗಳ ಮೇಲೆ ದಾಳಿಗಳಾಗುತ್ತಿವೆ. ಕುರ್ಚಿಗಳಿಗೆ ಬೆಂಕಿ ಹಚ್ಚಲಾಗುತ್ತಿದೆ ಎಂದಾಕ್ಷಣ ಸಿನಿಮಾ ನಿಷೇಧಿಸಬೇಕು ಎಂದೇನೂ ಇಲ್ಲ. ಭದ್ರತೆ ಒದಗಿಸುವುದು ನಿಮ್ಮ ಆದ್ಯ ಕರ್ತವ್ಯ. ಆದ್ದರಿಂದ ಚಿತ್ರಮಂದಿರಗಳ ಭದ್ರತೆಗೆ ಯಾವ ಕ್ರಮ ಕೈಗೊಂಡಿದ್ದೀರಿ' ಎಂದು ತಮಿಳುನಾಡು ಸರ್ಕಾರವನ್ನು ಪೀಠ ಪ್ರಶ್ನಿಸಿದೆ. ತಮಿಳುನಾಡು ಪರ ಹೆಚ್ಚುವರಿ ಅಡ್ವೊಕೇಟ್ ಜನರಲ್ ಅಮಿತ್ ಆನಂದ್ ತಿವಾರಿ ಅವರು ವಾದ ಮಂಡಿಸಿದರು.
ನ್ಯಾಯಾಲವು ಮುಂದಿನ ವಿಚಾರಣೆಯನ್ನು ಗುರುವಾರಕ್ಕೆ (ಮೇ 18) ಮುಂದೂಡಿತು.
ನ್ಯಾಯಾಲಯ ಹೇಳಿದ್ದು...
* ದೇಶದ ಬೇರೆಲ್ಲಾ ಕಡೆ ಸಿನಿಮಾ ಪ್ರದರ್ಶನವಾಗುತ್ತಿದೆ. ಆದರೆ, ಈ ಎರಡು ರಾಜ್ಯಗಳಲ್ಲಿ ಯಾಕಾಗಿ ಸಿನಿಮಾಕ್ಕೆ ನಿಷೇಧ ಹೇರಲಾಗಿದೆ ಎಂಬ ಕಾರಣ ತಿಳಿಯುತ್ತಿಲ್ಲ
* ದೇಶದ ಬೇರೆ ರಾಜ್ಯಗಳ ಹಾಗೂ ಪಶ್ಚಿಮ ಬಂಗಾಳದ ಜನಸಂಖ್ಯಾ ಚಿತ್ರಣಕ್ಕೂ ಯಾವುದೇ ವ್ಯತ್ಯಾಸವಿಲ್ಲ. ಆದರೂ ಯಾಕಾಗಿ ಇಲ್ಲಿ ಚಿತ್ರವನ್ನು ನಿಷೇಧಿಸಲಾಗಿದೆ
* ಜನಸಂಖ್ಯಾ ಚಿತ್ರಣಕ್ಕೂ ಸಿನಿಮಾದ ಕಲಾತ್ಮಕತೆಗೂ ಯಾವುದೇ ಸಂಬಂಧ ಇಲ್ಲ. ಜನರಿಗೆ ಸಿನಿಮಾ ಇಷ್ಟವಾಗಲಿಲ್ಲ ಎಂದರೆ, ಅವರು ಸಿನಿಮಾ ನೋಡುವುದಿಲ್ಲ