ನವದೆಹಲಿ: 'ಸರಿಪಡಿಸಲು ಸಾಧ್ಯವೇ ಇಲ್ಲ ಎನ್ನುವ ಮಟ್ಟಕ್ಕೆ ಮುರಿದುಬಿದ್ದ ಮದುವೆ ಪ್ರಕರಣಗಳಲ್ಲಿ ತನ್ನ ವಿಶೇಷಾಧಿಕಾರ ಬಳಸಿಕೊಂಡು, ಆರು ತಿಂಗಳ ಕಡ್ಡಾಯ ಕಾಯುವಿಕೆ ಮತ್ತು ಸಂಬಂಧಿತ ಪ್ರಕ್ರಿಯೆಗಳನ್ನು ರದ್ದುಪಡಿಸಿ ವಿಚ್ಛೇದನ ನೀಡಬಹುದು' ಎಂದು ಸುಪ್ರೀಂ ಕೋರ್ಟ್ ಸಂವಿಧಾನ ಪೀಠವು ಒಮ್ಮತದ ತೀರ್ಪು ನೀಡಿದೆ.
ಒಮ್ಮತದ ವಿಚ್ಚೇದನ ಬಯಸುತ್ತಿರುವ ದಂಪತಿಯು, ವಿಚ್ಚೇದನ ಪಡೆಯುವ ಮೊದಲು ಆರು ತಿಂಗಳ ಕಡ್ಡಾಯ ಕಾಯುವಿಕೆ (ಕೂಲಿಂಗ್ ಆಫ್ ಪೀರಿಯಡ್) ಪೂರೈಸಬೇಕು ಎಂದು ಹಿಂದೂ ವಿವಾಹ ಕಾಯ್ದೆಯ 13ನೇ ಬಿ ಸೆಕ್ಷನ್ ಹೇಳುತ್ತದೆ. ಸಂವಿಧಾನದ 142 (1)ನೇ ವಿಧಿಯು ನೀಡಿರುವ ವಿಶೇಷಾಧಿಕಾರವನ್ನು ಬಳಸಿಕೊಂಡು ಸುಪ್ರೀಂ ಕೋರ್ಟ್, ಆರು ತಿಂಗಳ ಕಡ್ಡಾಯ ಕಾಯುವಿಕೆಯನ್ನು ರದ್ದುಪಡಿಸಬಹುದೇ ಎಂದು ಕೋರಿದ್ದ ಅರ್ಜಿಯ ವಿಚಾರಣೆ ನಡೆಸಿದ್ದ ಐವರು ನ್ಯಾಯಮೂರ್ತಿಗಳಿದ್ದ ಸಂವಿಧಾನ ಪೀಠವು ಈ ತೀರ್ಪು ನೀಡಿದೆ.
ನ್ಯಾಯಮೂರ್ತಿಗಳಾದ ಸಂಜಯ್ ಕಿಶನ್ ಕೌಲ್, ಸಂಜೀವ್ ಖನ್ನಾ, ಅಭಯ್ ಎಸ್. ಒಕಾ, ವಿಕ್ರಮನಾಥ್ ಮತ್ತು ಜೆ.ಕೆ.ಮಾಹೇಶ್ವರಿ ಅವರಿದ್ದ ಸಂವಿಧಾನ ಪೀಠವು ಈ ಅರ್ಜಿಯ ವಿಚಾರಣೆ ನಡೆಸಿತ್ತು. ಪೀಠವು 2022ರ ಸೆಪ್ಟೆಂಬರ್ 29ರಂದು ತೀರ್ಪನ್ನು ಕಾಯ್ದಿರಿಸಿತ್ತು. 'ವಿಶೇಷಾಧಿಕಾರವನ್ನು ಬಳಸಿಕೊಂಡು ಆರು ತಿಂಗಳ ಕಡ್ಡಾಯ ಕಾಯುವಿಕೆ ಮತ್ತು ಸಂಬಂಧಿತ ಪ್ರಕ್ರಿಯೆಗಳನ್ನು ರದ್ದುಪಡಿಸಬಹುದು. ಹಾಗೆಂದು ವಿಚ್ಛೇದನ ಬಯಸುವವರು ನೇರವಾಗಿ ಇಲ್ಲಿಗೆ (ಸುಪ್ರೀಂ ಕೋರ್ಟ್) ಬರುವಂತಿಲ್ಲ' ಎಂದು ಪೀಠವು ತನ್ನ ತೀರ್ಪಿನಲ್ಲಿ ಸ್ಪಷ್ಟಪಡಿಸಿದೆ.
'ಸರಿಪಡಿಸಲು ಸಾಧ್ಯವೇ ಇಲ್ಲದಷ್ಟು ಮುರಿದುಹೋದ ಮದುವೆ ಎಂದು ಕಾರಣ ನೀಡಿ ತಕ್ಷಣವೇ ವಿಚ್ಚೇದನ ಪಡೆಯಬಹುದು ಎಂಬುದು ಹಕ್ಕಲ್ಲ. ಬದಲಿಗೆ ಸುಪ್ರೀಂ ಕೋರ್ಟ್ ಈ ವಿಚಾರದಲ್ಲಿ ತನ್ನ ವಿವೇಚನೆಯನ್ನು ಬಳಸಬೇಕಾಗುತ್ತದೆ. ಎರಡೂ ಕಡೆಯವರಿಗೆ ನ್ಯಾಯ ಸಲ್ಲಬೇಕು ಎಂಬುದನ್ನು ಗಮನದಲ್ಲಿ ಇರಿಸಿಕೊಂಡು, ಈ ವಿವೇಚನಾಧಿಕಾರವನ್ನು ಅತ್ಯಂತ ಸೂಕ್ಷ್ಮವಾಗಿ ಮತ್ತು ಎಚ್ಚರಿಕೆಯಿಂದ ಬಳಸಬೇಕಾಗುತ್ತದೆ' ಎಂದು ಪೀಠವು ತನ್ನ ತೀರ್ಪಿನಲ್ಲಿ ವಿವರಿಸಿದೆ.
'ಒಂದುಗೂಡಿಸುವುದು ಸಾಧ್ಯವೇ ಇಲ್ಲ ಎನ್ನುವಷ್ಟು ಮದುವೆ ಹಾಳಾಗಿರುವಾಗ, ಆ ಸತ್ಯವನ್ನು ಒಪ್ಪಿಕೊಳ್ಳುವುದರಲ್ಲಿ ಸಾರ್ವಜನಿಕ ಹಿತಾಸಕ್ತಿ ಅಡಗಿದೆ. ದಂಪತಿಯಲ್ಲಿ ಯಾರನ್ನೇ ಆಗಲಿ, ಬಲವಂತವಾಗಿ ಜೀವನವನ್ನು ಮರುಆರಂಭಿಸು ಎಂದು ದೂಡುವುದರಿಂದ ಮತ್ತು ಮುಗಿದೇ ಹೋಗಿರುವ ಸಂಬಂಧದ ಮದುವೆಗೆ ಇಬ್ಬರನ್ನೂ ಕಟ್ಟಿಹಾಕುವುದರಿಂದ ಏನನ್ನೂ ಸಾಧಿಸಲು ಸಾಧ್ಯವಿಲ್ಲ' ಎಂದು ಪೀಠವು ತನ್ನ ತೀರ್ಪಿನಲ್ಲಿ ವಿವರಿಸಿದೆ.
'ಕಡ್ಡಾಯ ಕಾಯುವಿಕೆಗೆ ಆದೇಶಿಸುವ ಮುನ್ನ ದಂಪತಿಯು ಪ್ರತ್ಯೇಕವಾಗಿ ಒಂದೂವರೆ ವರ್ಷ ಕಳೆದಿರಬೇಕು ಎಂದು ಕಾಯ್ದೆಯು ಹೇಳುತ್ತದೆ. ಭಿನ್ನಾಭಿಪ್ರಾಯಗಳನ್ನು, ಸಮಸ್ಯೆಗಳನ್ನು ಸರಿಪಡಿಸಿಕೊಂಡು ಮದುವೆ ಸಂಬಂಧವನ್ನು ಮುಂದುವರಿಸಲು ದಂಪತಿಗೆ ಆ ಒಂದೂವರೆ ವರ್ಷವು ಸೂಕ್ತ ಸಮಯವೇ ಆಗಿದೆ. ಹೀಗಿದ್ದೂ ವಿಚ್ಚೇದನ ಪಡೆಯಬೇಕು ಎಂದು ಅವರು ನಿರ್ಧರಿಸಿದರೆ, ಅವರು ಆ ಅವಧಿಯಲ್ಲಿ ಪ್ರಜ್ಞಾಪೂರ್ವಕವಾಗಿಯೇ ಆ ನಿರ್ಧಾರಕ್ಕೆ ಬಂದಿದ್ದಾರೆ ಎಂದು ಅರ್ಥೈಸಬಹುದು' ಎಂದು ಪೀಠವು ಹೇಳಿದೆ.
'ವಿಶೇಷಾಧಿಕಾರ ಬಳಸಿಕೊಂಡು ಕಡ್ಡಾಯ ಕಾಯುವಿಕೆಯನ್ನು ರದ್ದುಪಡಿಸುವುದು ಅಷ್ಟೇ ಅಲ್ಲ. ಅಂತಹ ಸಂದರ್ಭದಲ್ಲಿ, ದಂಪತಿಯು ಪರಸ್ಪರ ದಾಖಲಿಸಿರುವ ಕ್ರಿಮಿನಲ್ ಪ್ರಕರಣಗಳು ಮತ್ತು ಅವುಗಳಿಗೆ ಸಂಬಂಧಿಸಿದ ಪ್ರಕ್ರಿಯೆಗಳನ್ನೂ ಸುಪ್ರೀಂ ಕೋರ್ಟ್ ತನ್ನ ವಿಶೇಷಾಧಿಕಾರ ಬಳಸಿಕೊಂಡು ರದ್ದುಮಾಡಬಹುದು' ಎಂದು ಪೀಠವು ಹೇಳಿದೆ.
ಪೀಠ ಹೇಳಿದ್ದು...
ಬಲವಂತವಾಗಿ ಜೀವನ ಮರುಆರಂಭಿಸು ಎಂಬುದರಲ್ಲಿ ಅರ್ಥವಿಲ್ಲ * ಎಲ್ಲಾ ಪ್ರಕರಣಗಳಲ್ಲೂ ಈ ಅಧಿಕಾರವನ್ನು ಏಕರೀತಿಯಲ್ಲಿ ಬಳಸಲಾಗುವುದಿಲ್ಲ * ವಿಚ್ಛೇದನ ಬಯಸುವವರೆಲ್ಲಾ ನೇರವಾಗಿ ಸುಪ್ರೀಂ ಕೋರ್ಟ್‌ಗೆ ಬರುವಂತಿಲ್ಲ
ಸುಪ್ರೀಂ ಕೋರ್ಟ್ ಸಂವಿಧಾನ ಪೀಠಮದುವೆಯು ಭಾವನಾತ್ಮಕವಾಗಿ ಸತ್ತುಹೋಗಿದೆ ಪರಿಹಾರ ಸಾಧ್ಯವೇ ಇಲ್ಲ ಎಂಬುದು ನ್ಯಾಯಾಲಯಕ್ಕೆ ಮನವರಿಕೆಯಾದಾಗ ವಿಚ್ಚೇದನವೇ ಸರಿಯಾದ ಪರಿಹಾರ ಮತ್ತು ಏಕೈಕ ಮಾರ್ಗ