ನವದೆಹಲಿ:ಕಾರ್ ಸೀಟ್ ಬೆಲ್ಟ್ ಅಲಾರ್ಮ್ ಸ್ಟಾಪರ್ ಕ್ಲಿಪ್ ಗಳನ್ನು ಮಾರಾಟ ಮಾಡದಂತೆ ಐದು ಬೃಹತ್ ಇ-ಕಾಮರ್ಸ್ ಕಂಪೆನಿಗಳಿಗೆ ಕೇಂದ್ರ ಗ್ರಾಹಕ ರಕ್ಷಣಾ ಪ್ರಾಧಿಕಾರ (CCPA) ಆದೇಶ ಜಾರಿ ಮಾಡಿದೆ. ಇಂತಹ ಕ್ಲಿಪ್ ಗಳನ್ನು ಹಲವು ಇ-ಕಾಮರ್ಸ್ ಕಂಪೆನಿಗಳು ನಿರ್ಲಜ್ಜವಾಗಿ ಮಾರಾಟ ಮಾಡುತ್ತಿರುವುದನ್ನು ಪ್ರಾಧಿಕಾರ ಗಮನಿಸಿದೆ.
ಸೀಟ್ ಬೆಲ್ಟ್ ಧರಿಸದೇ ಇದ್ದಾಗ ಉಂಟಾಗುವ ಬೀಪ್ ಅಲಾರ್ಮ್ ಅನ್ನು ನಿಲ್ಲಿಸುವ ಮೂಲಕ ಈ ಕ್ಲಿಪ್ ಗ್ರಾಹಕರ ಜೀವ ಹಾಗೂ ಸುರಕ್ಷೆಯೊಂದಿಗೆ ರಾಜಿ ಮಾಡಿಕೊಳ್ಳುತ್ತದೆ. ಇಂತಹ ವಸ್ತುಗಳ ಮಾರಾಟ ಗ್ರಾಹಕರ ರಕ್ಷಣಾ ಕಾಯ್ದೆ-2019ರ ಉಲ್ಲಂಘನೆ ಎಂದು ಆದೇಶ ಹೇಳಿದೆ.
ಅಮೆಝಾನ್, ಫ್ಲಿಪ್ಕಾರ್ಟ್, ಸ್ನಾಪ್ಡೀಲ್, ಶಾಪ್ಕ್ಲೂಸ್ ಹಾಗೂ ಮೀಶೋ ಮೊದಲಾದ ಈ ಕಾಮರ್ಸ್ ಕಂಪೆನಿಗಳಿಗೆ ಈ ಆದೇಶ ನೀಡಲಾಗಿದೆ ಎಂದು ಗ್ರಾಹಕ ವ್ಯವಹಾರಗಳ ಸಚಿವಾಲಯ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದೆ. ವಾಹನ ಉತ್ಪಾದಕರು ಸೀಟ್ ಬೆಲ್ಟ್ ಅಲಾರ್ಮ್ ವ್ಯವಸ್ಥೆಯನ್ನು ಅಳವಡಿಸುವುದನ್ನು ಕಡ್ಡಾಯಗೊಳಿಸಲು ಸರಕಾರ ಯೋಜಿಸುತ್ತಿದೆ ಎಂದು ಕೇಂದ್ರ ರಸ್ತೆ ಸಾರಿಗೆ ಹಾಗೂ ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಹೇಳಿದ್ದಾರೆ.