ಮುಂಬೈ: ಉದ್ಯೋಗಿಗಳು ಬೆಳಗಿನ ಉಪಾಹಾರಕ್ಕಾಗಿ ಆರ್ಡರ್ ಮಾಡುತ್ತಿರುವುದರ ಜಾಡು ಹಿಡಿದು ನಕಲಿ ಕಾಲ್ ಸೆಂಟರ್ ಅನ್ನು ಭೇದಿಸುವಲ್ಲಿ ಯಶಸ್ವಿಯಾಗಿದ್ದೇವೆ ಎಂದು ಸೋಮವಾರ ಮುಂಬೈ ಪೊಲೀಸರು ಮಾಹಿತಿ ನೀಡಿದ್ದಾರೆ ಎಂದು ndtv.com ವರದಿ ಮಾಡಿದೆ.
ರಜೋಡಿ ಕಿನಾರೆ ಬಳಿಯ ಮನೆಯೊಂದರಲ್ಲಿ ಕಾರ್ಯನಿರ್ವಹಿಸುತ್ತಿದ್ದ ಕೇಂದ್ರದಲ್ಲಿ ಹತ್ತಾರು ಉದ್ಯೋಗಿಗಳನ್ನಿಟ್ಟುಕೊಂಡು, ಅವರು ಹೊರಗಿನ ಜನರೊಂದಿಗೆ ಮಾತುಕತೆ ನಡೆಸದಂತೆ ತಡೆಯಲು ಕಟ್ಟಡದಿಂದ ಹೊರ ಹೋಗಲು ಅವಕಾಶ ನೀಡಲಾಗುತ್ತಿರಲಿಲ್ಲ ಎಂದು ಹೇಳಲಾಗಿದೆ.
ಆದರೆ, ಮುಂಜಾನೆ 4 ಗಂಟೆ ವೇಳೆಗೆ ಸಮೀಪದ ಉಪಾಹಾರ ಗೃಹಕ್ಕೆ ಹತ್ತಾರು ಉಪಾಹಾರದ ಪೊಟ್ಟಣಗಳಿಗೆ ಪದೇ ಪದೇ ಆರ್ಡರ್ ನೀಡುತ್ತಿರುವ ಕುರಿತು ಸುಳಿವು ಪೊಲೀಸರಿಗೆ ದೊರೆತಿದೆ.
ಈ ಕುರಿತು AFP ಸುದ್ದಿ ಸಂಸ್ಥೆಗೆ ಪ್ರತಿಕ್ರಿಯಿಸಿರುವ ಪೊಲೀಸ್ ಅಧಿಕಾರಿ ಸುಹಾಸ್ ಬಾವ್ಚೆ, "ಕಿನಾರೆ ಬಳಿಯ ರೆಸಾರ್ಟ್ ವಾರಾಂತ್ಯದಲ್ಲಿ ಪ್ರವಾಸಿಗರಿಂದ ತುಂಬಿ ತುಳುಕಿರುತ್ತಿದ್ದರೆ ಉಳಿದ ದಿನ ಖಾಲಿ ಇರುತ್ತಿತ್ತು. ಹೀಗಾಗಿ ಹಲವಾರು ದಿನಗಳ ಕಾಲ ಮುಂಜಾನೆಯೇ ಅಷ್ಟೊಂದು ಚಹಾ ಹಾಗೂ ಉಪಹಾರಗಳಿಗೆ ಆರ್ಡರ್ ನೀಡುವುದು ನಮ್ಮಲ್ಲಿ ಸಂಶಯ ಹುಟ್ಟಿಸಿತು ಹಾಗೂ ನಾವು ರಹಸ್ಯವಾಗಿ ಆ ಸ್ಥಳದ ಮೇಲೆ ನಿಗಾ ವಹಿಸಲು ಶುರು ಮಾಡಿದೆವು" ಎಂದು ತಿಳಿಸಿದ್ದಾರೆ.
ಅಂತಿಮವಾಗಿ ಎಪ್ರಿಲ್ 11ರ ರಾತ್ರಿ 60 ಉದ್ಯೋಗಿಗಳಿಗೆ ಸ್ಥಳಾವಕಾಶ ಹೊಂದಿದ್ದ ಆ ಮನೆಯ ಮೇಲೆ ದಾಳಿ ನಡೆಸಿರುವ ಪೊಲೀಸರು, ಆ ಮನೆಯ ಮಾಲಕ ಹಾಗೂ 47 ಉದ್ಯೋಗಿಗಳನ್ನು ಬಂಧಿಸಿದ್ದಾರೆ.
ಬಂಧಿತರ ವಿರುದ್ಧ ಮಾಹಿತಿ ತಂತ್ರಜ್ಞಾನ ಕಾಯ್ದೆಯಡಿ ಸೋಗು, ವಂಚನೆ ಹಾಗೂ ಅಕ್ರಮದ ಆರೋಪಗಳನ್ನು ದಾಖಲಿಸಿಕೊಳ್ಳಲಾಗಿದೆ. ಪೊಲೀಸರು ನಕಲಿ ಕಾಲ್ ಸೆಂಟರ್‌ನಲ್ಲಿ ಬಳಕೆ ಮಾಡಲಾಗುತ್ತಿದ್ದ ಕಂಪ್ಯೂಟರ್‌ಗಳ ವಿಧಿವಿಜ್ಞಾನ ಪರೀಕ್ಷೆಗಳನ್ನೂ ಪ್ರಾರಂಭಿಸಿದ್ದಾರೆ.
ಈವರೆಗಿನ ತನಿಖೆಯಲ್ಲಿ ಆಸ್ಟ್ರೇಲಿಯಾ ಬ್ಯಾಂಕ್ ಗ್ರಾಹಕರಿಂದ ಕರೆ ಸ್ವೀಕರಿಸುವ ತರಬೇತಿಯನ್ನು ಯುವ ಉದ್ಯೋಗಿಗಳಿಗೆ ನೀಡಲಾಗಿತ್ತು ಎಂಬ ಸಂಗತಿ ಬೆಳಕಿಗೆ ಬಂದಿದೆ ಎಂದು ಬಾವ್ಚೆ ತಿಳಿಸಿದ್ದಾರೆ.
ಅವರು ಬ್ಯಾಂಕ್ ಗ್ರಾಹಕರಿಂದ ಒಟಿಪಿ ಸೇರಿದಂತೆ ಸೂಕ್ಷ್ಮ ವೈಯಕ್ತಿಕ ವಿವರಗಳು ಹಾಗೂ ಭದ್ರತಾ ಮಾಹಿತಿಯನ್ನು ಸಂಗ್ರಹಿಸಿ, ಆ ಮಾಹಿತಿಗಳನ್ನು ಈಮೇಲ್ ಮೂಲಕ ವ್ಯವಸ್ಥಾಪಕರಿಗೆ ರವಾನಿಸುತ್ತಿದ್ದರು ಎಂದು ಬಾವ್ಚೆ ತಿಳಿಸಿದ್ದಾರೆ.
"ಇದು ಕೇವಲ ಸಾಗರದ ಒಂದು ಹನಿ ಮಾತ್ರ ಆಗಿರುವ ಸಾಧ್ಯತೆ ಇದೆ. ನಾವು ಈ ಜಾಲದೊಂದಿಗೆ ಅಂತಾರಾಷ್ಟ್ರೀಯ ಸಂಪರ್ಕವಿದೆಯೆ ಎಂಬ ಕುರಿತೂ ತನಿಖೆ ನಡೆಸುತ್ತಿದ್ದೇವೆ. ಒಂದೇ ಬಾರಿಗೆ ಒಂದೇ ಸ್ಥಳದಿಂದ ಹಲವಾರು ತಿಂಗಳಿನಿಂದ ಕಾರ್ಯಾಚರಿಸುತ್ತಿರುವ ಇಂತಹ ನಕಲಿ ಕಾಲ್ ಸೆಂಟರ್‌ಗಳನ್ನು ನಿಯಮಿತವಾಗಿ ದೇಶಾದ್ಯಂತ ಭೇದಿಸಲಾಗಿದೆ" ಎಂದು ಬಾವ್ಚೆ ಮಾಹಿತಿ ನೀಡಿದ್ದಾರೆ.