HEALTH TIPS

ನೂತನ ಸಂಸತ್‌ ಭವನ | ರಾಷ್ಟ್ರಪತಿಗಿಲ್ಲ ಆಹ್ವಾನ: ಪ್ರತಿಪಕ್ಷಗಳ ಟೀಕೆ

             ವದೆಹಲಿ: ರಾಷ್ಟ್ರಪತಿ ದ್ರೌಪದಿ ಮುರ್ಮು ಅವರನ್ನು ಕಡೆಗಣಿಸಿ ಮೇ 28ರಂದು ತಾವೇ ನೂತನ ಸಂಸತ್‌ ಭವನದ ಲೋಕಾರ್ಪಣೆಗೆ ಮುಂದಾಗಿರುವ ಪ್ರಧಾನಿ ನರೇಂದ್ರ ಮೋದಿ ಅವರ ನಡೆಯು ವಿರೋಧ ಪಕ್ಷಗಳ ಟೀಕೆಗೆ ಗುರಿಯಾಗಿದೆ.

              ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ, ಪ್ರಧಾನಿ ಅವರ ಈ ನಿಲುವನ್ನು ಕಟುವಾಗಿ ಟೀಕಿಸಿದ ಬೆನ್ನಲ್ಲೇ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಕೂಡ ಚಾಟಿ ಬೀಸಿದ್ದಾರೆ.

            'ಮೋದಿ ನೇತೃತ್ವದ ಕೇಂದ್ರ ಸರ್ಕಾರವು ಕೇವಲ ಮತಬ್ಯಾಂಕ್‌ ಭದ್ರಪಡಿಸಿಕೊಳ್ಳಲ್ಲಷ್ಟೇ ರಾಷ್ಟ್ರಪತಿ ಹುದ್ದೆಗೆ ದಲಿತರು ಮತ್ತು ಬುಡಕಟ್ಟು ಸಮುದಾಯದವರನ್ನು ನೇಮಿಸುತ್ತಿದೆ' ಎಂದು ಖರ್ಗೆ ಟ್ವೀಟ್‌ ಮೂಲಕ ಟೀಕಿಸಿದ್ದಾರೆ.

              ದ್ರೌಪದಿ ಮುರ್ಮು ದೇಶದ ಮೊದಲ ಪ್ರಜೆ. ಸರ್ಕಾರ, ವಿರೋಧ ಪಕ್ಷ ಸೇರಿದಂತೆ ನಾಗರಿಕರ ಪ್ರತಿನಿಧಿ ಯಾಗಿದ್ದಾರೆ. ಅವರಿಂದ ಭವನ ಉದ್ಘಾಟಿಸುವ ಮೂಲಕ ಸಾಂವಿಧಾನಿಕ ಋಜುತ್ವ ಹಾಗೂ ಪ್ರಜಾಪ್ರಭುತ್ವದ ಮೌಲ್ಯಗಳನ್ನು ಸರ್ಕಾರ ಉಳಿಸಬೇಕಿದೆ. ಆದರೆ, ಅವರಿಗೆ ಉದ್ಘಾಟನಾ ಸಮಾರಂಭಕ್ಕೆ ಆಹ್ವಾನವನ್ನೇ ನೀಡಿಲ್ಲ. ಅವರನ್ನು ನಿರ್ಲಕ್ಷಿಸಲಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

              2020ರ ಡಿಸೆಂಬರ್‌ 10ರಂದು ಭವನಕ್ಕೆ ಶಿಲಾನ್ಯಾಸ ನೆರವೇರಿಸಲಾಯಿತು. ಆಗ ರಾಷ್ಟ್ರಪತಿಯಾಗಿದ್ದ ದಲಿತ ಸಮುದಾಯದ ರಾಮನಾಥ್‌ ಕೋವಿಂದ್‌ಗೂ ಕಾರ್ಯಕ್ರಮಕ್ಕೆ ಆಹ್ವಾನವನ್ನೇ ನೀಡಿರಲಿಲ್ಲ. ಬಿಜೆಪಿಯ ಧೋರಣೆ ಚುನಾವಣಾ ರಾಜಕೀಯ ಲಾಭ ಪಡೆಯಲಷ್ಟೇ ಸೀಮಿತಗೊಂಡಿದೆ. ಭಾರತದ ಒಕ್ಕೂಟ ವ್ಯವಸ್ಥೆಯಲ್ಲಿ ಸಂಸತ್‌ಗೆ ಪರಮೋಚ್ಚ ಅಧಿಕಾರವಿದೆ. ಇದರ ಮೇಲೆ ರಾಷ್ಟ್ರಪತಿಗೆ ಸಂವಿಧಾನ ಬದ್ಧವಾದ ಹೆಚ್ಚಿನ ಹಕ್ಕಿದೆ ಎಂದು ಹೇಳಿದ್ದಾರೆ.

             ಕೇಂದ್ರ ಸರ್ಕಾರ ಪದೇ ಪದೇ ತನ್ನ ಕರ್ತವ್ಯಗಳನ್ನು ಉಲ್ಲಂಘಿಸುತ್ತಿದೆ. ಆರೆಸ್ಸೆಸ್‌ ಮತ್ತು ಬಿಜೆಪಿ ಸರ್ಕಾರದ ಟೋಕನ್‌ ವ್ಯವಸ್ಥೆಯಿಂದ ರಾಷ್ಟ್ರಪತಿ ಭವನವನ್ನು ರಕ್ಷಿಸಬೇಕಿದೆ ಎಂದಿದ್ದಾರೆ.

ಒಕ್ಕೂಟ ವ್ಯವಸ್ಥೆಯಡಿ ಸಂಸತ್‌ ಇರಬೇಕು. ಅದು ರಾಷ್ಟ್ರಪತಿ ಯನ್ನು ಒಳಗೊಂಡ ರಾಜ್ಯಸಭೆ ಮತ್ತು ಲೋಕಸಭೆ ಇರಬೇಕೆಂದು ಸಂವಿಧಾನದ 79ನೇ ವಿಧಿ ಹೇಳುತ್ತದೆ. ಶಾಸಕಾಂಗದ ಪ್ರತಿನಿಧಿಯಾದ ರಾಷ್ಟ್ರಪತಿ ಅವರಿಂದಲೇ ಭವನ ಉದ್ಘಾಟಿಸಬೇಕು ಎಂಬುದು ಪ್ರತಿಪಕ್ಷಗಳ ಆಗ್ರಹವಾಗಿದೆ.

ಆರ್‌ಜೆಡಿ ಹಿರಿಯ ಮುಖಂಡ ಹಾಗೂ ಸಂಸದ ಮನೋಜ್‌ ಕೆ. ಜಹಾ, 'ನೂತನ ಸಂಸತ್‌ ಭವನವನ್ನು ರಾಷ್ಟ್ರಪತಿ ಉದ್ಘಾಟಿಸುವಂತಿಲ್ಲವೇ? ಎಂದು ಪ್ರಶ್ನಿಸಿದ್ದಾರೆ.

            'ಗಾಂಧೀಜಿ ಮತ್ತು ಸಾವರ್ಕರ್‌, ಅಂಬೇಡ್ಕರ್‌-ಗೋಳ್ವಾಲ್ಕರ್‌ ಅವರನ್ನು ಒಂದೇ ಚೌಕಟ್ಟಿನಲ್ಲಿ ಕೂರಿಸಲು ಆಗುವುದಿಲ್ಲ. ಇದು ಕೃತಕವಾಗುತ್ತದೆ. ಆದರೆ, ಗಾಂಧೀಜಿ ಮತ್ತು ಅಂಬೇಡ್ಕರ್‌ ಅವರ ವ್ಯಕ್ತಿತ್ವ ಈ ಚೌಕಟ್ಟನ್ನು ಮೀರಿ ದ್ದಾಗಿದೆ ಎಂದು ಟ್ವೀಟ್‌ ಮಾಡಿದ್ದಾರೆ.

ಸಿಪಿಐ ಪ್ರಧಾನ ಕಾರ್ಯದರ್ಶಿ ಡಿ. ರಾಜಾ ಕೂಡ ಕೇಂದ್ರದ ನಡೆಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. 'ಪ್ರಧಾನಿ ಕಾರ್ಯಾಂಗದ ಮುಖ್ಯಸ್ಥರಾಗಿದ್ದಾರೆ. ಶಾಸಕಾಂಗದ ಮುಖ್ಯಸ್ಥರಾಗಿರುವ ದ್ರೌಪದಿ ಮುರ್ಮು ಅವರೇ ಭವನ ಉದ್ಘಾಟಿಸಬೇಕಿದೆ. ಸ್ವಪ್ರತಿಷ್ಠೆ ಮತ್ತು ಕ್ಯಾಮೆರಾಗಳ ಮುಂದೆ ಕಾಣಿಸಿಕೊಳ್ಳಬೇಕೆಂಬ ನಿಮ್ಮ ಗೀಳು ಸರಿಯೇ' ಎಂದು ಮೋದಿ ಅವರನ್ನು ಪ್ರಶ್ನಿಸಿದ್ದಾರೆ.

                 'ಮೋದಿಗೆ ಅಧಿಕಾರದ ವ್ಯಾಮೋಹ ಹೆಚ್ಚಿದೆ. ಹಾಗಾಗಿಯೇ, ಸಾಂವಿಧಾನಿಕ ಮೌಲ್ಯಗಳನ್ನು ಬದಿಗೊತ್ತಿ ರಾಷ್ಟ್ರಪತಿ ಅವರಿಗೆ ಅಗೌರವ ತೋರುತ್ತಿದ್ದಾರೆ. ಅಧಿಕಾರದ ದರ್ಪದಿಂದ ಅವರನ್ನು ದೂರ ಸರಿಸುತ್ತಿದ್ದಾರೆ' ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್‌ ಟೀಕಿಸಿದ್ದಾರೆ.

'ನೂತನ ಭವನದ ನಿರ್ಮಾಣಕ್ಕೆ ವಾಸ್ತುಶಿಲ್ಪಿಗಳು, ವಿನ್ಯಾಸಗಾರರು ಮತ್ತು ಕಾರ್ಮಿಕರು ದುಡಿದಿದ್ದಾರೆ. ಆದರೆ, ಇದರ ಉದ್ಘಾಟನೆಯು ಒಬ್ಬ ವ್ಯಕ್ತಿಯ ಆಡಂಬರದ ಪ್ರದರ್ಶನದಂತಿದೆ' ಎಂದು ಕಾಂಗ್ರೆಸ್‌ ಮುಖಂಡ ಜೈರಾಮ್‌ ರಮೇಶ್‌ ವ್ಯಂಗ್ಯವಾಡಿದ್ದಾರೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries