ಕಾಸರಗೋಡು: ಬಿಜೆಪಿ ಕಾಸರಗೋಡು ಮಂಡಲ ಅಧ್ಯಕ್ಷೆ ಹಾಗೂ ಮೊಗ್ರಾಲ್‍ಪುತ್ತೂರು ಗ್ರಾಮ ಪಂಚಾಯಿತಿ ಆರೋಗ್ಯ ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷೆ ಪ್ರಮೀಳಾ ಮಜಲ್ ವಿರುದ್ಧ ಮಾಡಿರುವ ಆರೋಪಗಳು ಮುಸ್ಲಿಂ ಲೀಗ್‍ನ ದ್ವೇಷದ ರಾಜಕೀಯವಾಗಿದೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ರವೀಶ ತಂತ್ರಿ ಕುಂಟಾರು ತಿಳಿಸಿದ್ದಾರೆ.
ಪಂಚಾಯತಿ ವ್ಯಾಪ್ತಿಯಲ್ಲಿ ಮುಸ್ಲಿಂ ಲೀಗ್‍ನ ಪ್ರಮುಖ ಮುಖಂಡರು ಹಾಗೂ ಕಾರ್ಯಕರ್ತರ ಭ್ರಷ್ಟಾಚಾರ ಹಾಗೂ ಭೂಕಬಳಿಕೆ ವಿರುದ್ಧ ದೂರು ನೀಡಿ ಪ್ರತಿಭಟನೆ ನಡೆಸಿರುವುದರ ಹಿನ್ನೆಲೆಯಲ್ಲಿ ಪ್ರಮಿಳಾ ಅವರ ತೇಜೋವಧೆ ಮಾಡುವ ಯತ್ನ ನಡೆಯುತ್ತಿದೆ. ಬ್ಲಾರ್ಕೋಡ್ ಸಾರ್ವಜನಿಕ ಸ್ಮಶಾನದ ಜಾಗ ಒತ್ತುವರಿ, ಏರಿಯಾಲ್ ಅಕ್ಕರಕೊಲ್ಲಮೆಯಲ್ಲಿ ಲೀಗ್ ನಾಯಕರ ಅನಧಿಕೃತ ನಿರ್ಮಾಣ ಇತ್ಯಾದಿ ಪ್ರಕರಣಗಳಲ್ಲಿ ಲೀಗ್ ಮುಖಂಡರ ವಿರುದ್ಧ ತನಿಖೆ ನಡೆಯುತ್ತಿದೆ. ಇದಕ್ಕೆ ಸೇಡು ತೀರಿಸಿಕೊಳ್ಳುವ ನಿಟ್ಟಿನಲ್ಲಿ ಬ್ಲಾಕ್ ಪಂಚಾಯಿತಿಯ ಯೋಜನೆ ಅರಂಭಿಸಲು ಬಿಜೆಪಿ ಕಾರ್ಯಕರ್ತೆ ಹಾಗೂ ಕುಟುಂಬಶ್ರೀ ಸದಸ್ಯೆ ಅನಾಮಿಕಾ ಅವರು ಈ ಹಿಂದೆ ಕುಟುಂಬಶ್ರೀಯಿಂದ ಸವಲತ್ತು ಪಡೆದುಕೊಂಡಿಲ್ಲ ಎಂಬುದಗಿ ಸಿಡಿಎಸ್ ಅಧ್ಯಕ್ಷರಿಂದ ಪ್ರಮಾಣಪತ್ರ ಪಡೆದುಕೊಂಡಿದ್ದರು. ಈ ಪ್ರಮಾಣಪತ್ರದ ಪ್ರತಿಯನ್ನು ನಕಲಿಮಾಡಿಕೊಂಡು, ಮುಸ್ಲಿಂ ಲೀಗ್ ನಾಯಕರು ಪ್ರೇಮಿಳಾ ಅವರನ್ನು ಬ್ಲ್ಯಾಕ್‍ಮೇಲ್ ಮಾಡಲು ಪ್ರಯತ್ನಿಸುತ್ತಿದ್ದಾರೆ. ಅಲ್ಲದೆ ಸದಸ್ಯ ಕಾರ್ಯದರ್ಶಿ ಈ ಪ್ರಮಾಣ ಪತ್ರಕ್ಕೆ ಸಹಿ ಹಾಕಿರಬೇಕು ಎಂಬ ನಿಬಂಧನೆಯನ್ನೂ ಪಾಲಿಸಿಲ್ಲ. ಮುಸ್ಲಿಂ ಲೀಗ್ ಸೇಡಿನ ಮನೋಭಾವದಿಂದ ವ್ಯಕ್ತಿ ಚಾರಿತ್ರ್ಯಹನನಕ್ಕೆ ಮುಂದಾದಲ್ಲಿ ಬಿಜೆಪಿ ಕಾನೂನು ಕ್ರಮ ಜರುಗಿಸುವ ಬಗ್ಗೆ ಚಿಂತನೆ ನಡೆಸುವುದಾಗಿ ರವೀಶ ತಂತ್ರಿ ಕುಂಟಾರು ಹೇಳಿಕೆಯಲ್ಲಿ ತಿಳಿಸಿದ್ದಾರೆ.