ತಿರುವನಂತಪುರ: ಸುಳ್ಳು ಹೇಳಿಕೆಗಳ ಮೂಲಕ ಸಮಾಜದಲ್ಲಿ ಕೋಮು ವಿಭಜನೆಯನ್ನು ಸೃಷ್ಟಿಸಲು ಉದ್ದೇಶಿಸಿರುವ ವಿವಾದಾತ್ಮಕ ಚಲನಚಿತ್ರ 'ದಿ ಕೇರಳ ಸ್ಟೋರಿ ' ಯ ಪ್ರದರ್ಶನಕ್ಕೆ ಅನುಮತಿ ನೀಡದಂತೆ ಪ್ರತಿಪಕ್ಷ ಕಾಂಗ್ರೆಸ್ ಶುಕ್ರವಾರ ರಾಜ್ಯ ಸರಕಾರವನ್ನು ಆಗ್ರಹಿಸಿದೆ.
ಚಿತ್ರನಿರ್ಮಾಪಕರ ಹೇಳಿಕೆಗಳನ್ನು ತಿರಸ್ಕರಿಸಿದ ರಾಜ್ಯ ವಿಧಾನಸಭೆಯಲ್ಲಿ ಪ್ರತಿಪಕ್ಷ ನಾಯಕ ವಿ.ಡಿ.ಸತೀಶನ್ ಅವರು,ಅಂತರರಾಷ್ಟ್ರೀಯ ಮಟ್ಟದಲ್ಲಿ ರಾಜ್ಯದ ಪ್ರತಿಷ್ಠೆಗೆ ಕಳಕವನ್ನುಂಟು ಮಾಡುವುದು ಚಿತ್ರದ ಉದ್ದೇಶವಾಗಿದೆ ಎನ್ನುವುದು ಸ್ಪಷ್ಟವಾಗಿದೆ. ಕೇರಳದ 32,000 ಮಹಿಳೆಯರು ಇಸ್ಲಾಮ್ ಗೆ ಮತಾಂತರಗೊಂಡಿದ್ದಾರೆ ಮತ್ತು ಐಸಿಸ್ ಸದಸ್ಯರಾಗಿದ್ದಾರೆ ಎಂದು ಸುಳ್ಳು ಹೇಳುತ್ತಿರುವ ಈ ಚಿತ್ರದ ಪ್ರದರ್ಶನಕ್ಕೆ ಅನುಮತಿ ನೀಡಬಾರದು ಎಂದು ಹೇಳಿದರು.
ಅದಾ ಶರ್ಮಾ ನಟಿಸಿರುವ 'ದಿ ಕೇರಳ ಸ್ಟೋರಿ' ಮೇ 5ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಗೊಳ್ಳಲಿದೆ.
ಚಿತ್ರವು ಏನನ್ನು ಹೇಳಲು ಬಯಸಿದೆ ಎನ್ನುವುದನ್ನು ಅದರ ಟ್ರೇಲರ್ ತೋರಿಸಿದೆ. ಇದು ಅಭಿವ್ಯಕ್ತಿ ಸ್ವಾತಂತ್ರದ ವಿಷಯವಲ್ಲ,ಆದರೆ ಅಲ್ಪಸಂಖ್ಯಾತ ಗುಂಪುಗಳ ಮೇಲೆ ದೋಷಾರೋಪಣೆ ಹೊರಿಸುವ ಮೂಲಕ ಸಮಾಜದಲ್ಲಿ ವಿಭಜನೆಯನ್ನು ಸೃಷ್ಟಿಸುವ ಸಂಘ ಪರಿವಾರದ ಅಜೆಂಡಾವನ್ನು ಜಾರಿಗೊಳಿಸುವ ಪ್ರಯತ್ನದ ಭಾಗವಾಗಿದೆ. ಕೋಮುವಾದದ ವಿಷವನ್ನು ಉಗುಳುವ ಮೂಲಕ ಕೇರಳವನ್ನು ವಿಭಜಿಸಬಹುದು ಎಂದು ಯಾರೂ ಭಾವಿಸಬಾರದು. ರಾಜ್ಯವು ಧಾರ್ಮಿಕ ವೈಷಮ್ಯವನ್ನು ಬೆಳೆಸುವ ಈ ಉದ್ದೇಶಪೂರ್ವಕ ಕ್ರಮದ ವಿರುದ್ಧ ಒಗ್ಗಟ್ಟಾಗಿ ನಿಲ್ಲುತ್ತದೆ,ಇದು ರಾಜ್ಯದ ಸಂಪ್ರದಾಯವಾಗಿದೆ ಎಂದು ಸತೀಶನ್ ಹೇಳಿಕೆಯಲ್ಲಿ ತಿಳಿಸಿದರು.
ಫೇಸ್ಬುಕ್ ಪೋಸ್ಟ್ನಲ್ಲಿ ಚಿತ್ರದ ವಿರುದ್ಧ ತೀವ್ರ ದಾಳಿ ನಡೆಸಿರುವ ಡಿವೈಎಫ್‌ಐ,ಚಿತ್ರದ ಟ್ರೇಲರ್ ಮಾತ್ರ ಈಗ ಬಿಡುಗಡೆಗೊಂಡಿದ್ದು,ಅದೇ ಧಾರ್ಮಿಕ ಭಾವನೆಗಳಿಗೆ ನೋವನ್ನುಂಟು ಮಾಡಿದೆ. ಚಿತ್ರದ ನಿರ್ಮಾಪಕರು ಸಮಾಜದಲ್ಲಿ ಕೋಮು ವಿಭಜನೆಯನ್ನು ಸೃಷ್ಟಿಸಲು ಮತ್ತು ರಾಜ್ಯದ ಪ್ರತಿಷ್ಠೆಗೆ ಕಳಂಕವನ್ನುಂಟು ಮಾಡಲು ಸಿನೆಮಾ ಮಾಧ್ಯಮದ ದುರ್ಬಳಕೆ ಮಾಡಿಕೊಂಡಿದ್ದಾರೆ ಎಂದು ಆರೋಪಿಸಿದೆ. ಚಿತ್ರದ ವಿರುದ್ಧ ಕಠಿಣ ಕ್ರಮಕ್ಕೂ ಅದು ಆಗ್ರಹಿಸಿದೆ.
ಸುದಿಪ್ತೋ ಸೇನ್ ಈ ಹಿಂದೆ ಆಸ್ಮಾ,ಲಕ್ನೋ ಟೈಮ್ಸ್ ಮತ್ತು ದಿ ಲಾಸ್ಟ್ ಮಾಂಕ್ ಚಿತ್ರಗಳನ್ನು ನಿರ್ದೇಶಿಸಿದ್ದರು.