ನವದೆಹಲಿ: ವಿಶ್ವ ಪತ್ರಿಕಾ ಸ್ವಾತಂತ್ರ್ಯದ ಸೂಚ್ಯಂಕದಲ್ಲಿ ಭಾರತವು ನೆರೆಯ ರಾಷ್ಟ್ರಗಳಾದ ಭೂತಾನ್, ನೇಪಾಳ, ಶ್ರೀಲಂಕಾ, ಪಾಕಿಸ್ತಾನ ಹಾಗೂ ಅಫ್ಗಾನಿಸ್ತಾನಕ್ಕಿಂತಲೂ ಕೆಳಗಿದೆ.
ಜಗತ್ತಿನ 180 ರಾಷ್ಟ್ರಗಳನ್ನೊಳಗೊಂಡ ಈ ಸೂಚ್ಯಂಕದಲ್ಲಿ ಭಾರತ 161ನೇ ಸ್ಥಾನಕ್ಕೆ ಕುಸಿದಿದೆ.
'ರಿಪೋರ್ಟರ್ಸ್ ವಿದೌಟ್ ಬಾರ್ಡರ್ಸ್' ಹೆಸರಿನ ಸರ್ಕಾರೇತರ ಸಂಸ್ಥೆ ಬುಧವಾರ ಬಿಡುಗಡೆ ಮಾಡಿರುವ ಸೂಚ್ಯಂಕದಲ್ಲಿ ಭೂತಾನ್ 90ನೇ ಸ್ಥಾನ ಹೊಂದಿದೆ. ನೇಪಾಳವು 95ನೇ ಸ್ಥಾನದಲ್ಲಿ ಕಾಣಿಸಿಕೊಂಡಿದೆ. ಶ್ರೀಲಂಕಾ, ಪಾಕಿಸ್ತಾನ ಹಾಗೂ ಅಫ್ಗಾನಿಸ್ತಾನ ಕ್ರಮವಾಗಿ 135, 150 ಹಾಗೂ 152ನೇ ಸ್ಥಾನಗಳಲ್ಲಿವೆ. ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ ಪಾಕಿಸ್ತಾನ ಒಟ್ಟು ಏಳು ಸ್ಥಾನ ಮೇಲೇರಿದೆ. ಅಫ್ಗಾನಿಸ್ತಾನವು ನಾಲ್ಕು ಸ್ಥಾನಗಳಲ್ಲಿ ಪ್ರಗತಿ ಕಂಡಿದೆ.
ರಾಜಕೀಯ ಸಂದರ್ಭ, ಕಾನೂನು ಚೌಕಟ್ಟು, ಆರ್ಥಿಕ ಸಂದರ್ಭ, ಸಾಮಾಜಿಕ-ಸಾಂಸ್ಕೃತಿಕ ಸಂದರ್ಭ ಹಾಗೂ ಪತ್ರಕರ್ತರ ಸುರಕ್ಷತೆ ಎಂಬ ಐದು ವಿಭಾಗಗಳ ಆಧಾರದಲ್ಲಿ ಈ ಸೂಚ್ಯಂಕವನ್ನು ಸಿದ್ಧಪಡಿಸಲಾಗಿದೆ. ರಾಜಕೀಯ ಸೂಚಕದಲ್ಲಿ ಭಾರತ 169ನೇ ಸ್ಥಾನ ಹಾಗೂ ಪತ್ರಕರ್ತರ ರಕ್ಷಣೆಯ ಸೂಚಕದಲ್ಲಿ 172ನೇ ಸ್ಥಾನ ಹೊಂದಿದೆ.
'ದೇಶದಲ್ಲಿ ಪತ್ರಕರ್ತರ ಮೇಲೆ ಹಲ್ಲೆಗಳು ನಡೆದಿವೆ. ಮಾಧ್ಯಮವು ರಾಜಕೀಯವಾಗಿ ಪಕ್ಷಪಾತದ ಧೋರಣೆ ಅನುಸರಿಸುತ್ತಿದೆ. ಮಾಧ್ಯಮ ಸಂಸ್ಥೆಗಳ ಮಾಲೀಕತ್ವವು ಕೇಂದ್ರೀಕೃತಗೊಂಡಿದೆ. ಇವು ವಿಶ್ವದ ಅತಿ ದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರದ ಮಾಧ್ಯಮ ಸ್ವಾತಂತ್ರ್ಯವನ್ನು ಬಿಕ್ಕಟ್ಟಿಗೆ ತಳ್ಳಿದೆ' ಎಂದು ವರದಿಯಲ್ಲಿ ತಿಳಿಸಲಾಗಿದೆ.
ನಾರ್ವೆಯು ಈ ಪಟ್ಟಿಯಲ್ಲಿ ಸತತ ಏಳನೇ ವರ್ಷ ಅಗ್ರ ಸ್ಥಾನ ಕಾಯ್ದುಕೊಂಡಿದೆ. ಐರ್ಲೆಂಡ್, ಡೆನ್ಮಾರ್ಕ್, ಸ್ವೀಡನ್ ಹಾಗೂ ಫಿನ್ಲೆಂಡ್ ಕ್ರಮವಾಗಿ ಎರಡರಿಂದ ಐದನೇ ಸ್ಥಾನಗಳಲ್ಲಿವೆ. ಬ್ರಿಟನ್ 26ನೇ ಸ್ಥಾನದಲ್ಲಿದ್ದರೆ, ಅಮೆರಿಕ 45ನೇ ಸ್ಥಾನ ಪಡೆದಿದೆ.
ಬಾಂಗ್ಲಾದೇಶ (163), ಮ್ಯಾನ್ಮಾರ್ (173) ಹಾಗೂ ಚೀನಾ (179) ಭಾರತದ ನಂತರದ ಸ್ಥಾನಗಳಲ್ಲಿವೆ.