ವಾರಣಾಸಿ: ಪ್ರಧಾನಿ ನರೇಂದ್ರ ಮೋದಿಯವರು ಕರ್ನಾಟಕದಲ್ಲಿ ರೋಡ್ಶೋ ನಡೆಸುವಲ್ಲಿ ಬ್ಯುಸಿ ಆಗಿದ್ದರೆ, ಅತ್ತ ಮೋದಿ ಅವರ ಕಿರಿಯ ಸಹೋದರ ಪಂಕಜ್ ಮೋದಿ ಮತ್ತು ಇತರ ಕುಟುಂಬ ಸದಸ್ಯರು ದಶಾಶ್ವಮೇಧ ಘಾಟ್ನಲ್ಲಿ ತಮ್ಮ ದಿವಂಗತ ತಾಯಿ ಹೀರಾಬೆನ್ ಮತ್ತು ತಂದೆ ದಾಮೋದರ್ ದಾಸ್ ಮೋದಿ ಅವರ 'ಪಿಂಡ ದಾನ' ವಿಧಿಗಳನ್ನು ನೆರವೇರಿಸಿದರು.
ಕಳೆದ ವರ್ಷ ಡಿಸೆಂಬರ್ 30ರಂದು ಪ್ರಧಾನಿಯವರ ತಾಯಿ ನಿಧನರಾಗಿದ್ದರು. ಅವರ ಸಹೋದರ ಮತ್ತು ಇತರ ಕುಟುಂಬ ಸದಸ್ಯರು ಗಂಗಾ ತೀರದಲ್ಲಿ ಆಚರಣೆಗಳನ್ನು ಪೂರ್ಣಗೊಳಿಸಿದ್ದರು. ಹಿಂದೂ ನಂಬಿಕೆಯ ಪ್ರಕಾರ 'ಪಿಂಡ ದಾನ' ಎಂಬುದು ಅಗಲಿದ ಆತ್ಮಕ್ಕೆ ಗೌರವ ಸಲ್ಲಿಸುವ ಆಚರಣೆಯಾಗಿದೆ. ಪಂಡಿತ್ ರಾಜು ಝಾ ಅವರು ಮೋದಿಯವರ ಕುಟುಂಬಕ್ಕೆ ನೆರವು ನೀಡಿ ಆತ್ಮಕ್ಕೆ ಶಾಂತಿ ಸಿಗಲೆಂದು ಪ್ರಾರ್ಥಿಸಿದರು.
ಪಂಕಜ್ ಮೋದಿ ಮತ್ತು ಅವರ ಸಂಬಂಧಿಕರು ಗಂಗಾ ಆರತಿಯಲ್ಲಿ ಕೂಡ ಪಾಲ್ಗೊಂಡು ವಿಶೇಷ ಪ್ರಾರ್ಥನೆ ಸಲ್ಲಿಸಿದರು.