ಕಾಸರಗೋಡು: ಕೇರಳ ಸಮಾಜವಾದಿ ಯುವ ಒಕ್ಕೂಟ(ಕೆಎಸ್ವೈಎಫ್)ದ ಆಶ್ರಯದಲ್ಲಿ 'ಯುವ ಕೇರಳ ಎದ್ದೇಳಿ'ಘೋಷಣೆಯೊಂದಿಗೆ ಯುವ ವಿದ್ಯಾರ್ಥಿಗಳ ಪ್ರಚಾರ ಜಾಥಾ ಬುಧವಾರ ಕಾಸರಗೋಡಿನಿಂದ ಆರಂಭಗೊಂಡಿತು. ಜನಪ್ರತಿನಿಧಿಗಳಾಗಲಿರುವ ವಯಸ್ಸನ್ನು 25 ರಿಂದ 21 ವರ್ಷಕ್ಕೆ ಇಳಿಸಬೇಕು, ನಬಾರ್ಡ್ ಮಾದರಿಯಲ್ಲಿ ಶೈಕ್ಷಣಿಕ ಬ್ಯಾಂಕ್ ಆರಂಭಿಸಬೇಕು, ಮಾದಕ ವ್ಯಸನದ ವಿರುದ್ಧ ಕಟ್ಟುನಿಟ್ಟಿನ ಕಾನೂನು ರಚಿಸಬೇಕು, ಕಾನೂನು ರಚನಾ ಸಭೆಗಳಲ್ಲಿ ಮಹಿಳಾ ಪ್ರಾತಿನಿಧ್ಯ ಖಚಿತಪಡಿಸಬೇಕು, ಜಾಗತಿಕ ಗುಣಮಟ್ಟದ ವಿಶ್ವವಿದ್ಯಾಲಯ ಸ್ಥಾಪಿಸಬೇಕು, ಅಂಧವಿಶ್ವಾಸ ವಿರುದ್ಧ ಕಠಿಣ ಕಾನೂನು ಜಾರಿಗೊಳಿಸಬೇಕು ಮುಂತಾದ ಧ್ಯೇಯವಾಕ್ಯದೊಂದಿಗೆ ಪ್ರಚಾರ ಜಾಥಾ ಆಯೋಜಿಸಲಾಗಿದೆ.
ಕೇರಳ ಸೋಷಿಯಲಿಸ್ಟ್ ಯೂತ್ ಫೆಡರೇಶನ್ ಕಾರ್ಯದರ್ಶಿ ಸುದೀಶ್ ಕಡನ್ನಪಳ್ಳಿ ನೇತೃತ್ವದಲ್ಲಿ ಆರಂಭಗೊಮಡ ಜಾಥಾವನ್ನು ಸಿಎಂಪಿ ರಾಜ್ಯ ಸಮಿತಿ ಪ್ರಧಾನ ಕಾರ್ಯದರ್ಶಿ ಸಿ.ಪಿ.ಜಾನ್ ಉದ್ಘಾಟಿಸಿದರು. ವೈಎಫ್ ರಾಜ್ಯಾಧ್ಯಕ್ಷ ಅನಿಲ್ ಶ್ರೀಕಂಠನ್ ಅಧ್ಯಕ್ಷತೆ ವಹಿಸಿದ್ದರು. ಕೆಎಸ್ವೈಎಫ್ ಮುಖಂಡರಾದ ವಿ.ಕೆ.ರವೀಂದ್ರನ್, ವಿ.ಕಮ್ಮಾರನ್, ವಕೀಲೆ ನ್ಯಾನ್ಸಿ ಪ್ರಭಾಕರ್, ಕೆ.ಎ.ಕುರಿಯನ್, ಎಂ.ಎಸ್.ಸಜಿತ್, ಸಿ.ವಿ. ತಂಬಾನ್, ಪಿ.ಕೆ.ರಘುನಾಥ್ ಉಪಸ್ಥಿತರಿದ್ದರು. ಸಿಎಂಪಿ ಜಿಲ್ಲಾ ಕಾರ್ಯದರ್ಶಿ ಟಿ.ವಿ.ಉಮೇಶ್ ಸ್ವಾಗತಿಸಿದರು.