ತಿರುವನಂತಪುರ: ಅಬುಧಾಬಿ ಸರ್ಕಾರ ಆಯೋಜಿಸಿರುವ ಹೂಡಿಕೆದಾರರ ಸಮಾವೇಶದಲ್ಲಿ ಭಾಗವಹಿಸಲು ಕೇರಳ ಸರ್ಕಾರದ ನಿಯೋಗ ಇಂದು ಯುಎಇಗೆ ತೆರಳಲಿದೆ.
ಮುಖ್ಯಮಂತ್ರಿಗಳು ಪ್ರವಾಸಕ್ಕೆ ಅನುಮತಿ ಕೋರಿದ್ದರು. ಆದರೆ ಕೇಂದ್ರ ಸರ್ಕಾರ ಅದನ್ನು ನಿರಾಕರಿಸಿತು. ಇದಾದ ಬಳಿಕ ಮುಖ್ಯ ಕಾರ್ಯದರ್ಶಿ ಪ್ರವಾಸದಿಂದ ಹಿಂದೆ ಸರಿದರು. ಮುಖ್ಯ ಕಾರ್ಯದರ್ಶಿ ಹೋಗದಿರುವ ಬಗೆಗಿನ ಕಾರಣವನ್ನು ಬಹಿರಂಗಪಡಿಸಲಾಗಿಲ್ಲ. ಮುಖ್ಯಮಂತ್ರಿ ಮತ್ತು ಸಚಿವರ ಬದಲಿಗೆ ಅಧಿಕಾರಿಗಳ ನಿಯೋಗ ಹೂಡಿಕೆದಾರರ ಸಮಾವೇಶದಲ್ಲಿ ಪಾಲ್ಗೊಳ್ಳಲಿದೆ. ಹೂಡಿಕೆ ಸಭೆಯಲ್ಲಿ ನೋರ್ಕಾ, ಐಟಿ ಮತ್ತು ಪ್ರವಾಸೋದ್ಯಮ ಕಾರ್ಯದರ್ಶಿಗಳು ಭಾಗವಹಿಸಲಿದ್ದಾರೆ. ಹೂಡಿಕೆ ಸಮಾವೇಶ ಮುಂದಿನ ಬುಧವಾರದವರೆಗೆ ನಡೆಯಲಿದೆ.
ಸಚಿವರಾದ ಪಿ.ರಾಜೀವ್, ಪಿಎ ಮುಹಮ್ಮದ್ ರಿಯಾಜ್ ಹಾಗೂ ಮುಖ್ಯ ಕಾರ್ಯದರ್ಶಿ ವಿ.ಪಿ.ಜಾಯ್ ಅವರನ್ನೊಳಗೊಂಡ ಒಂಬತ್ತು ಸದಸ್ಯರ ತಂಡ ಇದೇ ತಿಂಗಳ 7ರಂದು ಯುಎಇಗೆ ತೆರಳಲು ನಿರ್ಧರಿಸಿತ್ತು. ಆದರೆ ಕೇಂದ್ರ ಸರ್ಕಾರ ಭೇಟಿಗೆ ಅನುಮತಿ ನೀಡಿರಲಿಲ್ಲ. ಇಂತಹ ಸಭೆಗೆ ಮುಖ್ಯಮಂತ್ರಿ ಹಾಗೂ ಸಚಿವರು ಪಾಲ್ಗೊಳ್ಳುವುದು ಮುಖ್ಯವಲ್ಲ ಬದಲಾಗಿ ಅಧಿಕೃತ ತಂಡವನ್ನು ಕಳುಹಿಸಿದರೆ ಸಾಕು ಎಂದು ಕೇಂದ್ರ ವಿದೇಶಾಂಗ ಸಚಿವಾಲಯ ಮಾಹಿತಿ ನೀಡಿದೆ.
ಹೂಡಿಕೆದಾರರ ಶೃಂಗಸಭೆಯು ಅಬುಧಾಬಿ ರಾಷ್ಟ್ರೀಯ ವಸ್ತುಪ್ರದರ್ಶನ ಕೇಂದ್ರದಲ್ಲಿ 8 ರಿಂದ 10 ರವರೆಗೆ ನಡೆಯಲಿದೆ. ಯುಎಇ ಸಚಿವ ಡಾ.ಥಾನಿ ಅಹ್ಮದ್ ಅಲ್ ಸೆಯುದಿ ಮುಖ್ಯಮಂತ್ರಿಯನ್ನು ಆಹ್ವಾನಿಸಿದ್ದರು. ರಾಜ್ಯ ತೀವ್ರ ಆರ್ಥಿಕ ಬಿಕ್ಕಟ್ಟಿಗೆ ಸಿಲುಕಿರುವಾಗ ಮುಖ್ಯಮಂತ್ರಿ ಹಾಗೂ ಇತರ ಸಚಿವರು ವಿದೇಶಗಳಿಗೆ ನಿರಂತರ ಭೇಟಿ ನೀಡುತ್ತಿರುವುದಕ್ಕೆ ವ್ಯಾಪಕ ಟೀಕೆಗಳು ವ್ಯಕ್ತವಾದ ಹಿನ್ನೆಲೆಯಲ್ಲಿ ಕೇಂದ್ರ ಈ ನಿರ್ಧಾರ ಕೈಗೊಂಡಿದೆ.