ಇಂಫಾಲ್ : ಘರ್ಷಣೆ, ಹಿಂಸಾಚಾರದ ಘಟನೆ ಗಳಿಂದಾಗಿ ಈಶಾನ್ಯ ರಾಜ್ಯ ಮಣಿಪುರದಲ್ಲಿ ಉದ್ವಿಗ್ನ ಪರಿಸ್ಥಿತಿಯು ಮೂಡಿದ್ದು, ಘರ್ಷಣೆಯಲ್ಲಿ ಆರು ಮಂದಿ ಮೃತಪಟ್ಟಿದ್ದಾರೆ.
ಪರಿಸ್ಥಿತಿ ನಿಯಂತ್ರಿಸಲು ಬಾಧಿತ ಜಿಲ್ಲೆಗಳಲ್ಲಿ ಗುರುವಾರ ಹೆಚ್ಚಿನ ಸಂಖ್ಯೆಯಲ್ಲಿ ಸೇನೆ ಮತ್ತು ಅಸ್ಸಾಂ ರೈಫಲ್ಸ್‌ನ ತುಕಡಿಗಳನ್ನು ನಿಯೋಜಿಸಲಾಗಿದೆ. 'ಕಂಡಲ್ಲಿ ಗುಂಡು' ಆದೇಶವನ್ನು ನೀಡಲಾಗಿದೆ.
ಕಾರಣವೇನು?
ರಾಜ್ಯದಲ್ಲಿ ಸುಮಾರು ಶೇ 53ರಷ್ಟಿರುವ ಮೈತೇಯಿ ಸಮುದಾಯವನ್ನು ಪರಿಶಿಷ್ಟ ಪಂಗಡದ (ST) ಪಟ್ಟಿಗೆ ಸೇರಿಸಬೇಕು ಎಂಬ ಬೇಡಿಕೆ ಇತ್ತು. ಈ ಕುರಿತು ಕೇಂದ್ರ ಸರ್ಕಾರಕ್ಕೆ ನಾಲ್ಕು ವಾರಗಳಲ್ಲಿ ಶಿಫಾರಸು ಕಳುಹಿ ಸುವಂತೆ ರಾಜ್ಯ ಸರ್ಕಾರಕ್ಕೆ ಮಣಿಪುರ ಹೈಕೋರ್ಟ್ ಇತ್ತೀಚೆಗೆ ಸೂಚಿಸಿತ್ತು.
ಆದರೆ, ಶೇ 40ರಷ್ಟಿರುವ ಬುಡಕಟ್ಟು ಸಮುದಾಯಗಳಿಂದ ಈ ಬೇಡಿಕೆಗೆ ತೀವ್ರ ಆಕ್ಷೇಪವಿತ್ತು. ಅಖಿಲ ಭಾರತ ಮಣಿಪುರ ವಿದ್ಯಾರ್ಥಿ ಸಂಘಟನೆ (ಎಟಿಎಸ್‌ಯುಎಂ) ನೇತೃತ್ವದಲ್ಲಿ ನಾಗಾ ಮತ್ತು ಕುಕಿ ಬುಡಕಟ್ಟು ಸಮುದಾಯದವರು ಪ್ರತಿಭಟನೆ ಹಾಗೂ 'ಬುಡಕಟ್ಟು ಜನರ ಏಕತಾ ಜಾಥಾ'ವನ್ನು ಬುಧವಾರ ಆಯೋಜಿಸಿದ್ದರು.
ಜಾಥಾ ನಡೆಯುವಾಗಲೇ ಚುರ್ಚಾಂದ್‌ಪುರ ಜಿಲ್ಲೆಯ ತೊರ್ಬುಂಗ್ ಪ್ರದೇಶದಲ್ಲಿ ಶಸ್ತ್ರಸಜ್ಜಿತ ಗುಂಪೊಂದು ಮೈತೇಯಿ ಸಮುದಾಯಕ್ಕೆ ಸೇರಿದ ಕೆಲವರ ಮೇಲೆ ಹಲ್ಲೆ ನಡೆಸಿತ್ತು. ಇದು ದ್ವೇಷದ ಕಿಡಿಯನ್ನು ಹೊತ್ತಿಸಿತು. ಇದಕ್ಕೆ ಪ್ರತೀಕಾರವಾಗಿ ಎಂಟು ಜಿಲ್ಲೆಗಳಲ್ಲಿ ಹಲ್ಲೆ ಘಟನೆಗಳು
ನಡೆದವು.
ಹಿಂಸೆ ಹೆಚ್ಚಿದಂತೆ ಸೇನೆ, ಅಸ್ಸಾಂ ರೈಫಲ್‌ಗೆ ಸೇರಿದ ಹಲವು ತುಕಡಿಗಳನ್ನು ರಾತ್ರಿಯೇ ಕರೆಸಿಕೊಳ್ಳಲಾಯಿತು. ಸೇನೆ, ಅಸ್ಸಾಂ ರೈಫಲ್ ತುಕಡಿಗಳ ನಿಯೋಜನೆಯಾದ ಬಳಿಕ ಪರಿಸ್ಥಿತಿ ನಿಯಂತ್ರಣಕ್ಕೆ ಬಂದಿದೆ ಎಂದು ಸೇನೆ ವಕ್ತಾರರು ತಿಳಿಸಿದ್ದಾರೆ.