HEALTH TIPS

ನಿಮಗೆ ನೀವೇ ವೈದ್ಯರಾಗಬೇಡಿ

               'ಹೊಸ ವೈದ್ಯನಿಗಿಂತ ಹಳೆಯ ರೋಗಿ ಮೇಲು' ಎನ್ನುವ ಗಾದೆಯಿದೆ. ಇದು ರೋಗಪತ್ತೆಯ ವಿಷಯದಲ್ಲಿ ಅನುಭವದ ಮಹತ್ವವನ್ನು ತಿಳಿಸುತ್ತದೆಯೇ ಹೊರತು, ಸ್ವಯಂವೈದ್ಯವನ್ನು ಪುರಸ್ಕರಿಸುವುದಿಲ್ಲ.

               ಈಚೆಗೆ ಸ್ವಯಂವೈದ್ಯ ಹೆಚ್ಚು ಬಳಕೆಯಾಗುತ್ತಿದೆ. ಸ್ವಯಂವೈದ್ಯ ಅಥವಾ ಸ್ವಚಿಕಿತ್ಸೆ ಎನ್ನುವುದು ತಮ್ಮ ಆರೋಗ್ಯಸಮಸ್ಯೆಗಳಿಗೆ ತಾವೇ ಚಿಕಿತ್ಸೆ ಮಾಡಿಕೊಳ್ಳುವುದು. ಸ್ವಯಂವೈದ್ಯದ ಪ್ರವೃತ್ತಿ ಈ ಮೊದಲೂ ಇತ್ತು. ಆಗ ಪುಸ್ತಕಗಳನ್ನು ಓದಿಯೋ, ಅಥವಾ ಹಳೆಯ ರೋಗಿಗಳನ್ನು ಕೇಳಿಯೋ ತಾವೇ ಚಿಕಿತ್ಸೆ ಮಾಡಿಕೊಳ್ಳುತ್ತಿದ್ದ ಜನರಿದ್ದರು. ವರ್ತಮಾನದಲ್ಲಿ ತಂತ್ರಜ್ಞಾನದ ನೆರವಿನಿಂದ ಅದೇ ಕೆಲಸವನ್ನು ಗೂಗಲ್, ಯೂಟ್ಯೂಬ್, ಚಾಟ್-ಜಿಪಿಟಿ ಮೊದಲಾದ ಅನುಕೂಲಗಳನ್ನು ಬಳಸಿ ಮಾಡುತ್ತಿದ್ದಾರೆ. ಸಾಧನಗಳು ಬದಲಾದರೂ ಪರಿಣಾಮ ಬದಲಾಗುವುದಿಲ್ಲ.

ಆರೋಗ್ಯ ಸಮಸ್ಯೆಗಳು ಎಂದಷ್ಟೇ ಅಲ್ಲ; ಯಾವುದೇ ಸಮಸ್ಯೆಯನ್ನು ಬಗೆಹರಿಸಲು ಹಲವಾರು ದಾರಿಗಳಿವೆ. ಅವುಗಳ ಪೈಕಿ ಅತ್ಯಂತ ವೈಜ್ಞಾನಿಕ ವಿಧಾನವೆಂದರೆ ಸಮಸ್ಯೆಯ ಕಾರಣವನ್ನು ಪತ್ತೆ ಮಾಡಿ, ಅದರ ಪರಿಣಾಮಗಳನ್ನು ವಿಶ್ಲೇಷಣೆಗೈದು, ಅದಕ್ಕೆ ತಕ್ಕಂತಹ ಸಮರ್ಥ ಪರಿಹಾರಗಳನ್ನು ನಿಯೋಜಿಸುವುದು. ಆರೋಗ್ಯಕ್ಕೆ ಸಂಬಂಧಿಸಿದ ಸಮಸ್ಯೆಗಳಿಗೆ ಈ ಪ್ರಕ್ರಿಯೆ ಅತ್ಯಗತ್ಯ. ಅಧ್ಯಯನ ಮತ್ತು ಅನುಭವಗಳಿಲ್ಲದೆ ಇದನ್ನು ಮಾಡಲಾಗದು. ಚಿಕಿತ್ಸೆ ನೀಡುವ ಮುನ್ನ ಕಾಯಿಲೆ ಏನೆಂದು ಅರಿಯುವುದು ಮುಖ್ಯವಾದ ಮಜಲು. ಅಂದಾಜಿನ ಚಿಕಿತ್ಸೆಗಳು ಪರಿಣಾಮಕಾರಿಯಾಗುವುದು ಅಪರೂಪ; ಅಪಾಯಕಾರಿಯಾಗುವುದು ಹೆಚ್ಚು.

                    ಮೂಲತಃ ಕಾಯಿಲೆ ಎಂದರೇನು? ಹತ್ತಾರು ಅಂಗಗಳಿರುವ ನಮ್ಮ ಶರೀರದಲ್ಲಿ ಪ್ರತಿ ಕ್ಷಣವೂ ಸಾವಿರಾರು ಸಂಕೀರ್ಣ ಭೌತಿಕ ಮತ್ತು ರಾಸಾಯನಿಕ ಪ್ರಕ್ರಿಯೆಗಳು ಘಟಿಸುತ್ತಲೇ ಇರುತ್ತವೆ. ಬಹುತೇಕ ಅಂಗಗಳು ಮತ್ತೊಂದರ ನೆರವಿನಿಂದ ಕೆಲಸ ಮಾಡುತ್ತವೆ. ಯಾವುದೋ ಒಂದು ಅಂಗದ ತಾತ್ಕಾಲಿಕ ಇಲ್ಲವೇ ದೀರ್ಘಕಾಲಿಕ ವೈಫಲ್ಯದಿಂದ ಅದಕ್ಕೆ ಹೊಂದಿಕೊಂಡು ಕಾರ್ಯ ನಿರ್ವಹಿಸುವ ಮತ್ತೊಂದು ಅಂಗದ ಕೆಲಸದಲ್ಲಿ ಸಹಜವಾಗಿಯೇ ಏರುಪೇರಾಗುತ್ತದೆ. ಉದಾಹರಣೆಗೆ, ಹೃದಯದ ಕೆಲಸದಲ್ಲಿ ಸಮಸ್ಯೆ ಬಂದಾಗ, ಮೆದುಳಿಗೆ ಸರಿಯಾದ ಪ್ರಮಾಣದಲ್ಲಿ ರಕ್ತ ತಲುಪದೆ ಅದರ ಕೆಲಸದ ಮೇಲೆ ಪ್ರತಿಕೂಲ ಪರಿಣಾಮವಾಗಬಹುದು. ಮೆದುಳು, ಹೃದಯ, ಶ್ವಾಸಕೋಶಗಳು, ಯಕೃತ್, ಮತ್ತು ಮೂತ್ರಪಿಂಡಗಳು ನಮ್ಮ ದೇಹದ ಪ್ರಮುಖ ಅಂಗಗಳು. ಇಂತಹ ಯಾವುದೇ ಪ್ರಮುಖ ಅಂಗದ ವೈಫಲ್ಯದ ವೇಳೆ ಇವುಗಳ ಮೇಲೆ ಅವಲಂಬಿತವಾಗಿರುವ ಹಲವಾರು ಅಂಗಗಳು ಒಂದಕ್ಕೊಂದು ಪೂರಕವಾಗಿ ಕೆಲಸ ಮಾಡಲಾಗದೇ ಅನತಿಕಾಲದಲ್ಲೇ ಶರೀರ ಅಸೌಖ್ಯಕ್ಕೆ ಒಳಗಾಗುತ್ತದೆ. ಪ್ರಮುಖ ಅಂಗಗಳ ಕಾರ್ಯನಿರ್ವಹಣೆಯ ಅಡಚಣೆಗೆ ರೋಗಕಾರಕ ಕ್ರಿಮಿಗಳು ಕಾರಣ ಆಗಿರಬಹುದು; ಅಂಗಗಳ ವಯೋಸಹಜ ವೈಫಲ್ಯ ಆಗಿರಬಹುದು; ರಕ್ತನಾಳಗಳ ಸಮಸ್ಯೆಯಿಂದ ಆಯಾ ಅಂಗಕ್ಕೆ ರಕ್ತವನ್ನು ಪೂರೈಸುವಲ್ಲಿ ಅಡೆತಡೆ ಆಗಿರಬಹುದು; ಅಂಗಗಳ ಕ್ಯಾನ್ಸರ್ ಗಂತಿಗಳು ಆಗಿರಬಹುದು. ಹೀಗೆ, ಸಮಸ್ಯೆಗಳ ಮೂಲಕ್ಕೆ ಹಲವಾರು ಕಾರಣಗಳಿರುತ್ತವೆ.

              ಮೇಲ್ನೋಟಕ್ಕೆ ಶರೀರದಲ್ಲಿನ ಅಸೌಖ್ಯದ ಬಾಹ್ಯ ಚಿಹ್ನೆಗಳು ಕಾಣುತ್ತವೆಯೇ ಹೊರತು, ಅದಕ್ಕೆ ಕಾರಣವಾದ ಮೂಲ ಸಮಸ್ಯೆ ನೇರವಾಗಿ ಕಾಣುವುದು ಅಪರೂಪ. ಕಾಯಿಲೆಯನ್ನು ಗುಣಪಡಿಸುವವರು ಈ ಚಿಹ್ನೆಗಳ ಜಾಡನ್ನು ಹಿಡಿದು ಮೂಲದೆಡೆಗೆ ಸಾಗಬೇಕು. ಅದರ ಬದಲಿಗೆ ಸ್ವಯಂವೈದ್ಯ ಮಾಡಿಕೊಂಡು ಕಾಯಿಲೆ-ಸೂಚಕ ಚಿಹ್ನೆಗಳನ್ನೇ ಅಳಿಸಿಹಾಕಿದರೆ ಬಹಳಷ್ಟು ನಷ್ಟ ಅನುಭವಿಸಬೇಕಾಗುತ್ತದೆ. ಸಮಸ್ಯೆಯ ಬೇರುಮಟ್ಟಕ್ಕೆ ತಲುಪಿ, ಶರೀರಕ್ಕೆ ಆಗಿರುವ ಘಾಸಿಯನ್ನು ಗುರುತಿಸಿ, ಅದಕ್ಕೆ ಕಾರಣವಾದ ತೊಂದರೆಯನ್ನು ನಿವಾರಿಸಿದರೆ ಮಾತ್ರ ಕಾಯಿಲೆ ಗುಣವಾದಂತೆ. ಕೆಲವೊಮ್ಮೆ ಹತ್ತು ರೂಪಾಯಿ ಬೆಲೆಯ ಔಷಧ ನೀಡಲು ಸಾವಿರ ರೂಪಾಯಿ ಮೌಲ್ಯದ ಪರೀಕ್ಷೆಗಳನ್ನು ಮಾಡಬೇಕಾದ ಸಂದರ್ಭ ಒದಗುತ್ತದೆ.

              ಇಂತಹ ವೈಜ್ಞಾನಿಕ ಪ್ರಕ್ರಿಯೆಯನ್ನು ಅನುಸರಿಸದೇ ಇರುವ ಯಾವುದೇ ವಿಧಾನವೂ ಸರಿಯಾದ ಫಲಿತಾಂಶವನ್ನು ನೀಡಲಾರದು. ಸಮಸ್ಯೆಯ ಮೂಲವನ್ನು ತಿಳಿಯಲು ಕೇವಲ ಪ್ರಯೋಗಾಲಯದ ಪರೀಕ್ಷೆಗಳು ಮಾತ್ರವೇ ಬೇಕೆಂದೇನಿಲ್ಲ. ಬಹುತೇಕ ಕಾಯಿಲೆಗಳ ಕಾರಣವನ್ನು ಬಗೆಹರಿಸಲು ವೈದ್ಯರು ತಮ್ಮ ಅನುಭವಗಳ ಆಧಾರದ ಮೇಲೆ ಮಾಡುವ ರೋಗಲಕ್ಷಣಗಳ ವಿಶ್ಲೇಷಣೆ ಮತ್ತು ಕೂಲಂಕಶ ಭೌತಿಕ ಪರೀಕ್ಷೆಗಳು ಸಾಕಾಗುತ್ತವೆ. ಉದಾಹರಣೆಗೆ, ಹೊಟ್ಟೆನೋವಿನಿಂದ ಬಳಲುವ ರೋಗಿಯ ಸಮಸ್ಯೆಯನ್ನು ವಿಶ್ಲೇಷಿಸಲು ಅವರ ಇತರ ರೋಗಲಕ್ಷಣಗಳು; ಆಹಾರ ಪದ್ದತಿ; ನೀರಿನ ಸೇವನೆ; ಮಲಮೂತ್ರ ವಿಸರ್ಜನೆಯ ವಿವರಗಳು; ಹೊಟ್ಟೆಯ ಯಾವ ಭಾಗದಲ್ಲಿ ನೋವು ಅಧಿಕವಾಗಿದೆ ಎಂಬ ಭೌತಿಕ ಪರೀಕ್ಷೆ - ಇಂತಹ ಕೆಲವು ಅಂಶಗಳಿಂದ ನುರಿತ ವೈದ್ಯರು ಇದು ಆಮ್ಲೀಯ ಹೆಚ್ಚಳವೇ; ಮೂತ್ರಪಿಂಡಗಳ ಸಮಸ್ಯೆಯೇ; ಅಜೀರ್ಣವೇ; ಮಲಬದ್ಧತೆಯೇ; ಅಪೆಂಡಿಕ್ಸ್ ಸೋಂಕೇ ಎಂಬುದನ್ನು ಸಾಕಷ್ಟು ನಿಖರವಾಗಿ ಪತ್ತೆ ಮಾಡಬಲ್ಲರು.

               ಹಲವಾರು ಕಾಯಿಲೆಗಳನ್ನು ಸ್ವಲ್ಪ ವಿಶ್ರಾಂತಿ, ಸರಿಯಾದ ಆಹಾರಗಳ ನೆರವಿನಿಂದ ಯಾವುದೇ  ಔಷಧೋಪಚಾರವಿಲ್ಲದೆಯೇ ಶರೀರ ತಂತಾನೇ ಗುಣಪಡಿಸಿಕೊಳ್ಳುತ್ತದೆ. ತಾನಾಗಿಯೇ ಸರಿಹೋಗಬಹುದಾದ ಇಂತಹ ಕಾಯಿಲೆಗಳಿಗೆ ಚಿಕಿತ್ಸೆಯೇ ಬೇಕಾಗುವುದಿಲ್ಲ. ಅವುಗಳಿಗೆ ಸ್ವಯಂವೈದ್ಯವಾದರೂ ಸರಿಯೇ; ಬೇರೆ ಯಾವುದೇ ಚಿಕಿತ್ಸೆಯಾದರೂ ಒಂದೇ. ಆದರೆ ಈ ರೀತಿಯಲ್ಲಿ ಗುಣವಾಗಲಾರದ ಕಾಯಿಲೆಗಳಿಗೆ ನಿಖರವಾದ ಕಾರಣವನ್ನು ಹುಡುಕುವುದು ಕಡ್ಡಾಯ. ಇಂತಹ ಕಾಯಿಲೆಗಳಿಗೆ ಕೇವಲ ರೋಗಲಕ್ಷಣಗಳನ್ನು ಆಧರಿಸಿ ಸ್ವಯಂವೈದ್ಯ ಮಾಡಿಕೊಳ್ಳುವುದು ಅಪಾಯಕಾರಿ. ಕೆಲವೊಮ್ಮೆ ಸ್ವಯಂವೈದ್ಯದ ಚಿಕಿತ್ಸೆಗಳು ಕಾಯಿಲೆಯ ಲಕ್ಷಣಗಳನ್ನು ನಿವಾರಿಸಿ ಇಡೀ ರೋಗನಿರ್ಣಯ ಪ್ರಕ್ರಿಯೆಯ ದಾರಿ ತಪ್ಪಿಸುತ್ತವೆ. ಉದಾಹರಣೆಗೆ, ಬ್ಯಾಕ್ಟೀರಿಯಾ ಸೋಂಕು ಉಂಟಾದಾಗ ವೈದ್ಯರ ಸಲಹೆ ಇಲ್ಲದೆ ಯಾವುದೋ ಆಯಂಟಿಬಯಾಟಿಕ್ ಔಷಧವನ್ನು ಅರೆಬರೆ ಪ್ರಮಾಣದಲ್ಲಿ ಕಡಿಮೆ ಅವಧಿಗೆ ಸೇವಿಸಿದಾಗ, ರೋಗಕಾರಕಗಳ ವರ್ತನೆ ಏರುಪೇರಾಗಿ, ಇಡೀ ರೋಗದ ಲಕ್ಷಣಗಳು ಬೇರೆಯೇ ಸ್ವರೂಪ ಪಡೆಯುತ್ತವೆ. ಆಗ ಒಂದು ಸರಳ ಪರೀಕ್ಷೆ ಮಾಡುವ ಬದಲಿಗೆ ನಾಲ್ಕು ದುಬಾರಿ ಪರೀಕ್ಷೆಗಳು ಬೇಕಾಗುತ್ತವೆ.

                'ಹೊಸ ವೈದ್ಯನಿಗಿಂತ ಹಳೆಯ ರೋಗಿ ಮೇಲು' ಎನ್ನುವ ಗಾದೆಯಿದೆ. ಇದು ರೋಗಪತ್ತೆಯ ವಿಷಯದಲ್ಲಿ ಅನುಭವದ ಮಹತ್ವವನ್ನು ತಿಳಿಸುತ್ತದೆಯೇ ಹೊರತು, ಸ್ವಯಂವೈದ್ಯವನ್ನು ಪುರಸ್ಕರಿಸುವುದಿಲ್ಲ. ಪ್ರಸ್ತುತ ವೈದ್ಯಕೀಯ ವಿಜ್ಞಾನ ದಿನದಿನವೂ ಮಹತ್ತರವಾಗಿ ಪ್ರಗತಿ ಹೊಂದುತ್ತಿದೆ. ಒಂದೆರಡು ದಶಕಗಳ ಹಿಂದೆ ಇದ್ದ ರೋಗಪತ್ತೆ ತಂತ್ರಜ್ಞಾನ, ಔಷಧಗಳು, ರೋಗಿಯ ಆರೈಕೆಯ ಮಾರ್ಗಸೂಚಿಗಳು ಇಂದು ಸಾಕಷ್ಟು ಬದಲಾಗುವುದು ವೈದ್ಯಕೀಯ ರಂಗದಲ್ಲಿ ಸಾಮಾನ್ಯ ಸಂಗತಿ. ಹೀಗಾಗಿ, ಯಾವುದೋ ಹಳೆಯ ರೋಗಿ ಹಿಂದೆಂದೋ ಪಡೆದ ಚಿಕಿತ್ಸೆ ವರ್ತಮಾನದಲ್ಲಿ ಅಪ್ರಸ್ತುತವಾಗಬಹುದು. ಸ್ವಯಂವೈದ್ಯದ ಅತಿ ದೊಡ್ಡ ದೌರ್ಬಲ್ಯ ಮತ್ತು ಅಪಾಯ ಇದೇ. ಇಂದಿನ ವೈದ್ಯಕೀಯ ಸೇವೆಗಳು ದುಬಾರಿ ಎಂಬ ಮಾತು ನಿಜ. ಆದರೆ, ಆರೋಗ್ಯಕ್ಕಿಂತ ಹೆಚ್ಚಿನ ಮೌಲ್ಯ ಜೀವನದಲ್ಲಿ ಇನ್ಯಾವುದಕ್ಕೂ ಇಲ್ಲ ಎನ್ನುವುದೂ ಸತ್ಯ. ಪ್ರತಿಯೊಂದು ಸಮಸ್ಯೆಗೂ ತಜ್ಞವೈದ್ಯರೇ ಬೇಕೆಂದಿಲ್ಲ. ಒಳ್ಳೆಯ ಕುಟುಂಬ-ವೈದ್ಯರನ್ನು ಗುರುತಿಸಿ, ನಮ್ಮ ಆರೋಗ್ಯದ ಹೊಣೆಯನ್ನು ಅವರಿಗೆ ಒಪ್ಪಿಸಿದರೆ, ಎಂಬತ್ತು ಪ್ರತಿಶತ ಕಾಯಿಲೆಗಳನ್ನು ಅವರು ಸಮರ್ಥವಾಗಿ ನಿಭಾಯಿಸಬಲ್ಲರು. ಅಗತ್ಯ ಬಿದ್ದಾಗ ಸರಿಯಾದ ತಜ್ಞವೈದ್ಯರನ್ನೂ ಅವರೇ ಸೂಚಿಸಬಲ್ಲರು.

                 ಸ್ವಯಂವೈದ್ಯ ಸೂಕ್ತವಲ್ಲ. ಇದರಿಂದ ಹಲವಾರು ತೊಂದರೆಗಳಿಗೆ, ಅಂಗವೈಫಲ್ಯಗಳಿಗೆ ಒಳಗಾದವರಿದ್ದಾರೆ; ಅಪಾಯಕಾರಿ ಮಾತ್ರೆಗಳನ್ನು ಸೇವಿಸಿ ಮರಣಿಸಿದವರಿದ್ದಾರೆ. ಆರೋಗ್ಯ ಸಮಸ್ಯೆಗಳ ನಿರ್ವಹಣೆ ವೈದ್ಯರಿಗಿರಲಿ. ಶರೀರವನ್ನು ಸ್ವಯಂವೈದ್ಯದ ಅಪಾಯಗಳಿಗೆ ಒಡ್ಡಿಕೊಳ್ಳದಿರುವುದು ಜಾಣತನ.


Tags

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries