ನವದೆಹಲಿ::ಗೃಹ ಸಚಿವ ಅಮಿತ್ ಶಾ ಅವರನ್ನು ಟೀಕಿಸಿದ ಲೇಖನದ ಕುರಿತಂತೆ ಸಿಪಿಐ (ಮಾಕ್ಸಿಸ್ಟ್) ಸಂಸದ ಜಾನ್ ಬ್ರಿಟ್ಟಾಸ್ ಅವರಿಗೆ ಉಪ ರಾಷ್ಟ್ರಪತಿ ಜಗದೀಪ್ ಧಂಕರ್ ಅವರು ಸಮನ್ಸ್ ನೀಡಿದ್ದಾರೆ.
ಉಪ ರಾಷ್ಟ್ರಪತಿ ಜಗದೀಪ್ ಧಂಕರ್ ಅವರು ರಾಜ್ಯ ಸಭೆಯ ಅಧ್ಯಕ್ಷರು ಕೂಡ ಆಗಿದ್ದಾರೆ.
ಅಮಿತ್ ಶಾ ಅವರನ್ನು ಟೀಕಿಸಿ 'ದಿ ಇಂಡಿಯನ್ ಎಕ್ಸ್ಪ್ರೆಸ್'ನಲ್ಲಿ ಫೆಬ್ರವರಿ 20ರಂದು ಲೇಖನ ಪ್ರಕಟಿಸಿದ ಹಿನ್ನೆಲೆಯಲ್ಲಿ ಸಿಪಿಐ (ಎಂ) ನಾಯಕ ಜಾನ್ ಬ್ರಿಟ್ಟಾಸ್ ಅವರ ವಿರುದ್ಧ ಬಿಜೆಪಿ ಕೇರಳ ಘಟಕದ ಪ್ರಧಾನ ಕಾರ್ಯದರ್ಶಿ ಸಲ್ಲಿಸಿದ ದೂರಿನ ಆಧಾರದಲ್ಲಿ ಜಾನ್ ಬ್ರಿಟ್ಟಾಸ್ ಅವರಿಗೆ ಸಮನ್ಸ್ ನೀಡಲಾಗಿದೆ.
ತಮ್ಮ ಪಕ್ಷದಿಂದ ಮಾತ್ರ ಕರ್ನಾಟಕವನ್ನು ಸುರಕ್ಷಿತವಾಗಿ ಇರಿಸಲು ಸಾಧ್ಯ ಎಂಬ ಅಮಿತ್ ಶಾ ಅವರ ಹೇಳಿಕೆಯನ್ನು 'ಪ್ರಚಾರದ ಅನಾಹುತ' ಎಂಬ ಶೀರ್ಷಿಕೆಯ ಲೇಖನದಲ್ಲಿ ಜಾನ್ ಬ್ರಿಟ್ಟಾಸ್ ಟೀಕಿಸಿದ್ದಾರೆ. ನಿಮ್ಮ ಹತ್ತಿರ ಕೇರಳವಿದೆ. ನಾನು ಹೆಚ್ಚು ಹೇಳಲು ಬಯಸುವುದಿಲ್ಲ ಎಂದು ಜೋನ್ ಬ್ರಿಟ್ಟಾಸ್ ಹೇಳಿದ್ದರು.
ಅಮಿತ್ ಶಾ ಅವರು ಆಗಾಗ ಕೇರಳದ ಬಗ್ಗೆ ವ್ಯಕ್ತಪಡಿಸುತ್ತಿರುವ ನಿಂದನೆ ಅವರ ಹತಾಶ ಸ್ಥಿತಿ ಹಾಗೂ ಭಾರತದವನ್ನು ಹಿಂದೂ ರಾಷ್ಟ್ರವಾಗಿ ಪರಿವರ್ತಿಸುವ, ಸಂವಿಧಾನದ ಸ್ಥಾನದಲ್ಲಿ ಮನುಸ್ಮತಿಯನ್ನು ಅಸ್ತಿತ್ವಕ್ಕೆ ತರುವ ಮೂಲಕ ಭಾರತವನ್ನು ಪ್ರಾಚೀನ ಕಾಲಕ್ಕೆ ಒಯ್ಯುವ ಪ್ರಯತ್ನವಾಗಿದೆ. ಕೇರಳ ಕೇಸರಿ ಪಕ್ಷವನ್ನು ದಣಿವರಿಯದೆ ವಿರೋಧಿಸಿದೆ ಎಂದು ಜೋನ್ ಬ್ರಿಟ್ಟಾಸ್ ಬರೆದಿದ್ದರು.
ಸುಧೀರ್ ತನ್ನ ದೂರಿನಲ್ಲಿ ಜೋನ್ ಬ್ರಿಟ್ಟಾಸ್ ಅವರ ಲೇಖನ ''ವಿಭಜನೀಯ ಹಾಗೂ ಧ್ರುವೀಕರಣ''ದ ಉದ್ದೇಶ ಹೊಂದಿದೆ ಎಂದು ವಿವರಿಸಿದ್ದಾರೆ. ''ರಾಜ್ಯ ಸಭಾ ಸದಸ್ಯರ ದೇಶದ್ರೋಹಿ ನಡೆವಳಿಕೆ'' ವಿರುದ್ಧ ಕ್ರಮ ಕೈಗೊಳ್ಳುವಂತೆ ಅವರು ಆಗ್ರಹಿಸಿದ್ದಾರೆ.
''ಹೌದು, ನಾನು ಬರೆದ ಲೇಖನದ ಕುರಿತಂತೆ ಭೇಟಿಯಾಗಲು ಸಮನ್ಸ್ ನೀಡಲಾಗಿತ್ತು. ಈ ವಿಷಯದಲ್ಲಿ ನನ್ನ ಸ್ಥಾನದ ಬಗ್ಗೆ ಸಾಕಷ್ಟು ವಿವರ ನೀಡಿದೆ. ಲೇಖನ ಬರೆಯುವುದು ನನ್ನ ಮೂಲಭೂತ ಹಕ್ಕು ಹಾಗೂ ನನ್ನ ಅಭಿವ್ಯಕ್ತಿ ಸ್ವಾತಂತ್ರ್ಯದ ಭಾಗ ಎಂದು ರಾಜ್ಯಸಭಾಧ್ಯಕ್ಷರಿಗೆ ತಿಳಿಸಿದ್ದೇನೆ. ಕೇರಳದ ಕುರಿತು ಪರೋಕ್ಷವಾಗಿ ಟೀಕೆ ಮಾಡಬಹುದಾದರೆ, ನಾನು ಪ್ರತಿಕ್ರಿಯಿಸಲು ಸಂಪೂರ್ಣ ಸ್ವತಂತ್ರ್ಯನಾಗಿದ್ದೇನೆ''.
ಜೋನ್ ಬ್ರಿಟ್ಟಾಸ್, ಸಿಪಿಎಂ ಸಂಸದ