ನವದೆಹಲಿ: ಭಾರತದ ಫಿನ್ ಟೆಕ್ ದೈತ್ಯ ಪೇಟಿಎಂ ಸಂಸ್ಥೆ ತನ್ನ ಪ್ರತಿಸ್ಪರ್ಧಿಗಳಾದ ಗೂಗಲ್ ಪೇ, ಫೋನ್ ಪೇ ಸಂಸ್ಥೆಗಳನ್ನು ಹಿಂದಿಕ್ಕಿದೆ.
2023-24 ನೇ ಆರ್ಥಿಕ ವರ್ಷದ ಫೈನಾನ್ಷಿಯಲ್ ಪರ್ಫಾರ್ಮೆನ್ಸ್ ವರದಿಯಲ್ಲಿ ಪೇಟಿಎಂ ನ ಆದಾಯ 7,991 ಕೋಟಿ ರೂಪಾಯಿಗಳಿಗೆ ಏರಿಕೆಯಾಗಿದ್ದು, ಭಾರತದ ಫಿನ್ ಟೆಕ್ ವಿಭಾಗದಲ್ಲಿ ಮುಂಚೂಣಿಯಲ್ಲಿದೆ. 2022 ರ ಮೊದಲ 9 ತಿಂಗಳಲ್ಲಿ ಫೋನ್ ಪೇ ಆದಾಯ 1,912 ಕೋಟಿಯಷ್ಟಿದ್ದರೆ, ಪೇಟಿಎಂ ನ 4 ನೇ ತ್ರೈಮಾಸಿಕದ ಆದಾಯ 2,334 ಕೋಟಿಯಷ್ಟಿದೆ. ಫೋನ್ ಪೇ ಹಾಗೂ ಗೂಗಲ್ ಪೇ ಯುಪಿಐ ನ ಪಿ2ಪಿ ನತ್ತ ಹೆಚ್ಚು ಗಮನ ಹರಿಸಿದರೆ, ಪೇಟಿಎಂ ಈ ವಿಭಾಗದ ಉದ್ಯಮದಲ್ಲಿ ವೈವಿಧ್ಯತೆಯನ್ನು ಹೊಂದುವ ಮೂಲಕ ಹೆಚ್ಚಿನ ಆದಾಯ ಗಳಿಸುವಲ್ಲಿ ಯಶಸ್ವಿಯಾಗಿದೆ. ವಾಸ್ತವವಾಗಿ, ಪೇಟಿಎಂ ವ್ಯಾಪಾರಿ ಪಾವತಿಗಳ ಮೇಲೆ ಉದ್ಯಮವನ್ನು ಕೇಂದ್ರೀಕರಿಸಿದ್ದು, ಅದು ಸಂಸ್ಥೆಯ ಬಹುಪಾಲು ಆದಾಯದ ಮೂಲವಾಗಿದೆ. ನಾಲ್ಕನೇ ತ್ರೈಮಾಸಿಕದಲ್ಲಿ ಪೇಟಿಎಂ 182 ಕೋಟಿ ರೂಪಾಯಿಗಳಷ್ಟು ಯುಪಿಐ ಇನ್ಸೆಂಟೀವ್ ಗಳನ್ನು ದಾಖಲಿಸಿತ್ತು ಇದು ಕಳೆದ ವರ್ಷಕ್ಕೆ ಹೋಲಿಕೆ ಮಾಡಿದರೆ ಶೇ.101 ರಷ್ಟು ಏರಿಕೆಯಾಗಿದೆ.