ನವದೆಹಲಿ: 'ಸಮಾಜಕ್ಕೆ ನೈತಿಕತೆ ಕುರಿತು ಬೋಧಿಸುವ ಸಂಸ್ಥೆ ತಾನಲ್ಲ. ಕಾನೂನಿನ ಚೌಕಟ್ಟಿನಲ್ಲಿಯೇ ಕಾರ್ಯ ನಿರ್ವಹಿಸುವ ಸಂಸ್ಥೆ' ಎಂದು ಸುಪ್ರೀಂಕೋರ್ಟ್ ಹೇಳಿದೆ.
ವಿಷವುಣಿಸಿ ತನ್ನ ಇಬ್ಬರು ಗಂಡು ಮಕ್ಕಳನ್ನು ಕೊಲೆ ಮಾಡಿದ್ದಕ್ಕಾಗಿ 20 ವರ್ಷ ಜೈಲುವಾಸ ಅನುಭವಿಸಿದ ಮಹಿಳೆಯ ಅವಧಿಪೂರ್ವ ಬಿಡುಗಡೆಗೆ ಅನುಮತಿ ನೀಡಿ ಆದೇಶ ಹೊರಡಿಸಿದ ಸಂದರ್ಭದಲ್ಲಿ ಸುಪ್ರೀಂಕೋರ್ಟ್ ಈ ಮಾತನ್ನು ಹೇಳಿದೆ.
ನ್ಯಾಯಮೂರ್ತಿಗಳಾದ ಅಜಯ್ ರಸ್ತೋಗಿ ಹಾಗೂ ಎ.ಅಮಾನುಲ್ಲಾ ಅವರಿದ್ದ ನ್ಯಾಯಪೀಠವು ಮಹಿಳೆ ಸಲ್ಲಿಸಿದ ಅರ್ಜಿ ವಿಚಾರಣೆ ನಡೆಸಿತು. ಮಹಿಳೆಯ ಅವಧಿಪೂರ್ವ ಬಿಡುಗಡೆಗೆ ರಾಜ್ಯ ಮಟ್ಟದ ಸಮಿತಿ ಮಾಡಿದ್ದ ಶಿಫಾರಸನ್ನು ತಿರಸ್ಕರಿಸಿ ತಮಿಳುನಾಡು ಸರ್ಕಾರ ಹೊರಡಿಸಿದ್ದ ಆದೇಶವನ್ನು ನ್ಯಾಯಪೀಠ ರದ್ದುಗೊಳಿಸಿತು.
'ಮಹಿಳೆಗೆ ವಿವಾಹೇತರ ಸಂಬಂಧ ಇತ್ತು. ಆ ವ್ಯಕ್ತಿ ಪದೇಪದೇ ಒಡ್ಡುತ್ತಿದ್ದ ಬೆದರಿಕೆ, ಆಕೆ ತನ್ನ ಮಕ್ಕಳೊಂದಿಗೆ ಆತ್ಮಹತ್ಯೆ ಮಾಡಿಕೊಳ್ಳುವ ನಿರ್ಧಾರ ಕೈಗೊಳ್ಳುವಂತೆ ಮಾಡಿತ್ತು. ಆಕೆ ನೀಡಿದ ಕೀಟನಾಶಕ ಸೇವಿಸಿ ಮಕ್ಕಳು ಮೃತಪಟ್ಟರು. ಆಕೆಯೂ ಕೀಟನಾಶಕ ಸೇವಿಸಲು ಯತ್ನಿಸಿದಾಗ ಸಂಬಂಧಿಯೊಬ್ಬರು ತಡೆದಿದ್ದರು' ಎಂದು ನ್ಯಾಯಪೀಠ ತನ್ನ ಆದೇಶದಲ್ಲಿ ತಿಳಿಸಿದೆ.
ಮಹಿಳೆ 20 ವರ್ಷ ಜೈಲುವಾಸ ಅನುಭವಿಸಿದ್ದು, ಅವಧಿಪೂರ್ವ ಬಿಡುಗಡೆ ಕೋರಿದ್ದಾಳೆ. ಮಹಿಳೆಯ ಬಿಡುಗಡೆಗೆ ರಾಜ್ಯ ಮಟ್ಟದ ಸಮಿತಿ (ಎಸ್‌ಎಲ್‌ಸಿ) ಶಿಫಾರಸು ಕೂಡ ಮಾಡಿತ್ತು. ಆದರೆ, ಆಕೆಯ ಕೃತ್ಯದ ಸ್ವರೂಪವನ್ನು ಪರಿಗಣಿಸಿ ತಮಿಳುನಾಡು ಸರ್ಕಾರ 2019ರ ಸೆಪ್ಟೆಂಬರ್‌ನಲ್ಲಿ ಈ ಶಿಫಾರಸನ್ನು ತಿರಸ್ಕರಿಸಿತ್ತು.
'ಮಹಿಳೆಯ ಅಪರಾಧಕ್ಕಾಗಿ ನೀಡಿರುವ ಶಿಕ್ಷೆಯ ಬಗ್ಗೆ ಸುಪ್ರೀಂಕೋರ್ಟ್ ಮಧ್ಯಪ್ರವೇಶಿಸುವುದಿಲ್ಲ. ಆದರೆ, ಮಹಿಳೆಯ ಅವಧಿಪೂರ್ವ ಬಿಡುಗಡೆಗೆ ಎಸ್‌ಎಲ್‌ಸಿ ಮಾಡಿರುವ ಶಿಫಾರಸನ್ನು ರಾಜ್ಯ ಸರ್ಕಾರ ತಿರಸ್ಕರಿಸಲು ಯಾವುದೇ ಸೂಕ್ತ ಕಾರಣ ಇಲ್ಲ ಅಥವಾ ತನ್ನ ನಿರ್ಧಾರಕ್ಕೆ ಅದು ನೀಡಿರುವ ಆಧಾರವು ಸಮರ್ಥನೀಯವೂ ಅಲ್ಲ' ಎಂದು ನ್ಯಾಯಪೀಠ ಹೇಳಿದೆ.
ಈ ಪ್ರಕರಣದಲ್ಲಿ ಮಹಿಳೆಗೆ ಶಿಕ್ಷೆ ವಿಧಿಸಿ ವಿಚಾರಣಾ ನ್ಯಾಯಾಲಯ 2005ರ ಜನವರಿಯಲ್ಲಿ ತೀರ್ಪು ನೀಡಿತ್ತು. ಈ ಶಿಕ್ಷೆಯನ್ನು ಎತ್ತಿ ಹಿಡಿದು ಮದ್ರಾಸ್ ಹೈಕೋರ್ಟ್ 2019ರಲ್ಲಿ ಆದೇಶಿಸಿತ್ತು. ಹೈಕೋರ್ಟ್ ಆದೇಶವನ್ನು ಪ್ರಶ್ನಿಸಿ, ಮಹಿಳೆ ಸುಪ್ರೀಂಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದ್ದಳು.