ನವದೆಹಲಿ (PTI): 'ಸಲಿಂಗ ವಿವಾಹಕ್ಕೆ ಕಾನೂನಿನ ಮಾನ್ಯತೆ ನೀಡಿದರೆ ದೇಶದ ಸಾಂಸ್ಕೃತಿಕ ತಳಹದಿಯೇ ಕಂಪಿಸಲಿದೆ. ಹಿಂದೂ ವಿವಾಹ ಕಾಯ್ದೆಯ ಮೂಲ ಆಶಯಗಳಿಗೆ ಧಕ್ಕೆ ಎದುರಾಗಲಿದೆ. ಹಿಂದೂ ಧರ್ಮದ ಸ್ವರೂಪಕ್ಕೂ ಕುಂದುಂಟಾಗಲಿದೆ' ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್‌ಎಸ್‌ಎಸ್) ಅಂಗ ಸಂಸ್ಥೆ ಸಂವರ್ಧಿನಿ ನ್ಯಾಸ್ ಹೇಳಿದೆ.
ಈ ಸಂಬಂಧ ಸುಪ್ರೀಂ ಕೋರ್ಟ್‌ನ ರಿಜಿಸ್ಟ್ರಾರ್‌ಗೆ ಬುಧವಾರ ಪತ್ರ ಬರೆದಿದೆ. 'ಸಲಿಂಗ ಮದುವೆಯನ್ನು ಕಾನೂನು ಬದ್ಧಗೊಳಿಸುವುದರಿಂದ ಆ ಜೋಡಿಯ ಆರೈಕೆಯಲ್ಲಿ ಬೆಳೆದ ಮಗುವಿನ ವ್ಯಕ್ತಿತ್ವ ಹಾಗೂ ಬೆಳವಣಿಗೆ ಮೇಲೆ ಪ್ರತಿಕೂಲ ಪರಿಣಾಮ ಉಂಟಾಗಲಿದೆ. ಇದು ಯುವ ಸಮುದಾಯದ ಮೇಲೂ ದುಷ್ಪರಿಣಾಮ ಬೀರಲಿದೆ' ಎಂದು ಹೇಳಿದೆ.
'ಮದುವೆ ಎಂಬುದು ಮಹಿಳೆ ಹಾಗೂ ಪುರುಷನ ನಡುವಣ ಬಂಧ. ಅದು ಸಲಿಂಗಿಗಳಿಗೆ ಸಂಬಂಧಿಸಿದ್ದಲ್ಲ. ಸಲಿಂಗ ವಿವಾಹವನ್ನು ಮಾನ್ಯಗೊಳಿಸುವುದು ನಮ್ಮ ಸಾಂಸ್ಕೃತಿಕ ಹಾಗೂ ಧಾರ್ಮಿಕ ನಂಬಿಕೆಗೆ ವಿರುದ್ಧವಾದುದು' ಎಂದು ಸಂವರ್ಧಿನಿ ನ್ಯಾಸ್ ಸಂಸ್ಥೆಯ ಕಾನೂನು ಸಲಹೆಗಾರ್ತಿ ಶ್ವೇತಾ ಶರ್ಮಾ, ಪತ್ರದಲ್ಲಿ ತಿಳಿಸಿದ್ದಾರೆ.