ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಜಾಗತಿಕ ಮಟ್ಟದಲ್ಲಿ ಅಮೇರಿಕಾ ಅಧ್ಯಕ್ಷರನ್ನೂ ಮೀರಿದ ಜನಪ್ರಿಯತೆ ಹೊಂದಿದ್ದಾರೆಂಬುದು ಹೊಸ ಸುದ್ದಿಯೇನಲ್ಲ. ಈಗ ಇದನ್ನು ಮತ್ತೊಮ್ಮೆ ಸಾಬೀತುಪಡಿಸುವ ಬೆಳವಣಿಗೆ ನಡೆದಿದ್ದು, ಜಗತ್ತಿನ ದೊಡ್ಡಣ್ಣ ಎಂದೇ ಕರೆಸಿಕೊಳ್ಳುತ್ತಿದ್ದ ಅಮೇರಿಕ ಅಧ್ಯಕ್ಷ ಜೋ ಬೈಡನ್ ಮೋದಿ ಅವರ ಬಳಿ "ನಾನು ನಿಮ್ಮ ಆಟೋಗ್ರಾಫ್ ಪಡೆಯಬೇಕು" ಎಂದು ಕೇಳಿದ್ದಾರೆ.
ಮುಂದಿನ ತಿಂಗಳು ಪ್ರಧಾನಿ ಮೋದಿ ವಾಷಿಂಗ್ ಟನ್ ಡಿಸಿಗೆ ಭೇಟಿ ನೀಡಲಿದ್ದು, ಪ್ರಧಾನಿ ಮೋದಿ ಭಾಗಿಯಾಗುವ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಲು ಅಲ್ಲಿನ ಪ್ರಮುಖ ನಾಗರಿಕರಿಂದ ಅತಿ ಹೆಚ್ಚಿನ ಸಂಖ್ಯೆಯಲ್ಲಿ ಬೇಡಿಕೆಗಳು ಬರುತ್ತಿದೆ ಎಂಬುದನ್ನು ಅಮೇರಿಕಾ ಅಧ್ಯಕ್ಷರು ಹೇಳಿದ್ದಾರೆ.ಇದೇ ರೀತಿಯ ಹೇಳಿಕೆ ನೀಡಿರುವ ಆಸ್ಟ್ರೇಲಿಯಾ ಪ್ರಧಾನಿ ಆಂಟೋನಿ ಅಲ್ಬನೀಸ್, ಪ್ರಧಾನಿ ಮೋದಿ ಭಾಗವಹಿಸಿ ಮಾತನಾಡಲಿರುವ ಸಮುದಾಯದ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವುದಕ್ಕೆ ಬರುತ್ತಿರುವ ಬೇಡಿಕೆಗಳನ್ನು ನಿಭಾಯಿಸಲು ಸಾಧ್ಯವಾಗುತ್ತಿಲ್ಲ ಎಂದು ಹೇಳಿದ್ದಾರೆ.
ಮಂಗಳವಾರ ಪ್ರಧಾನಿ ಮೋದಿ ಆಸ್ಟ್ರೇಲಿಯಾದಲ್ಲಿ ಭಾರತೀಯ ಸಮುದಾಯವನ್ನುದ್ದೇಶಿಸಿ ಮಾತನಾಡಲಿದ್ದು, ಆ ಸ್ಥಳದಲ್ಲಿ 20,000 ಮಂದಿಗೆ ಆಸನ ವ್ಯವಸ್ಥೆಯ ಸಾಮರ್ಥ್ಯ ಇದೆ ಆದರೆ ಅದಕ್ಕಿಂತಲೂ ಹೆಚ್ಚಿನ ಬೇಡಿಕೆ ಬರುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.