ಬದಿಯಡ್ಕ: ಕಾಸರಗೋಡು ಜಿಲ್ಲೆಯಲ್ಲಿ ಅಡಿಕೆಯು ಪ್ರಮುಖ ವಾಣಿಜ್ಯ ಬೆಳೆ. ಈ ಜಿಲ್ಲೆಯ ಅಡಿಕೆ ಕೃಷಿಕರು ಇಲ್ಲಿನ ಜೀವನಾಡಿ. ಅವರು ಕೂಲಿ ಕಾರ್ಮಿಕರ ಕೊರತೆ, ಕಾಡುಪ್ರಾಣಿಗಳ ಉಪಟಳ, ಪ್ರಾಕೃತಿಕ ಅನಾನುಕೂಲತೆ, ಬರಗಾಲ ಮೊದಲಾದ ಅನೇಕ ಸಮಸ್ಯೆಗಳಿಂದ ಬಳಲುತ್ತಿದ್ದಾರೆ. ಕೃಷಿ ನಾಶಕ್ಕೆ ನೀಡುವ ಪರಿಹಾರವೂ ಬಹಳಷ್ಟು ಕಡಿಮೆ ಇದೆ. ಅಡಿಕೆ ಕೃಷಿಕರ ಉತ್ಪಾದನಾ ವೆಚ್ಚಗಳನ್ನು ನಿಭಾಯಿಸಲು ಅಡಿಕೆಗೆ ಪ್ರತೀ ಕಿಲೋಗ್ರಾಂಗೆ ಕನಿಷ್ಠ 500 ರೂಪಾಯಿ ಧಾರಣೆ ದೊರೆಯಬೇಕು' ಎಂದು ಕೇರಳ ರಾಜ್ಯ ಪ್ರತಿಪಕ್ಷ ಮುಖಂಡ ವಿ ಡಿ ಸತೀಶನ್ ಹೇಳಿದರು.
ಅವರು ಗುರುವಾರ ಬದಿಯಡ್ಕದ ಶ್ರೀಗುರುಸದನದಲ್ಲಿ ನಡೆದ ಅಡಿಕೆ ಬೆಳೆಗಾರರ ಸಂಗಮವನ್ನು ಉದ್ಘಾಟಿಸಿ ಮಾತನಾಡಿದರು.
ಕಳೆದ ಮಾರ್ಚ್ ತಿಂಗಳಲ್ಲಿ ಕೊಟ್ಟಾಯಂನಲ್ಲಿ ನಡೆದ ಕೇರಳ ರಾಜ್ಯ ಯುಡಿಎಫ್ ಸಮಿತಿ ತೀರ್ಮಾನದಂತೆ ಕೊಟ್ಟಾಯಂನಲ್ಲಿ ರಬ್ಬರ್ ಬೆಳೆಗಾರರ ಸಂಗಮ, ತೃಶೂರಿನಲ್ಲಿ ತೆಂಗು ಬೆಳೆಗಾರರ ಸಂಗಮ, ಪಾಲಕ್ಕಾಡಿನಲ್ಲಿ ಕರಿಮೆಣಸು ಬೆಳೆಗಾರರ ಸಂಗಮ ನಡೆಸಿ ಅವರ ಸಂಕಷ್ಟಗಳಿಗೆ ಪರಿಹಾರ ಕಂಡುಕೊಳ್ಳುವ ಬಗ್ಗೆ ವಿಮರ್ಶೆ ಮಾಡಲಾಗಿದೆ. ಇದೀಗ ಅನೇಕ ನಿಮಿತ್ತಗಳಿಂದ ಸಂಕಷ್ಟ ಅನುಭವಿಸುತ್ತಿರುವ ಕಾಸರಗೋಡಿನ ಅಡಿಕೆ ಕೃಷಿಕರ ಸಂಗಮ ನಡೆದಿದೆ. ಉದ್ಯೋಗ ಖಾತರಿಯ ಕಾರ್ಮಿಕರನ್ನು ಅಡಿಕೆ ಕೃಷಿಯ ಕೆಲಸಗಳಿಗೂ ವಿಸ್ತರಿಸುವ ಮೂಲಕ ಕೂಲಿ ಕಾರ್ಮಿಕರ ಸಮಸ್ಯೆಯನ್ನು ನಿಭಾಯಿಸಬಹುದು. ಸರ್ಕಾರವು ಕಾಡುಪ್ರಾಣಿಗಳ ಉಪಟಳದ ನಿಯಂತ್ರಣಕ್ಕೆ ಸೂಕ್ತ ಪರಿಹಾರ ಕಂಡುಕೊಳ್ಳಬೇಕು. ಇಲ್ಲಿನ ಅಡಿಕೆ ಕೃಷಿಕರ ಸಹಕಾರಕ್ಕಾಗಿ ಹಾಗೂ ಅವರ ಹಿತರಕ್ಷಣೆಗಾಗಿ ಬದಿಯಡ್ಕವನ್ನು ಕೇಂದ್ರೀಕರಿಸಿ ಅಡಿಕೆ ಕೃಷಿಕರ ಬೋರ್ಡ್ ನಿರ್ಮಾಣವಾಗಬೇಕು' ಎಂದು ಅವರು ಹೇಳಿದರು.
ಯುಡಿಎಫ್ ಜಿಲ್ಲಾಧ್ಯಕ್ಷ ಸಿ.ಟಿ.ಅಹಮ್ಮದಾಲಿ ಸಭೆಯ ಅಧ್ಯಕ್ಷತೆ ವಹಿಸಿದ್ದರು. ರಾಜ್ಯ ಸಂಚಾಲಕ ಎಂ ಎಂ ಹಸನ್, ಸಂಸದ ರಾಜ್‍ಮೋಹನ್ ಉಣ್ಣಿತ್ತಾನ್, ಜಿಲ್ಲಾ ಸಂಚಾಲಕ ಎಂ. ಗೋವಿಂದನ್ ನಾಯರ್, ಸ್ವತಂತ್ರ ಕೃಷಿಕರ ಸಂಘದ ರಾಜ್ಯ ಕಾರ್ಯದರ್ಶಿ ಅಬ್ದುಲ್ಲ, ಮಾಜಿ ಮುಖ್ಯ ಸಚೇತಕ ಕೇರಳ ಕಾಂಗ್ರೆಸ್ ಮುಖಂಡ ಥಾಮಸ್ ಉಣ್ಣಿಯಾಡನ್, ಡಿಸಿಸಿ ಅಧ್ಯಕ್ಷ ಪಿ.ಕೆ.ಫೈಸಲ್, ಮುಸ್ಲಿಂ ಲೀಗ್ ಜಿಲ್ಲಾಧ್ಯಕ್ಷ ಕಲ್ಲಟ್ರ ಮಾಹಿನ್ ಹಾಜಿ, ಕಾಸರಗೋಡು ಶಾಸಕ ಎನ್.ಎ.ನೆಲ್ಲಿಕುನ್ನು, ಮಂಜೇಶ್ವರ ಶಾಸಕ ಎಕೆಎಂ ಅಶ್ರಫ್, ಮಾಜಿ ಶಾಸಕ ಕೆ.ಪಿ.ಕುಂಞÂಕಣ್ಣನ್, ಮುಸ್ಲಿಂ ಲೀಗ್ ಜಿಲ್ಲಾ ಕಾರ್ಯದರ್ಶಿ ಎ. ಅಬ್ದುಲ್ ರಹಿಮಾನ್, ಕೇರಳ ಕಾಂಗ್ರೆಸ್‍ನ ಜೆಟೊ ಜೋಸೆಫ್, ಆರ್‍ಎಸ್‍ಪಿ ಕೇಂದ್ರ ಸಮಿತಿ ಸದಸ್ಯ ಹರೀಶ್ ಬಿ.ನಂಬ್ಯಾರ್, ಸಿಎಂಪಿ ಕಾರ್ಯದರ್ಶಿ ವಿ.ಕೆ.ರವೀಂದ್ರನ್, ಮಾಹಿನ್ ಕೇಳೋಟ್, ಹಕೀಮ್ ಕುನ್ನಿಲ್, ಮುನೀರ್ ಹಾಜಿ, ಆಂಟಕ್ಸ್ ಅಲಕ್ಸ್ ಪಿ.ಪಿ., ಅಡಿಯೋಡಿ ಜೋರ್ಜ್ ಬಂದಡ್ಕ, ಮಧು ಮಾಣಿಯಾಟ್, ಕಲ್ಲಗ ಚಂದ್ರಶೇಖರ ರಾವ್ ಮಾತನಾಡಿದರು.