ನವದೆಹಲಿ: ಪ್ರಯಾಣಿಕ ಓರ್ವ ಸಿಬ್ಬಂದಿಯನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿ ಹಲ್ಲೆ ನಡೆಸಿರುವ ಘಟನೆ ಗೋವಾ-ದೆಹಲಿ ನಡುವಿನ ಏರ್ ಇಂಡಿಯಾ ವಿಮಾನದಲ್ಲಿ ನಡೆದಿದೆ.
ಏರ್ ಇಂಡಿಯಾ ವಿಮಾನ ಸಂಖ್ಯೆ AI882ರಲ್ಲಿ ಘಟನೆ ನಡೆದಿದ್ದು ಪ್ರಕರಣ ಸಂಬಂಧ ಆರೋಪಿಯನ್ನು ದೆಹಲಿಯಲ್ಲಿ ಪೊಲೀಸ್ ವಶಕ್ಕೆ ಒಪ್ಪಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ಧಾರೆ.
ವರ್ತನೆ ಪ್ರಶ್ನಿಸಿದ್ದಕ್ಕೆ ಹಲ್ಲೆ
ಈ ಕುರಿತು ಪ್ರತಿಕ್ರಿಯಿಸಿರುವ ಏರ್ ಇಂಡಿಯಾ ವಕ್ತಾರರು AI882ನಲ್ಲಿ ಮೇ 29ರಂದು ಪ್ರಯಾಣಿಕನೊಬ್ಬನು ಮೊದಲಿಗೆ ಅನುಚಿತವಾಗಿ ವರ್ತಿಸಲು ಶುರು ಮಾಡಿದ್ದಾನೆ. ಇದನ್ನು ಪ್ರಶ್ನಿಸಿದ ಸಿಬ್ಬಂದಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ ಬಳಿಕ ಅವರ ಮೇಲೆ ಹಲ್ಲೆ ನಡೆಸಿದ್ದಾನೆ.
ದೆಹಲಿಯ್ಲಲಿ ವಿಮಾನ ಲ್ಯಾಂಡ್ ಆದ ನಂತರವೂ ಪ್ರಯಾಣಿಕ ಅನುಚಿತವಾಗಿ ವರ್ತಿಸುವುದನ್ನು ಮುಂದುವರೆಸಿದ. ಈ ಬಗ್ಗೆ ನಾವು ವಿಮಾನ ನಿಲ್ದಾಣದ ನಿಯಂತ್ರಕರಿಗೆ ದೂರು ನೀಡಿ ಬಳಿಕ ಪೊಲೀಸರಿಗೆ ಒಪ್ಪಿಸಿದ್ದೇವೆ ಎಂದು ಏರ್ ಇಂಡಿಯಾ ವಕ್ತಾರರು ತಿಳಿಸಿದ್ದಾರೆ.