ನೂತನ ಸೆಂಟ್ರಲ್ ವಿಸ್ತಾ ನಿರ್ಮಾಣಗೊಂಡಿದ್ದು, ನೂತನ ಸಂಸತ್ ಭವನವನ್ನು ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಇಂದು ಲೋಕಾರ್ಪಣೆಗೊಳಿಸಿದ್ದಾರೆ. ನೂತನ ಸಂಸತ್ ಭವನ ಉದ್ಘಾಟನೆಗೊಂಡ ಹಿನ್ನೆಲೆಯಲ್ಲಿ 96 ವರ್ಷ ಇತಿಹಾಸವಿರುವ ಸಂಸತ್ ಭವನಕ್ಕೆ ‘ಹಳೆಯ’ ವಿಶೇಷಣ ಸೇರಿಕೊಂಡಿದೆ. ಅಷ್ಟು ಮಾತ್ರವಲ್ಲದೆ ವಿಶಿಷ್ಟ ವಾಸ್ತುಶಿಲ್ಪ ಮತ್ತು ಐತಿಹಾಸಿಕ ತೀರ್ಮಾನಗಳಿಗೆ ಸಾಕ್ಷಿಯಾದ ಅದು ಇತಿಹಾಸದ ಪುಟ ಸೇರುತ್ತಿದೆ.
ಎಲ್ಲರ ಗಮನ ಸೆಂಟ್ರಲ್ ವಿಸ್ತಾದ ಉದ್ಘಾಟನೆಯ ಸುತ್ತ ನೆಟ್ಟಿರುವಾಗ ಹಿಂದಿನ ಸಂಸತ್ ಭವನದ ವಿಶೇಷತೆಗಳ ಕುರಿತು ಬೆಳಕು ಚೆಲ್ಲುವ ಪ್ರಯತ್ನ ಇಲ್ಲಿದೆ.
ಬ್ರಿಟೀಷ್ ಆಳ್ವಿಕೆಯ ಕಾಲದಲ್ಲಿ ಜನವರಿ 18, 1927 ರಂದು ಅಂದಿನ ವೈಸರಾಯ್ ಲಾರ್ಡ್ ಇರ್ವಿನ್‌ರವರಿಂದ ಕೌನ್ಸಿಲ್ ಹೌಸ್ (ಸಂಸತ್ ಭವನ) ಉದ್ಘಾಟನೆಗೊಂಡಿತು. ಅದರ ಆಕರ್ಷಕ ವೃತ್ತಾಕಾರದ ವಿನ್ಯಾಸ ಮತ್ತು ಮೊದಲ ಮಹಡಿಯಲ್ಲಿ 144 ಕೆನೆ ಮರಳುಗಲ್ಲಿನ ಕಂಬಗಳ ಮೂಲಕ ಕಣ್ಮನ ಸೆಳೆಯಿತು. ಸುಮಾರು ಆರು ಎಕರೆ ವಿಸ್ತೀರ್ಣದಲ್ಲಿ 560 ಅಡಿ ವ್ಯಾಸ ಮತ್ತು ಒಂದು ಮೈಲಿನ ಮೂರನೇ ಒಂದು ಭಾಗದಷ್ಟು ಸುತ್ತಳತೆ ಹೊಂದಿರುವ ಈ ಕಟ್ಟಡವನ್ನು ಸರ್ ಹರ್ಬರ್ಟ್ ಬೇಕರ್ ಅವರು ಸರ್ ಎಡ್ವಿನ್ ಲುಟ್ಯೆನ್ಸ್ ಅವರೊಂದಿಗೆ ವಿನ್ಯಾಸಗೊಳಿಸಿದರು.
ಬ್ರಿಟಿಷರು ಕೋಲ್ಕತ್ತಾದಿಂದ ದೆಹಲಿಗೆ ಆಡಳಿತವನ್ನು ವರ್ಗಾವಣೆಗೊಳಿಸಿದ ನಂತರ 1920ರಲ್ಲಿ ಕೌನ್ಸಿಲ್ ಹೌಸ್ ಸ್ಥಾಪನೆಗೆ ಅಡಿಗಲ್ಲು ಹಾಕಿದ್ದರು. ವೈಸರಾಯ್ ಹೌಸ್ (ಈಗ ರಾಷ್ಟ್ರಪತಿ ಭವನ) ಮತ್ತು ನಾರ್ತ್ ಬ್ಲಾಕ್ ಮತ್ತು ಸೌತ್ ಬ್ಲಾಕ್ ‘ನವದೆಹಲಿ’ಯ ಕೇಂದ್ರಬಿಂದುವಾಗಿ ಈ ಸಂಸತ್ ಭವನ ಇರುವಂತೆ ಲುಟ್ಯೆನ್ಸ್ ಮತ್ತು ಬೇಕರ್ ವಿನ್ಯಾಸಗೊಳಿಸಿದ್ದರು.
ಭಾರತದ ಭವಿಷ್ಯದ ಬಗ್ಗೆ ಸ್ಪಷ್ಟ ಮುನ್ನೋಟ ಹೊಂದಿದ್ದ ಕ್ರಾಂತಿಕಾರಿ ಹೋರಾಟಗಾರರಾದ ಭಗತ್ ಸಿಂಗ್ ಮತ್ತು ಬಟುಕೇಶ್ವರ್ ದತ್ ದೇಶದ ಗಮನ ಸೆಳೆಯಲು ಬಾಂಬ್ ಎಸೆದಿದ್ದು ಇದೇ ಭವನದಲ್ಲಿ. ಬ್ರಿಟಿಷರು ಜಾರಿಗೆ ತಂದಿದ್ದ ಪಬ್ಲಿಕ್ ಸೇಪ್ಟಿ ಬಿಲ್ ಮತ್ತು ಟ್ರೇಡ್ ಡಿಸ್ಪೂಟ್ ಬಿಲ್ ಎಂಬ ಕರಾಳ ಕಾನೂನುಗಳನ್ನು ವಿರೋಧಿಸಿ, ಕಿವುಡರಿಗೆ ಕೇಳಿಸುವಂತಾಗಬೇಕಾದರೆ ದೊಡ್ಡ ದನಿಯಲ್ಲಿಯೇ ಮಾತನಾಡಬೇಕು ಎಂಬ ಆಶಯದಿಂದ ಸಂಸತ್ತಿನಲ್ಲಿ ಯಾವುದೇ ಸಾವು ನೋವು ಉಂಟಾಗದಂತೆ ಬಾಂಬ್ ಸ್ಪೋಟಿಸಿ ಬಂಧನಕ್ಕೆ ಒಳಗಾಗಿದ್ದರು. ಆನಂತರ ಕೋರ್ಟಿನ ವಿಚಾರಣೆಯ ವೇಳೆ ತಮ್ಮ ಹರಿತದ ಮಾತುಗಳ ಮೂಲಕ ದೇಶದ ಗಮನ ಸೆಳೆದಿದ್ದು ಇತಿಹಾಸ.
ಈ ಕಟ್ಟಡವು ಭಾರತದ ಸ್ವಾತಂತ್ರ್ಯದ ಅರುಣೋದಯವನ್ನು ಕಂಡಿದೆ. ಆಗಸ್ಟ್ 15, 1947 ರಂದು ಮೊದಲ ಪ್ರಧಾನಿ ಜವಾಹರಲಾಲ್ ನೆಹರು ಅವರು ಮಾಡಿದ ಐತಿಹಾಸಿಕ ‘ಟ್ರಿಸ್ಟ್ ವಿತ್ ಡೆಸ್ಟಿನಿ’ ಭಾಷಣಕ್ಕೆ ಸಾಕ್ಷಿಯಾಗಿದೆ. ಅಂದಿನಿಂದ ಇಂದಿನವರೆಗೂ ಸಂಸತ್ ಭವನ ವಿದ್ವತ್‌ಪೂರ್ಣ ಚರ್ಚೆಗಳಿಗೆ, ನೂರಾರು ಮಸೂದೆಗಳ ಮಂಡನೆಗೆ ಸಾಕ್ಷಿಯಾಗಿದೆ.
ಪ್ರತಿಷ್ಠಿತ ಕಟ್ಟಡಗಳಲ್ಲೊಂದಾಗಿರುವ ನಮ್ಮ ಸಂಸತ್ ಭವನ ದೇಶದ ಶಕ್ತಿ ಕೇಂದ್ರ. ದೇಶದ ಸಾಕ್ಷಿಪ್ರಜ್ಞೆಯಂತೆ ಸ್ಥಾಯಿಯಾಗಿ ನಿಂತಿರುವ ಈ ಕಟ್ಟಡ ಎಲ್ಲರನ್ನೂ ಒಳಗೊಳ್ಳುವ ದೂರದೃಷ್ಟಿತ್ವದ ಪ್ರತೀಕ. ಪ್ರತಿ ಬಾರಿ ಲೋಕಸಭೆ ಚುನಾವಣೆಯಲ್ಲಿ ಆಯ್ಕೆ ಮಾಡಿ ಕಳುಹಿಸಿದ ಸಂಸದರು ಇದೇ ಭವನದಲ್ಲಿ ಕುಳಿತುಕೊಂಡು ಕಾನೂನಿನ ನೀತಿ ನಿಯಮಗಳನ್ನು ರೂಪಿಸಿದ್ದಾರೆ. ಅನೇಕ ಐತಿಹಾಸಿಕ ನಿರ್ಧಾರಗಳಿಗೆ ಸಾಕ್ಷಿಯಾಗಿದ್ದಾರೆ. ನಮ್ಮ ಸಂಸತ್ತಿನ ವೃತ್ತಾಕಾರದ ಕಲ್ಲು ಕಟ್ಟಡದ ರಚನೆಯು ಎಲ್ಲರನ್ನೂ ಒಳಗೊಂಡು ಇಡೀ ಜಗತ್ತಿನ ಅತಿ ದೊಡ್ಡ ಪ್ರಜಾಪ್ರಭುತ್ವವನ್ನು ಸಂಕೇತಿಸುತ್ತದೆ.