ಬದಿಯಡ್ಕ: ಉಕ್ಕಿನಡ್ಕದಲ್ಲಿರುವ ಕಾಸರಗೋಡು ಸರ್ಕಾರಿ ವೈದ್ಯಕೀಯ ಕಾಲೇಜು ಆಸ್ಪತ್ರೆ ಕಳೆದ ಒಂದು ವಾರಗಳಿಂದ ನೀರಿಲ್ಲದೆ ಪರದಾಡುತ್ತಿದೆ. ಇದರೊಂದಿಗೆ ಒಪಿ ವಿಭಾಗ ಮುಚ್ಚುವ ಹಂತದಲ್ಲಿದೆ. ವೈದ್ಯಕೀಯ ಕಾಲೇಜಿಗೆ ಅಡ್ಕಸ್ಥಳ ನದಿಯಿಂದ ಹಾಗೂ ಜಲ ಪ್ರಾಧಿಕಾರದ ವ್ಯಾಪ್ತಿಯ ಪಂಪ್ ಹೌಸ್ ನಿಂದ ನೀರು ಸರಬರಾಜು ಮಾಡಲಾಗುತ್ತಿತ್ತು. ಆದರೆ ನದಿ ಬತ್ತಿ ಹೋಗಿದ್ದರಿಂದ ಕಳೆದೊಂದು ವಾರದಿಂದ ವೈದ್ಯಕೀಯ ಕಾಲೇಜಿಗೆ ನೀರು ಪೂರೈಕೆ ಸ್ಥಗಿತಗೊಂಡಿದೆ. ಇಲ್ಲಿ ದಿನವೊಂದರಲ್ಲಿ 10,000 ಲೀಟರ್ ನೀರು ಬೇಕಾಗಿ ಬರುತ್ತದೆ ಎಂದು ಆಸ್ಪತ್ರೆಯ ಅಧಿಕೃತರು ತಿಳಿಸಿದ್ದಾರೆ. ಆದರೆ, ನೀರು ಸರಬರಾಜು ನಿಂತ ಕಾರಣ ಬದಲಿ ವ್ಯವಸ್ಥೆಗೂ ಸಂಬಂಧಪಟ್ಟವರು ಮಧ್ಯಸ್ಥಿಕೆ ವಹಿಸಿಲ್ಲ ಎಂಬ ಆರೋಪ ಕೇಳಿಬಂದಿದೆ. ವೈದ್ಯಕೀಯ ಕಾಲೇಜಿನ ಒ.ಪಿ. ವಿಭಾಗಕ್ಕಿ ನಿತ್ಯ 200 ರಷ್ಟು ರೋಗಿಗಳು ಭೇಟಿ ನೀಡುತ್ತಾರೆ ಎಂಬುದೂ ಉಲ್ಲೇಖಾರ್ಹ.
ಶೌಚಾಲಯ ಬಳಕೆಗೂ ನೀರಿಲ್ಲ. ಆಸ್ಪತ್ರೆಯಲ್ಲಿ ಸ್ವಚ್ಛತೆಯ ಕೊರತೆಯಿಂದ ದುರ್ವಾಸನೆ ಬರುತ್ತಿದೆ. ವೈದ್ಯಕೀಯ ಕಾಲೇಜಿನಲ್ಲಿ ವೈದ್ಯರು ಸೇರಿದಂತೆ ಸುಮಾರು 75 ನೌಕರರಿದ್ದಾರೆ. ಆದರೆ ನೀರು ಪೂರೈಕೆ ಸ್ಥಗಿತಗೊಂಡಿರುವುದರಿಂದ ಹಲವರು ಕೆಲಸಕ್ಕೆ ತೆರಳಲು ಮುಂದಾಗಿಲ್ಲ.