ಬುಲ್ಧಾನ : ಮಹಾರಾಷ್ಟ್ರದ ಬುಲ್ಧಾನಾ ಜಿಲ್ಲೆಯ ಸಮೃದ್ಧಿ ಎಕ್ಸ್‌ಪ್ರೆಸ್ ಹೆದ್ದಾರಿಯಲ್ಲಿ ಇಂದು (ಸೋಮವಾರ) ಬೆಳಗ್ಗೆ ಕಾರೊಂದು ರಸ್ತೆ ವಿಭಜಕಕ್ಕೆ ಡಿಕ್ಕಿ ಹೊಡೆದ ಪರಿಣಾಮ ಬೆಂಕಿ ಹೊತ್ತಿಕೊಂಡು ಮೂವರು ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಹೆದ್ದಾರಿಯ ದೇಲ್‌ಗಾಂವ್ ಕೋಲ್ ಗ್ರಾಮದ ಬಳಿ ಮುಂಜಾನೆ ಅಪಘಾತ ಸಂಭವಿಸಿದೆ. ಕಾರಿನಲ್ಲಿದ್ದ ಇಬ್ಬರು ಸಜೀವ ದಹನಗೊಂಡಿದ್ದರೆ, ಇನ್ನೊಬ್ಬರು ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ ಎಂದು ಅಧಿಕಾರಿ ತಿಳಿಸಿದ್ದಾರೆ.
ಪ್ರಾಥಮಿಕ ಮಾಹಿತಿಯಂತೆ ಕಾರಿನಲ್ಲಿ ಡೀಸೆಲ್ ಕ್ಯಾನ್ ಇತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಕಳೆದ ಬುಧವಾರ, ಔರಂಗಾಬಾದ್ ಜಿಲ್ಲೆಯ ಹೆದ್ದಾರಿಯಲ್ಲಿ ಮಲ್ಟಿ-ಯುಟಿಲಿಟಿ ವೆಹಿಕಲ್ (ಎಂಯುವಿ) ಡಿವೈಡರ್‌ಗೆ ಡಿಕ್ಕಿ ಹೊಡೆದ ಪರಿಣಾಮ ನಾಲ್ವರು ಮೃತಪಟ್ಟಿದ್ದರು.
ಮುಂಬೈ-ನಾಗ್ಪುರ ಸಮೃದ್ಧಿ ಎಕ್ಸ್‌ಪ್ರೆಸ್ ರಸ್ತೆಯಲ್ಲಿ ಡಿಸೆಂಬರ್ 2022 ರಿಂದ ಈ ವರ್ಷದ ಏಪ್ರಿಲ್ ಅಂತ್ಯದವರೆಗೆ ಒಟ್ಟು 39 ಜನರು ಮೃತಪಟ್ಟಿದ್ದು, 143 ಜನರು ಗಾಯಗೊಂಡಿದ್ದಾರೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದರು.