ತ್ರಿಶ್ಯೂರ್ : ಸಾಮಾನ್ಯವಾಗಿ ಪುರುಷರಷ್ಟೇ ಮಾಡುವ ದೇವಸ್ಥಾನದ ಅರ್ಚಕ ಮತ್ತು ತಂತ್ರಗಾರಿಕೆ (ತಂತ್ರಿ) ವೃತ್ತಿಯನ್ನು ಆರಿಸಿಕೊಳ್ಳುವ ಮೂಲಕ ಕೇರಳದ ತಾಯಿ ಮಗಳ ಜೋಡಿಯು ಸದ್ದಿಲ್ಲದೇ ಇತಿಹಾಸ ಸೃಷ್ಟಿಸಿದೆ.
ಜ್ಯೋತ್ಸ್ನಾ ಪದ್ಮನಾಭನ್(24) ಮತ್ತು ಅವರ ತಾಯಿ ಅರ್ಚನಾ ಕುಮಾರಿ (47) ಅವರು ತಮ್ಮ ಪೂರ್ವಿಕರು ಪೂಜೆ ಮಾಡುತ್ತಿದ್ದ ದೇವಸ್ಥಾನದಲ್ಲಿ ಅರ್ಚಕ ವೃತ್ತಿ ನಡೆಸುತ್ತಿದ್ದಾರೆ.
ಪುರುಷರಿಗಷ್ಟೇ ಸೀಮಿತವಾಗಿದ್ದ ಈ ವೃತ್ತಿಯನ್ನು ಕೈಗೆತ್ತಿಕೊಂಡ ಕುರಿತು ಪ್ರತಿಕ್ರಿಯಿಸಿರುವ ಇಬ್ಬರೂ, 'ಲಿಂಗ ತಾರತಮ್ಯ ಹೋಗಲಾಡಿಸುವ ಸಲುವಾಗಿ ಅಥವಾ ಸಮಾಜದಲ್ಲಿರುವ ಲಿಂಗಾಧಾರಿತ ಏಕಮಾದರಿಯನ್ನು ತೊಡೆದುಹಾಕುವ ಸಲುವಾಗಿ ತಾವು ಈ ವೃತ್ತಿಯನ್ನು ಆಯ್ದುಕೊಂಡಿಲ್ಲ. ಏನನ್ನೂ ಸಾಬೀತುಪಡಿಸುವ ಉದ್ದೇಶ ನಮಗೆ ಇಲ್ಲ. ಕೇವಲ ಭಕ್ತಿ ಮತ್ತು ಆಸಕ್ತಿಯ ಕಾರಣಕ್ಕಾಗಿ ನಾವು ಈ ವೃತ್ತಿ ಆಯ್ದುಕೊಂಡಿದ್ದೇವೆ' ಎಂದು ಹೇಳಿದ್ದಾರೆ.
ತ್ರಿಶ್ಯೂರ್ ಜಿಲ್ಲೆಯ ಅರ್ಚಕ ಕುಟುಂಬಕ್ಕೆ ಸೇರಿದ ಜ್ಯೋತ್ಸ್ನಾ ಅವರು, ವೇದಾಂತ ಮತ್ತು ಸಾಹಿತ್ಯದಲ್ಲಿ (ಸಂಸ್ಕೃತ) ಸ್ನಾತ್ತಕೋತ್ತರ ಪದವಿ ಪಡೆದಿದ್ದಾರೆ. ತಮ್ಮ ಏಳನೇ ವಯಸ್ಸಿನಿಂದಲೇ ವೇದಾಭ್ಯಾಸ ಆರಂಭಿಸಿದ ಅವರು ಅರ್ಚಕರಾಗಬೇಕು ಎಂದು ಚಿಕ್ಕವಯಸ್ಸಿನಿಂದಲೇ ಕನಸು ಕಂಡಿದ್ದರ ಕುರಿತು ವಿವರಿಸುತ್ತಾರೆ. 'ನನ್ನ ತಂದೆ ಪದ್ಮನಾಭನ್ ನಂಬೂದಿರಿಪಾಡ್ ಅವರು ಪೂಜೆ, ತಂತ್ರಗಾರಿಕೆ ನಡೆಸುತ್ತಿದ್ದುದನ್ನು ನೋಡುತ್ತಾ ಬೆಳೆದೆ. ಇದು ಮಹಿಳೆಯರು ಆಯ್ದುಕೊಳ್ಳಬಹುದಾದ ವೃತ್ತಿಯಲ್ಲ ಎಂದು ಕಾಲಕ್ರಮೇಣ ನನಗೆ ತಿಳಿಯಿತು. ತಂದೆ ಬಳಿ ನನ್ನ ಇಂಗಿತ ವ್ಯಕ್ತಪಡಿಸಿದ ಬಳಿಕ ಅವರು ನನಗೆ ಬೆಂಬಲ ನೀಡಿದರು' ಎಂದು ಹೇಳುತ್ತಾರೆ.
ಮಗಳಿಂದ ಪ್ರೇರಣೆಗೊಂಡ ತಾಯಿ
'ಮಗಳು ಪೂಜೆ, ಶಾಸ್ತ್ರಗಳ ಅಭ್ಯಾಸದಲ್ಲಿ ತೊಡಗಿದ್ದಾಗ ನನಗೂ ಆ ವಿದ್ಯೆಗಳಲ್ಲಿ ಆಸಕ್ತಿ ಮೂಡಿ ಅಭ್ಯಾಸ ನಡೆಸಿದೆ' ಎಂದು ಅರ್ಚನಾ ಅವರು ಹೇಳಿದ್ದಾರೆ. ದೇವಸ್ಥಾನದಲ್ಲಿ ಅರ್ಚಕ ವೃತ್ತಿ ಆರಂಭಿಸುವ ಮೊದಲು ಅರ್ಚನಾ ಅವರು ಗೃಹಿಣಿಯಾಗಿದ್ದರು. ಕಲಿಕೆಗೆ ಪತಿಯಿಂದ ಸಾಕಷ್ಟು ಉತ್ತೇಜನ ದೊರಕಿದೆ ಎಂದು ಹೇಳಿದ್ದಾರೆ.