ಕಾಸರಗೋಡು: ಜನರಲ್ ಆಸ್ಪತ್ರೆಯಲ್ಲಿ ಲಿಫ್ಟ್ ದುರಸ್ತಿಯಾಗದೆ ಸಂಕಷ್ಟ ಅನುಭವಿಸುತ್ತಿರುವ ಮಧ್ಯೆ ಇಲ್ಲಿನ ಸಿಟಿ ಸ್ಕ್ಯಾನ್ ಯಂತ್ರವೂ ಹಾಳಾಗಿದ್ದು, ಬಡ ರೋಗಿಗಳ ಪಾಲಿಗೆ ಸಂಕಷ್ಟ ಎದುರಾಗಿದೆ. ಲಿಫ್ಟ್ ಹಾಳಾಗಿ ಹಲವು ತಿಂಗಳು ಕಳೆದಿದ್ದು, ಇದರ ದುರಸ್ತಿಗೆ ಮೀನಾಮೇಷ ಎಣಿಸುತ್ತಿರುವ ಮಧ್ಯೆ ಇಲ್ಲಿನ ಸಿಟಿ ಸ್ಕ್ಯಾನ್ ಯಂತ್ರ ಏ. 27ರಿಂದ ಚಟುವಟಿಕೆ ಸ್ಥಗಿತಗೊಂಡಿದೆ.
ಸಿಟಿ ಸಕ್ಯಾನ್‍ಗಾಗಿ ರೋಗಿಗಳು ದುಬಾರಿ ಹಣ ತೆತ್ತು ಖಾಸಗಿ ಲ್ಯಾಬ್‍ಗಳನ್ನು ಆಶ್ರಯಿಸಬೇಕಾಗಿದೆ.ಈ ಹಿಂದೆಯೂ ಹಲವು ಬಾರಿ ಸಿಟಿ ಸ್ಕ್ಯಾನ್ ಯಂತ್ರ ಹಾಳಾಗುತ್ತಿದ್ದರೂ, ಒಂದೆರಡು ದಿವಸಗಳಲ್ಲಿ ದುರಸ್ತಿಕಾರ್ಯ ನಡೆಸಲಾಗುತ್ತಿತ್ತು. ಈ ಬಾರಿ ಯಂತ್ರ ಹಾಳಾಗಿ ವಾರಗಳಾದರೂ ಇದರ ದುರಸ್ತಿಗೆ ಸಂಬಂಧಪಟ್ಟವರು ಮುಂದಾಗಲಿಲ್ಲ. ಬಡ ರೋಗಿಗಳೇ ಹೆಚ್ಚಾಗಿ ಆಶ್ರಯಿಸುತ್ತಿರುವ ಜನರಲ್ ಆಸ್ಪತ್ರೆಯಲ್ಲಿ ಮೂಲಸೌಕರ್ಯ ಒದಗಿಸಲು ಸರ್ಕಾರ ಮುಂದಾಗದಿರುವ ಬಗ್ಗೆ ಸಾರ್ವಜನಿಕರು ತಮ್ಮ ಅಸಮಧಾನ ವಯಕ್ತಪಡಿಸಿದ್ದಾರೆ.
ಸಿಟಿ ಸ್ಕ್ಯಾನರ್‍ನ ಟ್ಯೂಬ್ ನಿಷ್ಕ್ರಿಯಗೊಂಡಿದ್ದು, ಇದರ ದುರಸ್ತಿಕೆಲಸಗಳಿಗೆ ತಿರುವನಂತಪುರದಿಂದ ತಜ್ಞರು ಆಗಮಿಸಬೇಕಾಗಿದೆ. ಲಕ್ಷಾಂತರ ರೂ. ವೆಚ್ಚ ತಗುಲುವುದರಿಂದ ಸ್ಥಳೀಯವಾಗಿ ಯಾವುದೂ ನಡೆಸಲಾಗದ ಸ್ಥಿತಿಯಿರುವುದಾಗಿ ಆಸ್ಪತ್ರೆ ಅಧಿಕಾರಿಗಳು ತಿಳಿಸುತ್ತಾರೆ.