ಗುವಾಹಟಿ: ಮಣಿಪುರ ರಾಜಧಾನಿ ಇಂಫಾಲದಲ್ಲಿ ಸೋಮವಾರ ಮತ್ತೆ ಉದ್ವಿಗ್ನ ವಾತಾವರಣ ನಿರ್ಮಾಣವಾಗಿದ್ದು, ಕರ್ಫ್ಯೂ ಅವಧಿಯನ್ನು ವಿಸ್ತರಣೆ ಮಾಡಲಾಗಿದೆ. ಮುಂಜಾನೆ 5ರಿಂದ ಸಂಜೆ 4ರ ವರೆಗೆ ಕರ್ಫ್ಯೂ ಸಡಿಲಿಸಿದ ಕಾರಣ ಅಂಗಡಿಗಳನ್ನು ತೆರೆಯಲಾಗಿತ್ತು.
ಘಟನೆ ಬೆನ್ನಲ್ಲೇ ಪೂರ್ವ ಇಂಫಾಲ ಜಿಲ್ಲಾಧಿಕಾರಿ ಶಮಿಮ್ ಅಹ್ಮದ್ ಶಾ ಅವರು ಕರ್ಪ್ಯೂ ಅವಧಿಯನ್ನು ಮತ್ತೆ ಬೆಳಿಗ್ಗೆ 5ರಿಂದ ಮಧ್ಯಾಹ್ನ 1ಗಂಟೆ ವರೆಗೆ ವಿಸ್ತರಿಸಿ ಆದೇಶ ಹೊರಡಿಸಿದರು. ಘಟನೆಗೆ ಸಂಬಂಧಿಸಿದಂತೆ ಈವರೆಗೆ ಮೂರನ್ನು ಬಂಧಿಸಲಾಗಿದೆ ಮೂಲಗಳು ತಿಳಿಸಿವೆ.
ಬಹುಸಂಖ್ಯಾತ ಮೈತೇಯಿ ಸಮುದಾಯ ಮತ್ತು ಕೂಕಿ ಬುಡಕಟ್ಟು ಸಮುದಾಯದ ನಡುವೆ ಮೇ 3ರಿಂದ ಸಂಘರ್ಷ ಏರ್ಪಟ್ಟ ನಂತರ ರಾಜಧಾನಿಯಲ್ಲಿ ಸೇನೆಯನ್ನು ನಿಯೋಜಿಸಲಾಗಿದೆ. ಹಿಂಸಾಚಾರದಿಂದಾಗಿ ರಾಜ್ಯದಲ್ಲಿ ಈವರೆಗೆ 73 ಮಂದಿ ಸಾವನ್ನಪ್ಪಿದ್ದು, 35,000 ಮಂದಿ ಸ್ಥಳಾಂತರಗೊಂಡಿದ್ದಾರೆ. ಸುಮಾರು 2000 ಮನೆಗಳು ಸುಟ್ಟು ಬೂದಿಯಾಗಿವೆ.
ಇಂಟರ್ನೆಟ್ ಸ್ಥಗಿತ ಮುಂದುವರಿಕೆ
ಮೊಬೈಲ್ ಮತ್ತು ಇಂಟರ್‌ನೆಟ್ ಬಳಕೆಗೆ ಹೇರಿದ್ದ ನಿರ್ಬಂಧವನ್ನು ಮತ್ತೆ
ಮೇ 26ರ ವರೆಗೆ ವಿಸ್ತರಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಸಾಮಾಜಿಕ ಜಾಲತಾಣದಲ್ಲಿ ದ್ವೇಷಪೂರಿತ ಹಾಗೂ ಪ್ರಚೋದನಕಾರಿ ಸಂದೇಶ ಹರಡುವ ಸಾಧ್ಯತೆ ಇದೆ. ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವ ದೃಷ್ಟಿಯಿಂದ ಸರ್ಕಾರ ಈ ತೀರ್ಮಾನ ಕೈಗೊಂಡಿದೆ ಎಂದು ಮಣಿಪುರದ ಗೃಹ ಇಲಾಖೆಯ ಆಯುಕ್ತ ಎಚ್. ಗಯಾನ್ ಪ್ರಕಾಶ್ ಸ್ಪಷ್ಟಪಡಿಸಿದ್ದಾರೆ.
ಸರಕು ಸಾಗಣೆಗೆ ಅಡಚಣೆ
ಇಂಫಾಲವನ್ನು ದೇಶದ ಇತರೆಡೆಗೆ ಸಂಪರ್ಕಿಸುವ ರಾಷ್ಟ್ರೀಯ ಹೆದ್ದಾರಿ-2 ಅನ್ನು ಕೂಕಿ ಪ್ರತಿಭಟನಕಾರರು ಮೇ 4ರಿಂದ ಬಂದ್ ಮಾಡಿದ್ದಾರೆ. ಇದರಿಂದ ಅಗತ್ಯ ಸರಕುಗಳ ಸಾಗಣೆಗೆ ತೀವ್ರ ತೊಡಕುಂಟಾಗಿದೆ. ಇಂಫಾಲ ಮತ್ತು ಜಿರಿಬಮ್ ಮಾರ್ಗದ ಮೂಲಕ ಟ್ರಕ್‌ಗಳ ಸಂಚಾರಕ್ಕೆ ಅನುವು ಮಾಡಿಕೊಡಲಾಗಿದೆ. ಆದರೆ ಈ ಮಾರ್ಗದಲ್ಲಿ ಸಾಗಣೆ ವೆಚ್ಚ ಹೆಚ್ಚಾಗುತ್ತಿದೆ ಎಂದು ವರ್ತಕರು ಅಸಮಾಧಾನ ಹೊರಹಾಕುತ್ತಿದ್ದಾರೆ.
ಈ ಮಧ್ಯೆ ಕೂಕಿ ಸಮುದಾಯವು ಸರ್ಕಾರದೊಂದಿಗೆ ಮಾತುಕತೆಗೆ ನಿರಾಕರಿಸಿದ್ದು, ಹಿಂಸಾಚಾರ ಪೀಡಿತ ರಾಜ್ಯದಲ್ಲಿ ಪರಿಸ್ಥಿತಿ ಬೂದಿ ಮುಚ್ಚಿದ ಕೆಂಡದಂತಾಗಿದೆ. ತತ್‌ಕ್ಷಣಕ್ಕೆ ಶಾಂತಿ ಸ್ಥಾಪನೆಯಾಗುವ ಸಾಧ್ಯತೆ ಕ್ಷೀಣಿಸಿದೆ.